ಖರ್ಗೆ ಟ್ರಸ್ಟ್‌ಗೆ 5 ಎಕರೆ ಜಮೀನು ಮಂಜೂರು ಕ್ರಮ ಬದ್ದ ನಾರಾಯಣಸ್ವಾಮಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಬಾಬು

Published on

ಬೆಂಗಳೂರು:
ಖರ್ಗೆ ಅವರ ಟ್ರಸ್ಟ್ ಗೆ ಭೂಮಿ ನೀಡಿರುವ ಬಗ್ಗೆ ಛಲವಾದಿ ನಾರಾಯಣಸ್ವಾಮಿ ಸುಳ್ಳು ಮಾಹಿತಿ ನೀಡಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಮುಖ್ಯಸ್ಥರಾದ ರಮೇಶ್ ಬಾಬು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿಎ ನಿವೇಶನಗಳನ್ನು ಹರಾಜು ಮಾಡಲು ಅವಕಾಶವಿಲ್ಲ. ಬಿಜೆಪಿ ನಾಯಕರು ನಿಯಮ ಗೊತ್ತಿದ್ದೂ ಹರಾಜು ಹಾಕಬೇಕು ಎಂದು ಹೇಳಿ ಜನರ ದಾರಿ ತಪ್ಪಿಸಲಾಗುತ್ತಿದೆ ಎಂದರು.
ಜನಪ್ರತಿನಿಧಿಯಾದ ಅವರಿಗೆ ಸಿಎ ನಿವೇಶನ ಎಂದರೆ ಏನು, ಸಾಮಾನ್ಯ ನಿವೇಶನ ಎಂದರೆ ಏನು ಎಂಬುದು ತಿಳಿಯದಿರುವುದು ದುರಂತ ಹಾಗೂ ದುರದೃಷ್ಟಕರ ಎಂದರು.
1983ರಲ್ಲಿ ತಂದ ತಿದ್ದುಪಡಿ ಪ್ರಕಾರ ಬಿಡಿಎ ಮೂಲೆ ನಿವೇಶನಗಳನ್ನು ಮಂಜೂರು ಮಾಡುವಂತಿಲ್ಲ ಹರಾಜು ಮಾಡಬೇಕು ಎನ್ನುವ ನಿಯಮವಿದೆ. ಯಾವುದೇ ಕಾರಣಕ್ಕೂ ವ್ಯಕ್ತಿಗತವಾಗಿ ನಿವೇಶನಗಳನ್ನು ಪಡೆಯಲು ಆಗುವುದಿಲ್ಲ. ಇದನ್ನು ಸಂಘ, ಸಂಸ್ಥೆಗಳು ಮಾತ್ರ ಪಡೆಯಲು ಸಾಧ್ಯ ಎಂದರು.
ಅನೇಕ ವರ್ಷಗಳಿಂದ ಕೆಐಡಿಬಿಯಲ್ಲಿ ನ್ಯಾಯಯುತವಾಗಿ ಸಿಎ ನಿವೇಶನಗಳ ಹಂಚಿಕೆಯಾಗಿಲ್ಲ. ಬಿಡಿಎ ಸೇರಿದಂತೆ ಯಾರು, ಯಾರು ನಿವೇಶನಗಳನ್ನು ಅಭಿವೃದ್ದಿ ಪಡಿಸುತ್ತಾರೋ ಅವರೆಲ್ಲಾ ಸಿಎ ನಿವೇಶನಗಳನ್ನು ಹಂಚಿಕೆ ಮಾಡಬೇಕು. ಆದರೆ ಎಷ್ಟೋ ಕಡೆಗಳಲ್ಲಿ ನ್ಯಾಯಯುತ ಹಂಚಿಕೆ ಮಾಡಲಾಗಿಲ್ಲ ಎಂದರು.

ಖರ್ಗೆ ಸಹಾಯದಿಂದ ನಿವೇಶನ:
ಮೈಸೂರಿನ ಇನ್ಪೋಸಿಸ್ ಹಾಗೂ ಮಂಡ್ಯದ ಬೂದನಗೆರೆಯ ಬಳಿ ಕೈಗಾರಿಕಾ ನಿವೇಶನಗಳನ್ನು ಖರ್ಗೆ ಅವರ ಸಹಾಯದಿಂದ ಪಡೆದಿದ್ದಾರೆ. ನಾರಾಯಣಸ್ವಾಮಿ ಅವರು ಸಂಪುಟ ದರ್ಜೆ ಸಚಿವ ಸ್ಥಾನಮಾನವಿರುವ ಅಖಿಲ ಭಾರತ ರೈಲ್ವೇ ಗ್ರಾಹಕರ ವೇದಿಕೆಯ ಅಧ್ಯಕ್ಷರಾಗಿದ್ದರು. ಇದನ್ನು ಸಹ ಮಲ್ಲಿಕಾರ್ಜುನ ಖರ್ಗೆ ಅವರ ಶಿಫಾರಸ್ಸಿನ ಮೇರೆಗೆ ಕಾಂಗ್ರೆಸ್‌ನಲ್ಲಿದ್ದಾಗ ಪಡೆದಿದ್ದರು ಎಂದು ಬಾಬು ದೂರಿದರು.

ಕ್ರಮಬದ್ದವಾಗಿ ನಿವೇಶನ
ಸಿಎ ನಿವೇಶನ ಬಗ್ಗೆ ಪತ್ರಿಕಾ ಜಾಹೀರಾತು ಮತ್ತು ಕೆಐಡಿಬಿಯ ಅಧಿಕೃತ ವೆಬ್ ಸೈಟಿನಲ್ಲೂ ಮಾಹಿತಿ ನೀಡಲಾಗಿದೆ. 193 ಸಿಎ ನಿವೇಶನಗಳಿಗೆ 377.69 ಎಕರೆ ಪ್ರದೇಶವನ್ನು ಹಂಚಿಕೆ ಮಾಡಲು ಅರ್ಜಿ ಕರೆಯಲಾಗಿತ್ತು. 283 ಅರ್ಜಿಗಳು ಬಂದಿದ್ದವು. ಅರ್ಜಿ ಹಾಕುವಾಗ ಠೇವಣಿ ಮೊತ್ತವನ್ನು ಕಟ್ಟಿದ್ದಾರೆ. 20 ವರ್ಷಗಳ ಹಳೆಯ ಸಿದ್ದಾರ್ಥ ವಿಹಾರ ಟ್ರಸ್ಟ್‌ಗೆ 5 ಎಕರೆ ಮಂಜೂರು ಮಾಡಲಾಗಿದೆ. ಪ್ರಿಯಾಂಕ ಖರ್ಗೆ ಅವರು ಅಧಿಕಾರ ದುರುಪಯೋಗ ಮಾಡಿಕೊಂಡಿಲ್ಲ ಎಂದರು.

ಆರ್.ಅಶೋಕ್ ಅವರು ತಮ್ಮ ಟ್ರಸ್ಟಿಗೆ 13 ಎಕರೆ ಜಾಗ ಪಡೆದು ವಿವಾದದ ನಂತರ ವಾಪಸ್ ಮಾಡಿದ್ದರು. ನಾರಾಯಣ ಸ್ವಾಮಿ ಅವರು ವೈಯಕ್ತಿಕ ವಿಚಾರಗಳನ್ನು ತಂದು ರಾಜಕಾರಣ ಮಾಡುತ್ತಿದ್ದಾರೆ ಎಂದರು.

ಗುಜರಿ ವ್ಯಾಪಾರಿ ಲೇಹರ್ ಸಿಂಗ್
ಸಿಟಿ ಮಾರುಕಟ್ಟೆಯಲ್ಲಿ ಗುಜರಿ ವ್ಯಾಪಾರ ಮಾಡುತ್ತಿದ್ದ ಲೆಹರ್ ಸಿಂಗ್ ಅವರು 73 ಕೋಟಿಗಳ ಒಡೆಯ. ಅವರು ಹೇಗೆ ನಡೆದುಕೊಂಡು ಬಂದರು, ಹೇಗೆ ಪಕ್ಷ ಕಟ್ಟಿದರು ಎಂಬುದು ಗೊತ್ತಿದೆ ಎಂದು ಲೇವಡಿ ಮಾಡಿದರು.
ನಾನು ರಾಜಸ್ಥಾನದಿಂದ ಬಂದರು ಲೋಕಲ್ ಮನುಷ್ಯ ಎಂದು ಸೋನಿಯಾ ಗಾಂಧಿ ಅವರ ಬಗ್ಗೆ ಮಾತನಾಡಿದ್ದಾರೆ. ಇದು ಅವರಿಗೆ ಶೋಭೆ ತರುವುದಿಲ್ಲ ಎಂದರು.
ಲೆಹರ್ ಸಿಂಗ್ ಅವರು ಹಾಗೂ ನಾರಾಯಣಸ್ವಾಮಿ ಅವರು ಸಿದ್ದಾರ್ಥ ವಿಹಾರ ಸಂಸ್ಥೆ ಹೇಗೆ ಕೆಲಸ ಮಾಡುತ್ತದೆ ಎಂದು ಸಂಸ್ಥೆಗೆ ಭೇಟಿ ನೀಡಿ ತಿಳಿದುಕೊಳ್ಳಲಿ ಎಂದು ಸವಾಲು ಹಾಕಿದ್ದಾರೆ.

ಬಿಜೆಪಿಗೆ ಶೋಭೆ ತರುವುದಿಲ್ಲ
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಮಚಂದ್ರಪ್ಪ ಮಾತನಾಡಿ, ಪರಿಶಿಷ್ಟರ ಎಲ್ಲಾ ಸೌಲಭ್ಯಗಳನ್ನು ಖರ್ಗೆ ಅವರ ಕುಟುಂಬವೇ ಪಡೆದಿದೆ ಎನ್ನುವ ಆರೋಪ ಸರಿಯಿಲ್ಲ ಎಂದರು.
ದಲಿತ ನಾಯಕರಾಗಿ ಬೆಳೆಯುತ್ತಿರುವವರನ್ನು ದಲಿತ ನಾಯಕರನ್ನೇ ಇಟ್ಟುಕೊಂಡು ಹಣಿಯುವ ಕೆಲಸವನ್ನು ಬಿಜೆಪಿ ಮಾಡುತ್ತಿರುವುದು ಸರಿಯಲ್ಲ. ದಲಿತ ನಾಯಕರು ಬಿಜೆಪಿಗೆ ಹೋಗಿ ಬಲಿಯಾಗಬೇಡಿ. ಅಂಬೇಡ್ಕರ್ ಅನುಯಾಯಿಗಳು ಏಕೆ ಬಿಜೆಪಿಗೆ ಹೋಗಿ ನಾಶವಾಗುತ್ತಿದ್ದಾರೆ. ಇನ್ನಾದರೂ ನಾರಾಯಣಸ್ವಾಮಿಗಳು ಬುದ್ದಿ ಕಲಿಯಲಿ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸಮೂರ್ತಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net