

ಬಾಲಿವುಡ್ ಕಂಡ ಅತ್ಯಂತ ಜನಪ್ರಿಯ ದಂಪತಿ ಎಂದರೆ ಅದು ಅಜಯ್ ದೇವಗನ್ ಮತ್ತು ಕಾಜೋಲ್. ಆದರೆ, ಅಜಯ್ ಅವರನ್ನು ಮದುವೆಯಾಗುವುದಕ್ಕಿಂತ ಮುನ್ನ ಕಾಜೋಲ್‌ಗೆ ಅಕ್ಷಯ್ ಕುಮಾರ್ ಮೇಲೆ ಕ್ರಶ್ ಆಗಿತ್ತು ಎಂಬ ವಿಷಯ ಗೊತ್ತಾ? ಗೊತ್ತಿರುವುದಕ್ಕೆ ಸಾಧ್ಯವಿಲ್ಲ ಬಿಡಿ. ಏಕೆಂದರೆ, ಈ ವಿಷಯ ಕಾಜೋಲ್‌ನ ಆಪ್ತಮಿತ್ರ ಮತ್ತು ನಿರ್ದೇಶಕ ಕರಣ್ ಜೋಹಾರ್‌ಗೆ ಮಾತ್ರ ಗೊತ್ತಿತ್ತು ಮತ್ತು ಅವರು ಈ ವಿಷಯವನ್ನು ಎಷ್ಟೋ ವರ್ಷಗಳ ನಂತರ ಬಹಿರಂಗಪಡಿಸಿದ್ದಾರೆ.
ಒಂದು ಕಾಲಕ್ಕೆ ಅಕ್ಷಯ್ ಕುಮಾರ್ ಮೇಲೆ ಕಾಜೋಲ್‌ಗೆ ಸಖತ್ ಕ್ರಶ್ ಆಗಿತ್ತಂತೆ. ರಿಷಿ ಕಪೂರ್ ಅಭಿನಯದ ‘ಹೆನ್ನಾ’ ಚಿತ್ರದ ಸಮಾರಂಭವೊಂದರಲ್ಲಿ ಅಕ್ಷಯ್ ಕುಮಾರ್ ಅವರನ್ನು ಮಾತನಾಡಿಸಬೇಕು ಎಂದು ಕಾಜೋಲ್ ಸಾಕಷ್ಟು ಕಷ್ಟಪಟ್ಟರಂತೆ. ಆದರೆ, ಅಂದು ಭೇಟಿ ಸಾಧ್ಯವಾಗಲಿಲ್ಲ ಎಂದು ನೆನಪಿಸಿಕೊಂಡಿದ್ದಾರೆ ಕರಣ್ ಜೋಹಾರ್.
‘ಆ ಸಂದರ್ಭದಲ್ಲಿ ಅಕ್ಷಯ್ ಕುಮಾರ್ ಅವರನ್ನು ಕಾಜೋಲ್‌ಗೆ ಭೇಟಿ ಮಾಡಿಸುವುದಕ್ಕೆ ನಾನು ಪ್ರಯತ್ನಿಸಿದ್ದೆ. ಆದರೆ, ಕಾರಣಾಂತರಗಳಿಂದ ಆಗಲಿಲ್ಲ. ಇದರಿಂದ ಒಂದು ಅನುಕೂಲವಾಗಿದ್ದೇನೆಂದರೆ, ನಾನು ಮತ್ತು ಕಾಜೋಲ್ ಇಬ್ಬರೂ ಒಳ್ಳೆಯ ಸ್ನೇಹಿತರಾದೆವು. ಅದೇ ಸ್ನೇಹದಿಂದ, ಕಾಜೋಲ್ ಅವರನ್ನು ಕೆಲವು ಚಿತ್ರಗಳಲ್ಲಿ ನಿರ್ದೇಶಿಸುವ ಅವಕಾಶವೂ ಸಿಕ್ಕಿತು’ ಎಂದು ಕರಣ್ ಹೇಳಿಕೊಂಡಿದ್ದಾರೆ.
ಅಕ್ಷಯ್ ಕುಮಾರ್ ಮೇಲೆ ಕಾಜೋಲ್ ಅವರಿಗೆ ಕ್ರಶ್ ಇದ್ದರೂ, ಅದನ್ನು ಅವರು ಎಲ್ಲೂ ಬಹಿರಂಗಪಡಿಸಲಿಲ್ಲ. ಹಾಗೆಯೇ ಅಕ್ಷಯ್ ಕುಮಾರ್ ಅವರನ್ನು ಬೆನ್ನತ್ತಿಯೂ ಹೋಗಲಿಲ್ಲ. ತಮ್ಮ ವೃತ್ತಿಜೀವನದ ಬಗ್ಗೆ ಹೆಚ್ಚು ಗಮನಹರಿಸಿ ಒಳ್ಳೆಯ ಹೆಸರು ಸಂಪಾದಿಸಿದರು. ನಂತರ ಅಜಯ್ ದೇವಗನ್ ಅವರನ್ನು ಮದುವೆಯಾಗಿ, ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.
ಅಂದಹಾಗೆ, ಅಕ್ಷಯ್ ಕುಮಾರ್ ಮತ್ತು ಕಾಜೋಲ್ ಕೇವಲ್ ಒಂದು ಚಿತ್ರಗಳಲ್ಲಿ ಜೋಡಿಯಾಗಿ ನಟಿಸಿದ್ದಾರೆ. ಅದೇ ಯಶ್ ಚೋಪ್ರಾ ನಿರ್ಮಾಣದ ‘ಯೇ ದಿಲ್ಲಗಿ’.