

ಚೆನ್ನೈ: ಕರೊನಾ ವೈರಸ್ ಭೀತಿಗೆ ಇಡೀ ದೇಶವೇ ಸ್ತಬ್ಧವಾಗಿರುವ ಸಮಯದಲ್ಲಿ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಲ್ಲಿ ಅರಿವು ಮೂಡಿಸುವ ಪ್ರಯತ್ನಕ್ಕೆ ಕೈಹಾಕಿದ್ದು, ಅದರಂತೆಯೇ ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ಈ ಸಂದರ್ಭದಲ್ಲಿ ಕೆಲವೊಂದಿಷ್ಟು ಉಪಯುಕ್ತ ಸಲಹೆಗಳನ್ನು ಹಂಚಿಕೊಂಡಿದ್ದಾರೆ.
ತಮ್ಮ ಟ್ವಿಟರ್ ಪೇಜ್ನಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಕಮಲ್, ಮನೆಯಲ್ಲೇ ಉಳಿಯುವುದರ ಪ್ರಾಮುಖ್ಯತೆಯನ್ನು ವಿವರಿಸಿದ್ದಾರೆ. ದಯವಿಟ್ಟು ಎಲ್ಲರೂ ಮನೆಯಲ್ಲೇ ಉಳಿಯಿರಿ. ಅಗತ್ಯವಿದ್ದಾಗ ಮಾತ್ರ ಮನೆಯಿಂದ ಹೊರಬನ್ನಿ. ಆದಷ್ಟು ಏಕಾಂತವಾಗಿ ಕಳೆಯುವುದರೊಂದಿಗೆ ಕರೊನಾ ವೈರಸ್ ಹರಡುವುದನ್ನು ತಡೆಗಟ್ಟಬಹುದು ಎಂದಿದ್ದಾರೆ.
ಮಾತು ಮುಂದುವರಿಸಿದ ಕಮಲ್, ನಿಮ್ಮಲ್ಲಿ ಪಾಸಿಟಿವ್ ಕರೊನಾ ವೈರಸ್ ಕಂಡುಬಂದರೆ, ಮರಣ ಬಂದೇ ಬರುತ್ತದೆ ಎಂದರ್ಥವಲ್ಲ. ಯಾರಿಗೆ ಪ್ರತಿರೋಧಕ ವ್ಯವಸ್ಥೆ ಕುಗ್ಗಿರುತ್ತದೋ ಅವರಿಗೆ ತುಸು ಗಂಭೀರ ಪರಿಣಾಮ ಬೀರಲಿದೆ. ಆದರೆ, ಯಾರೂ ಹೆದರುವ ಅವಶ್ಯಕತೆ ಇಲ್ಲ. ಇಂತಹ ಸಂದರ್ಭದಲ್ಲಿ ಮನೆಯಲ್ಲೇ ಉಳಿಯಿರಿ. ಆದಷ್ಟು ಈ ಅವಕಾಶವನ್ನು ಬಳಸಿಕೊಂಡು ಮನೆಯವರೊಂದಿಗೆ ಸಮಯ ಕಳೆಯಿರಿ. ಪ್ರೀತಿ ಪಾತ್ರರೊಂದಿಗೆ ಫೋನ್ ಮೂಲಕ ಮಾತನಾಡಿ. ಆದರೆ, ಹೊರಗಡೆ ಭೇಟಿಯಾಗೋಣ ಎಂದವರಿಗೆ ನೋ ಎಂದು ಹೇಳಿ. ವೈರಸ್ ನಮಗೆ ಬರುವುದೇ ಇಲ್ಲವೆಂಬ ಅತಿಯಾದ ನಂಬಿಕೆ ಬೇಡ. ನಾವು ವೈರಸ್ ಅನ್ನು ರವಾನಿಸುವ ವಸ್ತುವಾಗಬಾರದೆಂದು ಸಲಹೆ ನೀಡಿದರು.
ಮತ್ತೊಂದು ವಿಡಿಯೋದಲ್ಲಿ ವಿರಾಮ ಅವಕಾಶ ಕಳೆಯಲು ಟಿಪ್ಸ್ ನೀಡಿರುವ ಕಮಲ್ ಹಾಸನ್, ಮನೆಯಲ್ಲಿಯೇ ಸಿನಿಮಾ ವೀಕ್ಷಿಸಿ. ಪುಸ್ತಕವನ್ನು ತೆಗದುಕೊಂಡು ಓದಿ. ನಿಮ್ಮ ಮಕ್ಕಳಿಗಾಗಿ ಆನ್ಲೈನ್ ಕೋರ್ಸ್ಗಳಿಗೆ ಚಂದದಾರರಾಗಿ. ಮುಂಬರುವ ಎರಡು ವಾರ ಬಹಳ ಮುಖ್ಯವೆಂದು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿರುವ ಜನತಾ ಕರ್ಪ್ಯೂಗೆ ಕಮಲ್ ಸಹಮತ ವ್ಯಕ್ತಪಡಿಸಿದ್ದಾರೆ. ಸಹ ನಟರಾದ ವಿಜಯ್, ಅಜಿತ್ ಮತ್ತು ರಜಿನಿಕಾಂತ್ ಸೇರಿದಂತೆ ಇತರರು ಮಾರ್ಚ್ 22ರಂದು ಬೆಳಗ್ಗೆ 7 ರಿಂದ ರಾತ್ರಿ 9 ಗಂಟೆವರೆಗೆ ಮನೆಯಲ್ಲೇ ಉಳಿಯುವಂತೆ ಹುರಿದುಂಬಿಸಿದ್ದಾರೆ. (ಏಜೆನ್ಸೀಸ್)