

ಕಲಬುರಗಿ: ಇಂದು(ಮಂಗಳವಾರ) ಬೆಳಗ್ಗೆ ಪ್ರಾರ್ಥನೆ ಮುಗಿಸಿ ತರಗತಿಯ ಕೊಠಡಿಗೆ ಮಕ್ಕಳು ಬರುತ್ತಿದ್ದಂತೆ ಶಾಲೆಯ ಗೋಡೆ ಕುಸಿದಿದ್ದು, ಮಕ್ಕಳು ಚೀರಾಡುತ್ತಾ ಭಯದಲ್ಲೇ ಹೊರಗೆ ಓಡಿ ಬಂದ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಆನೂರದಲ್ಲಿ ಸಂಭವಿಸಿದೆ.
ಅದೃಷ್ಟವಶಾತ್ ಪ್ರಾಣಾಪಯದಿಂದ ವಿದ್ಯಾರ್ಥಿಗಳು ಪಾರಾಗಿದ್ದಾರೆ. ಮಕ್ಕಳು ಬೆಂಚಿನ ಬಳಿ ಕೂತಿದ್ದರೆ ಭಾರೀ ಅನಾಹುತವೇ ಸಂಭವಿಸುತ್ತಿತ್ತು. ಜಾಗದಲ್ಲಿ ಕೂರಲು ಅರೆಕ್ಷಣ ತಡವಾಗಿದ್ದರಿಂದ ಅಪಾಯ ತಪ್ಪಿದೆ.
ಆನೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 12 ಕೊಠಡಿಗಳ ಪೈಕಿ 8 ಕೊಠಡಿ ಶಿಥಿಲಾವಸ್ಥೆಯಿಂದ ಕೂಡಿವೆ. ಹೊಸ ಕಟ್ಟಡ ನಿರ್ಮಾಣ ಆಗಬೇಕೆಂದು ಶಿಕ್ಷಣ ಇಲಾಖೆಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಆದರೂ ಇನ್ನೂ ಕ್ರಮ ಕೈಗೊಂಡಿಲ್ಲ. ಮಕ್ಕಳ ಪ್ರಾಣದ ಜತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.