

ನಿಜ, 1886 ಜನವರಿ 1. ಅನೇಕ ಭಕ್ತರು ಶ್ರೀರಾಮಕೃಷ್ಣರ ದರ್ಶನವನ್ನು ಪಡೆಯಲು ಬಂದಿದ್ದರು. ಶ್ರೀರಾಮಕೃಷ್ಣರ ಗಂಟಲಿನಲ್ಲಿ ನೋವು ಕಾಣಿಸತೊಡಗಿತ್ತು. ಕ್ರಮೇಣ ಅವರು ಊಟವನ್ನೂ ಮಾಡಲು ಆಗದೆ, ಶರೀರವು ಬಳಲಿ ಕೃಶವಾಗಿತ್ತು. ಅಂದು ಅವರ ಆರೋಗ್ಯದಲ್ಲಿ ತುಸು ಚೇತರಿಕೆ ಕಂಡಿದ್ದರಿಂದ ಮಧ್ಯಾಹ್ನ ಹೊರಬಂದರು. ಅವರು ನಡೆದು ಬರುತ್ತಿರುವುದನ್ನು ಕಂಡ ಭಕ್ತರಿಗೆ ಆನಂದ ಉಂಟಾಯಿತು. ಕಲ್ಕತ್ತೆಯ ಪ್ರಸಿದ್ಧ ನಾಟಕಕಾರ ಗಿರೀಶ್ ಚಂದ್ರ ಘೊಷ್ ರಾಮಕೃಷ್ಣರ ಪರಮ ಭಕ್ತ. ಅವನ ಬಳಿ ಬಂದು ರಾಮಕೃಷ್ಣರು, ‘ಏನು, ನಾನು ದೇವರು! ಅವತಾರಪುರುಷ! ಎಂದು ಸಾರುತ್ತಿರುವೆ ಎಂದು ಕೇಳಿದೆ. ಅಂಥದ್ದೇನು ಕಂಡೆ?’ ಎಂದರು.
ಗಿರೀಶನು ಮಂಡಿಯೂರಿ ಗದ್ಗದಿತನಾಗಿ, ವಾಲ್ಮೀಕಿ, ವ್ಯಾಸ ಮಹರ್ಷಿಗಳಂತಹ ಮಹಾಮಹಿಮರು ರಾಮನಾಗಿ, ಕೃಷ್ಣನಾಗಿ ಅವತರಿಸಿ ಬಂದಾಗ ತಮ್ಮನ್ನು ಸಂಪೂರ್ಣವಾಗಿ ವರ್ಣಿಸಲು ಸಾಧ್ಯವಾಗಲಿಲ್ಲ. ಈಗ ಅವರೇ ರಾಮಕೃಷ್ಣರಾಗಿ ಬಂದಿದ್ದಾರೆ. ಇನ್ನು ಈ ಪಾಮರ ಏನು ತಾನೇ ಹೇಳಲು ಸಾಧ್ಯ ಎಂದು ನಮಸ್ಕರಿಸಿದ. ಅವನ ನಿಷ್ಕಲ್ಮಶ, ಸರಳ ಭಕ್ತಿಯನ್ನು ಕಂಡ ರಾಮಕೃಷ್ಣರು ಭಾವಾವಿಷ್ಟರಾದರು. ಭಾವಸಮಾಧಿಗೆ ಹೋದರು. ಆ ಉನ್ನತ ಭಾವದಲ್ಲಿ ಭಕ್ತರನ್ನು ಹರಸಿದರು. ಅತ್ಯುನ್ನತ ಆಧ್ಯಾತ್ಮಿಕದ ಭಾವದಲ್ಲಿ ಆಡಿದ ಮಾತುಗಳು ವಿದ್ಯುಚ್ಛಕ್ತಿಯಂತೆ ಎಲ್ಲರ ಮನಸ್ಸನ್ನು ಉನ್ನತ ಮಟ್ಟಕ್ಕೆ ಏರಿಸಿತು. ಅಲ್ಲೆಲ್ಲಾ ಒಂದು ದಿವ್ಯ ವಾತಾವರಣ ನಿರ್ವಣವಾಯಿತು.
ಅಲ್ಲಿ ನೆರದಿದ್ದ ಪ್ರತಿಯೊಬ್ಬ ಭಕ್ತನಿಗೂ ಅಲೌಕಿಕ ಅನುಭವಗಳ ಅನುಭವ. ಆನಂದ, ಹಷೋದ್ಗಾರ ಮಾಡುತ್ತ ಭಕ್ತರು ಕುಣಿದರು. ಇನ್ನು ಕೆಲವರು ಆ ಆನಂದ ತಡೆಯಲಾರದೆ ಮೂರ್ಛೆಹೋದರು. ಮತ್ತೆ ಕೆಲವರಿಗೆ ಅವರ ಕುಂಡಲಿನಿ ಶಕ್ತಿಯು ಜಾಗೃತವಾಗುತ್ತಿರುವಂತೆ ಅನುಭವವಾಯಿತು. ಅಂದು ಭಕ್ತರು ಬೇಡಿದ ವರಗಳನ್ನು ಭಗವಾನ್ ರಾಮಕೃಷ್ಣರು ನೀಡಿದರು, ಹರಸಿದರು.