ಕಡಲತಡಿಯ ಬದುಕಿನ ‘ಕಲ್ಜಿಗ’: ಸುಮನ್ ಸುವರ್ಣ ನಿರ್ದೇಶನದ ಚಿತ್ರದ ಟ್ರೇಲರ್ ಬಿಡುಗಡೆ

kaljiga
Published on

ಬೆಂಗಳೂರು: ತುಳುವಿನ ‘ಗಿರ್ಗಿಟ್’,‘ಸರ್ಕಸ್’, ‘ಗಮ್ಜಾಲ್’ ಸಿನಿಮಾಗಳಲ್ಲಿ ಕಾರ್ಯನಿರ್ವಹಿಸಿದ್ದ ಸುಮನ್ ಸುವರ್ಣ ಮೊದಲ ಬಾರಿಗೆ ‘ಕಲ್ಜಿಗ’ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಕಡಲ ಕಿನಾರೆಯಲ್ಲಿ ನಡೆಯುವ ಕಥೆಯನ್ನ ಆಧಾರಿಸಿ ಚಿತ್ರ ಮಾಡಲಾಗಿದ್ದು, ಅರ್ಜುನ್ ಕಾಪಿಕಾಡ್ ನಾಯಕನಾಗಿದ್ದು, ಸುಶ್ಮಿತಾ ಭಟ್ ನಾಯಕಿಯಾಗಿದ್ದಾರೆ. ಮಂಗಳೂರಿನಲ್ಲಿ ಇತ್ತೀಚೆಗೆಷ್ಟೇ ಚಿತ್ರದ ಟ್ರೇಲರ್ ಬಿಡುಗಡೆಗೊಳಿಸಲಾಯಿತು. ಶಾಸಕರಾದ ವೇದವ್ಯಾಸ ಕಾಮತ್, ಅಶೋಕ್ ಕುಮಾರ್ ರೈ, ಮಾಜಿ ಸಚಿವ ರಮಾನಾಥ್ ರೈ, ಹಿರಿಯ ಕಲಾವಿದ ದೇವದಾಸ್ ಕಾಪಿಕಾಡ್, ರಂಗಕರ್ಮಿ ವಿಜಯಕುಮಾರ್ ಕೊಡಿಯಾಲ್ಬೈಲ್ ಇದ್ದರು. ಯಕ್ಷಗಾನ, ದೈವರಾಧನೆ, ಕಡಲ ತಡಿಯ ಬದುಕು ಹೀಗೆ ನಾನಾ ದೃಶ್ಯಗಳನ್ನು ಟ್ರೇಲರ್‌ನಲ್ಲಿ ತೋರಿಸಲಾಗಿದೆ. ಅರ್ಜುನ್ ಹಾಗೂ ಸುಶ್ಮಿತಾ ಭಟ್ ಚೆಂದವಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಚಿತ್ರೀಕರಣ ಪೂರ್ಣಗೊಂಡು, ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳನ್ನು ಚಿತ್ರತಂಡ ಶುರು ಮಾಡಿಕೊಂಡಿದೆ. ಸೆ.13ರಂದು ರಾಜ್ಯ ಸೇರಿ ಮುಂಬಯಿ, ಗಲ್ಫ್ ರಾಷ್ಟ್ರಗಳಲ್ಲಿ ಸಿನಿಮಾ ಬಿಡುಗಡೆಗೆ ಸಿದ್ಧತೆ ನಡೆಸಲಾಗುತ್ತಿದೆ. ಹಂಸಲೇಖ ಸಂಗೀತ-ಸಾಹಿತ್ಯ, ಸಚಿನ್ ಶೆಟ್ಟಿ ಛಾಯಾಗ್ರಹಣ, ಪ್ರಸಾದ್ ಕೆ.ಶೆಟ್ಟಿ ಹಿನ್ನೆಲೆ ಸಂಗೀತ, ಯಶ್ವಿನ್ ಕೆ.ಶೆಟ್ಟಿಗಾರ್ ಸಂಕಲನ ಚಿತ್ರಕ್ಕಿದೆ. ಗೋಪಿನಾಥ್ ಭಟ್, ಮಾನಸಿ ಸುಧೀರ್, ಜ್ಯೋತಿಶ್ ಶೆಟ್ಟಿ, ವಿಜಯ್ ಶೋಭರಾಜ್ ಪಾವೂರು, ಶ್ಲಾಘಾ ಸಾಲಿಗ್ರಾಮ ತಾರಾಗಣದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net