ಕೆರೆ ನಿರ್ಮಾಣ ಪ್ರೋತ್ಸಾಹಕ್ಕೆ ಕಾಮೇಗೌಡರೇ ರಾಯಭಾರಿ

Ramesgowda
Published on

ಬೆಂಗಳೂರು: ಸ್ವಂತ ಹಣದಲ್ಲಿ 14 ಕೆರೆಗಳನ್ನು ನಿರ್ವಿುಸಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಶಬ್ಬಾಸ್​ಗಿರಿ ಪಡೆದ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಕಾಮೇಗೌಡರನ್ನು ರಾಜ್ಯದಲ್ಲಿ ಕೆರೆಗಳ ರಾಯಭಾರಿ ರೀತಿ ಬಳಸಿಕೊಳ್ಳುವ ಸಾಧ್ಯತೆ ಇದೆ. ಅಧಿಕಾರಿಗಳ ಮಟ್ಟದಲ್ಲಿ ಈ ಬಗ್ಗೆ ಚರ್ಚೆ ನಡೆದಿದ್ದು, ಕಾರ್ಯಕ್ರಮಕ್ಕೆ ಒಂದು ರೂಪ ನೀಡಿ ತೀಮಾನ ಹೊರಬೀಳಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿಯವರು ಕಾಮೇಗೌಡರ ಹೆಸರನ್ನು ಪ್ರಸ್ತಾಪಿಸಿ, ಅವರ ಪರಿಸರ ಪ್ರೇಮ ಕೊಂಡಾಡಿದ್ದರು. ಬಳಿಕ ದೇಶಾದ್ಯಂತ ಅವರ ಹೆಸರು ಚರ್ಚೆಯಾಗಿತ್ತು. ಕೇಂದ್ರದ ಹಲವು ಸಚಿವರು ಕಾಮೇಗೌಡರ ಚಟುವಟಿಕೆ ಬಗ್ಗೆ ವಿವರಣೆ ಪಡೆದುಕೊಂಡಿದ್ದರು. ರಾಜ್ಯ ಸರ್ಕಾರ ಕಾಮೇಗೌಡರಿಗೆ ಈ ಹಿಂದೆ ರಾಜೊ್ಯೕತ್ಸವ ಪ್ರಶಸ್ತಿ ನೀಡಿ ತನ್ನ ಜವಾಬ್ದಾರಿ ಇಷ್ಟು ಮಾತ್ರ ಎಂದು ಸುಮ್ಮನಿತ್ತು. ಇದೀಗ ಕೇಂದ್ರ ಸರ್ಕಾರವೇ ಪ್ರಸ್ತಾಪಿಸಿ ದೇಶದ ಗಮನ ಸೆಳೆಯುತ್ತಿರುವಾಗ, ತಾನೂ ಏನಾದರೂ ಮಾಡಬೇಕೆಂದು ಮುಂದಾಗಿದೆ.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಕಾಮೇಗೌಡರಿಗೆ ಜೀವಿತಾವಧಿವರೆಗೂ ಉಚಿತ ಪ್ರಯಾಣದ ಬಸ್ ಪಾಸ್ ವಿತರಿಸಿದೆ. ಮುಂದೆ ಸರ್ಕಾರದಿಂದ ಕಾಮೇಗೌಡರಿಗೆ ನಿವೇಶನ- ಮನೆ ನೀಡುವ ಬಗ್ಗೆ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆದಿದೆ. ಇದನ್ನು ಮುಖ್ಯಮಂತ್ರಿಗಳ ಗಮನಕ್ಕೂ ತರಲಾಗಿದೆ. ಶೀಘ್ರವೇ ಪ್ರಕ್ರಿಯೆಗಳು ನಡೆದಲ್ಲಿ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆ ಹೆಚ್ಚಿದೆ.

ಅಲ್ಲದೆ, 80ರ ಇಳಿವಯಸ್ಸಿನ ಕಾಮೇಗೌಡರನ್ನು ಕೆರೆಗಳ ಬ್ರಾಂಡ್ ಅಂಬಾಸಿಡರ್ ರೀತಿ ಬಳಸಿ ಕೆರೆ ರಚನೆ, ಪುನಶ್ಚೇತನದಂತಹ ಚಟುವಟಿಕೆಯಲ್ಲಿ ಸಂಘ- ಸಂಸ್ಥೆಗಳನ್ನು ತೊಡಗಿಸುವ ಇಚ್ಛೆ ಸರ್ಕಾರಕ್ಕಿದೆ. ಹೀಗಾಗಿ ಕಾಮೇಗೌಡರು ಇಚ್ಚಿಸುವ ಸ್ಥಳದಲ್ಲಿ ಕೆರೆ ನಿರ್ವಿುಸಲು ಅವಕಾಶ ನೀಡುವುದು ಹಾಗೂ ಕಾಮೇಗೌಡ ಕಾರ್ಯವನ್ನು ರಾಜ್ಯಾದ್ಯಂತ ಇನ್ನಷ್ಟು ಪ್ರಚಾರ ಮಾಡಲು ಉದ್ದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ. ಕರೊನಾ ತಗ್ಗಿದ ನಂತರ ಈ ಸಂಬಂಧ ಚಟುವಟಿಕೆಗಳು ಆರಂಭವಾಗುವ ಸಾಧ್ಯತೆ ಇದೆ. ಈ ನಡುವೆ ಕೇಂದ್ರದ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕರೆ ಮಾಡಿ ಕಾಮೇಗೌಡರ ಕುರಿತು ಚರ್ಚೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net