

ರಾಜ್ಯ ಕಾಂಗ್ರೆಸ್, ಬಿಜೆಪಿಗಳಿಗೀಗ ಅಗ್ನಿ ಪರೀಕ್ಷೆ ಕಾಲ. ಸಿಎಂ ಸ್ಥಾನದ ಆಕಾಂಕ್ಷೆ ಕುರಿತಂತೆ ಪಕ್ಷದ ನಾಯಕರ ದಿನಕ್ಕೊಂದು ಹೇಳಿಕೆ ಕಾಂಗ್ರೆಸ್ಗೆ ಮುಜುಗರ ತರಿಸಿದ್ದರೆ, ಬಿಜೆಪಿ ಅಂತಃಕಲಹದ ಬೇಗುದಿಗೆ ಸಿಲುಕಿದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಎರಡೂ ಪಕ್ಷಗಳ ಹೈಕಮಾಂಡ್ ರಾಜ್ಯ ನಾಯಕರಿಗೆ ಶಿಸ್ತಿನ ಪಾಠ ಆರಂಭಿಸಿವೆ.
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಮುಖ್ಯಮಂತ್ರಿ ಸ್ಥಾನದ ಕುರಿತು ಲಂಗುಲಗಾಮಿಲ್ಲದ ಹೇಳಿಕೆ ನೀಡಿ ಪಕ್ಷವನ್ನು ಮುಜುಗರಕ್ಕೆ ಸಿಲುಕಿಸಿರುವ ಹಿರಿಯ ನಾಯಕರು ಹಾಗೂ ಸಚಿವರ ವಿರುದ್ಧ ಕಾಂಗ್ರೆಸ್ ಹೈಕಮಾಂಡ್ ಕೆಂಡಾಮಂಡಲವಾಗಿದೆ. ಸಿಎಂ ಸ್ಥಾನದ ಆಕಾಂಕ್ಷಿತರ ಹೇಳಿಕೆ ಕುರಿತು ರಾಜ್ಯ ಕಾಂಗ್ರೆಸ್ನಿಂದ ಎರಡು ಪ್ರತ್ಯೇಕ ದೂರು ಸಲ್ಲಿಕೆಯಾದ ಬೆನ್ನಲ್ಲೇ ಎಐಸಿಸಿ ಇಂತಹ ಒಂದೇ ಒಂದು ಹೇಳಿಕೆಗಳನ್ನು ಇನ್ನು ಮುಂದೆ ಸಹಿಸಲ್ಲ ಎಂಬ ಗಂಭೀರ ಎಚ್ಚರಿಕೆ ನೀಡಿ ರಾಜ್ಯ ನಾಯಕರ ಬಾಯಿಗೆ ಬೀಗ ಹಾಕಿದೆ.
ಎಚ್ಚರಿಕೆ ಸಂದೇಶ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯ ಕಾಂಗ್ರೆಸ್ನ ಈ ಆಶಿಸ್ತಿನ ಬೆಳವಣಿಗೆಗಳನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಇದೇ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಜತೆ ರ್ಚಚಿಸಿದ ಬಳಿಕ, ಇಂತಹ ಅಭಿಪ್ರಾಯ, ಹೇಳಿಕೆ ಸಹಿಸಲ್ಲ, ಶಿಸ್ತು ಮೀರಿದರೆ ಕ್ರಮ ನಿಶ್ಚಿತ ಎಂಬ ಎಚ್ಚರಿಕೆ ಸಂದೇಶವನ್ನು ರಾಜ್ಯಕ್ಕೆ ಕಳುಹಿಸಿದ್ದಾರೆ.
ದೂರಿನಲ್ಲೇನಿತ್ತು?: ಸಚಿವರೂ ಸೇರಿದಂತೆ ಪಕ್ಷದ ಆರು ನಾಯಕರು ಮುಖ್ಯಮಂತ್ರಿ ಸ್ಥಾನ ಅಪೇಕ್ಷಿಸುವ ಹೇಳಿಕೆ ನೀಡಿರುವುದರಿಂದ ಪಕ್ಷದ ಇತರ ನಾಯಕರು, ಕಾರ್ಯಕರ್ತರ ಆತ್ಮಸ್ಥೈರ್ಯ ಕುಸಿದಿದೆ. ಪಕ್ಷ ಹಾಗೂ ಸರ್ಕಾರದ ಮೇಲೆ ಭರವಸೆ ಕಳೆದುಕೊಳ್ಳುವಂತಾಗಿದೆ. ಈ ಬೆಳವಣಿಗೆಗಳಿಂದ ರಾಜ್ಯದ ಜನತೆ ಕೂಡ ಸರ್ಕಾರ ಮತ್ತು ಪಕ್ಷದ ಮೇಲಿನ ನಂಬಿಕೆ, ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ ನಮ್ಮ ನಾಯಕರ ನಡುವಿನ ಒಳಜಗಳ, ಅಜಾಗರೂಕ ಹೇಳಿಕೆ. ಇದರಿಂದ ಸರ್ಕಾರದ ಆಡಳಿತ ಯಂತ್ರದ ಮೇಲೂ ಪರಿಣಾಮ ಆಗಿದೆ ಎಂದು ರಾಜ್ಯ ನಾಯಕರು ದೂರಿದ್ದರು.
ಬೆಂಗಳೂರು: ಶಿಸ್ತು ಮೀರುವ ನಾಯಕರಿಗೆ ವರಿಷ್ಠರು ಎಚ್ಚರಿಕೆ ರವಾನಿಸಿದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಸ್ವಪಕ್ಷೀಯರಿಗೆ ತೀಕ್ಷ ್ಣ ಸಂದೇಶ ರವಾನಿಸಿದ್ದಾರೆ. ಮುಖ್ಯಮಂತ್ರಿ ಸ್ಥಾನ ಖಾಲಿಯಿಲ್ಲದಿರುವಾಗ ಸಿಎಂ ಸ್ಥಾನದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ನಾನೇ ಮುಖ್ಯಮಂತ್ರಿಯಾಗಿ ಮುಂದುವರಿಯುವುದರಲ್ಲಿ ಸಂಶಯವಿಲ್ಲ ಎಂದು ಗಟ್ಟಿ ಧ್ವನಿಯಲ್ಲಿ ಸಾರಿದ್ದಾರೆ. ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಎಲ್ಲ ಸಚಿವರೂ ಹೇಳುತ್ತಿದ್ದಾರೆ. ಈ ವಿಚಾರ ಮಾತನಾಡದಂತೆ ನಾನೇಕೆ ಸೂಚನೆ ಕೊಡಲಿ ಎನ್ನುವ ಮೂಲಕ ತಮಗಿರುವ ಬೆಂಬಲದ ಮಹತ್ವ ಸಾರಿದರು.
ಬಿಜೆಪಿ ಅವಧಿಯಲ್ಲಿನ ಹಗರಣ ತನಿಖೆಗೆ ಸಂಪುಟ ಉಪಸಮಿತಿ: ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸುಮಾರು 21 ಹಗರಣಗಳು ನಡೆದಿದ್ದು, ಇವುಗಳ ತ್ವರಿತ ತನಿಖೆಗೆ ಚಾಲನೆ ನೀಡಲು ಹಾಗೂ ಮುಂದಿನ ಕ್ರಮಗಳ ಬಗ್ಗೆ ಸಲಹೆ ನೀಡಲು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪ ಸಮಿತಿ ರಚಿಸಲಾಗಿದೆ ಎಂದು ಸಿಎಂ ಇದೇ ಸಂದರ್ಭದಲ್ಲಿ ತಿಳಿಸಿದರು. ವರದಿ ನೀಡಲು ಸಮಿತಿಗೆ 1-2 ತಿಂಗಳ ಅವಕಾಶ ನೀಡಲಾಗಿದೆ. ಪಿಎಸ್ಐ ಹಗರಣ, ಶೇ.40 ಕಮಿಷನ್ ಹಗರಣ, ಕೋವಿಡ್ 19, ಬಿಟ್ ಕಾಯಿನ್ ಹಗರಣಗಳಿಗೆ ಮಾತ್ರ ತನಿಖಾ ಆಯೋಗ ರಚಿಸಲಾಗಿದೆ. ಅದರಲ್ಲಿ ಕೋವಿಡ್ 19 ಬಗ್ಗೆ ತನಿಖಾ ಆಯೋಗ ಮಧ್ಯಂತರ ವರದಿ ನೀಡಿದ್ದು, ಅಧಿಕಾರಿಗಳ ಪರಿಶೀಲನೆ ನಂತರ ಈ ಬಗ್ಗೆ ಸಚಿವ ಸಂಪುಟದಲ್ಲಿ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದರು.
ತಪ್ಪು ಮಾಡಿದ್ದರೆ ಕ್ರಮ: ಸರ್ಕಾರ ತನಿಖೆಗೆ ಸೂಚಿಸುವ ಮೂಲಕ ದ್ವೇಷದ ರಾಜಕೀಯ ಮಾಡುತ್ತಿದೆ ಎಂದು ಬಿಜೆಪಿ ಆರೋಪಿಸಿರುವುದಕ್ಕೆ ಪ್ರತಿಕ್ರಿಯೆ ನೀಡಿ, ಬಿಜೆಪಿಯವರು ನನ್ನ ಮೇಲೆ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ದ್ವೇಷದ ರಾಜಕಾರಣ ಮಾಡುವುದಿಲ್ಲ. ಆದರೆ ತಪ್ಪು ಮಾಡಿದವರ ಮೇಲೆ ಖಂಡಿತ ಕ್ರಮ ಕೈಗೊಳ್ಳಲಾಗುವುದು ಎಂದರು. ಪಿಎಸ್ಐ ಹಗರಣದ ಬಗ್ಗೆ ವಿಶೇಷ ತನಿಖಾ ತಂಡಕ್ಕೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದ ಅವರು, ವಾಲ್ಮೀಕಿ ಹಗರಣಕ್ಕೆ ಸಂಬಂಧಿಸಿದಂತೆ ಎಸ್ಐಟಿಯವರೂ ತನಿಖೆ ಮಾಡಿ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಈ ಬಗ್ಗೆ ನ್ಯಾಯಾಲಯ ತೀರ್ಮಾನ ಕೈಗೊಳ್ಳಲಿದೆ ಎಂದರು.
ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿನ ಅಂತಃಕಲಹ, ಅಪಸ್ವರ ಕೊನೆಗಾಣಿಸುವ ಜತೆಯಲ್ಲೇ ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವ ಚಟುವಟಿಕೆಗಳಿಗೆ ಮೂಗುದಾರ ಬಿಗಿಯುವ ದೃಢ ನಿಶ್ಚಯದೊಂದಿಗೆ ಆರೆಸ್ಸೆಸ್ ಕೊನೆಗೂ ಮುಂದಡಿ ಇಟ್ಟಿದೆ. ಪಕ್ಷದ ಮುಖಂಡರ ಅಪೇಕ್ಷೆ, ಕಾರ್ಯಕರ್ತರ ನಿರೀಕ್ಷೆ, ಸಂಘದ ಪ್ರಮುಖರ ಒತ್ತಾಸೆ ಫಲಿಸುವ ಕಾಲ ಕೂಡಿ ಬಂದ ಬೆನ್ನಲ್ಲೇ ಆರ್ಎಸ್ಎಸ್ ಹಾಗೂ ಬಿಜೆಪಿ ಸಮನ್ವಯ ಬೈಠಕ್ ಗುರುವಾರ ನಡೆಯಲಿದೆ. ವಾಲ್ಮೀಕಿ ಹಗರಣ, ಮುಡಾ ಅಕ್ರಮದ ವಿರುದ್ಧ ನಿರಂತರ ಹೋರಾಟವು ಕೇಸರಿಪಡೆಯ ಉತ್ಸಾಹ ಹೆಚ್ಚಿಸಿದರೆ, ಜನರ ವಿಶ್ವಾಸ ಮತ್ತಷ್ಟು ದೃಢಪಡಿಸಿಕೊಂಡಿದೆ. ಈ ಹಂತದಲ್ಲಿ ಕೆಲವು ನಾಯಕರ ಪ್ರತ್ಯೇಕ ಸಭೆ, ಪ್ರತ್ಯೇಕ ಪಾದಯಾತ್ರೆ ಚರ್ಚೆಗಳು ವರಿಷ್ಠರ ಕೆಂಗಣ್ಣಿಗೆ ಗುರಿಯಾಗಿತ್ತು. ಅಲ್ಲದೆ, ಹೊಂದಾಣಿಕೆ ರಾಜಕಾರಣ ಪಕ್ಷಕ್ಕೆ ಮುಳುವಾಗುತ್ತಿದೆ ಎಂಬ ದೂರುಗಳು ಸಂಘದ ಮೆಟ್ಟಿಲೇರಿದ್ದವು.
ಅಭಿಪ್ರಾಯ ಸಂಗ್ರಹ: ಸಂಘ ಮತ್ತು ಪಕ್ಷದ ರಾಷ್ಟ್ರೀಯ ಪ್ರಮುಖರು ಗ್ರೀನ್ ಸಿಗ್ನಲ್ ನೀಡಿದ ಬಳಿಕ ಸಮನ್ವಯದ ಕಸರತ್ತಿಗೆ ಮುಹೂರ್ತ ನಿಗದಿಯಾಗಿದೆ. ಎರಡೂ ಬಣದವರನ್ನು ಒಟ್ಟಿಗೆ ಕೂರಿಸಿಕೊಂಡು ಅಭಿಪ್ರಾಯ ಸಂಗ್ರಹಿಸುವುದು ಈ ಬೈಠಕ್ನ ಮುಖ್ಯ ಉದ್ದೇಶವೆಂದು ಮೂಲಗಳು ತಿಳಿಸಿವೆ. ಕರ್ನಾಟಕದ ರಾಜಕೀಯ ವ್ಯವಹಾರ ನೋಡಿಕೊಳ್ಳುವ ಸಂಘದ ಸಹಸರಕಾರ್ಯವಾಹ ಸಿ.ಆರ್. ಮುಕುಂದ ಸಮಕ್ಷಮ ಸಮನ್ವಯ ಬೈಠಕ್ ಗೊತ್ತುಪಡಿಸಿದ್ದು, ಕ್ರೋಢೀಕೃತ ಅಭಿಪ್ರಾಯಗಳ ವರದಿ ಬಿಜೆಪಿ, ಸಂಘದ ರಾಷ್ಟ್ರೀಯ ಪ್ರಮುಖರಿಗೆ ಸಲ್ಲಿಕೆಯಾಗಲಿದೆ ಎಂದು ತಿಳಿದುಬಂದಿದೆ.
ಪ್ರಧಾನ ಕಾರ್ಯಸೂಚಿ: ಸಂಘಟನಾತ್ಮಕ ಕಾರ್ಯತಂತ್ರ, ರಾಜ್ಯ ಸರ್ಕಾರದ ವಿರುದ್ಧ ವ್ಯೂಹಾತ್ಮಕ ನಡೆಯೇ ಬೈಠಕ್ನ ಪ್ರಧಾನ ಕಾರ್ಯಸೂಚಿಯಾಗಿದೆ. ಆಂತರಿಕ ಗೊಂದಲ, ಮನಸ್ತಾಪ ಮತ್ತು ಸಂಪರ್ಕ-ಸಂವಹನ ಕೊರತೆಗೆ ಪರಿಹಾರೋಪಾಯ ಗಳನ್ನು ಕಂಡುಕೊಳ್ಳಲು ಪ್ರಯತ್ನಿಸಲಿದೆ. ಪಕ್ಷದ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ, ವಿಭಾಗ ಸಂಘಟನಾ ಕಾರ್ಯದರ್ಶಿಗಳನ್ನು ಹೊಸದಾಗಿ ನೇಮಿಸಿಲ್ಲ ಎಂದ ಮಾತ್ರಕ್ಕೆ ಸಂಘದ ‘ಹಿಡಿತ’ ಬಿಟ್ಟು ಕೊಟ್ಟಿದೆ. ಸಿದ್ಧಾಂತ ಕೈಬಿಟ್ಟಿದೆ ಎಂದು ಭಾವಿಸಬೇಕಾಗಿಲ್ಲ ಎನ್ನುವ ಸ್ಪಷ್ಟ ಸಂದೇಶ ಬೈಠಕ್ ಮುಖೇನ ರವಾನೆ ಆಗಲಿದೆ.
ಯಾರೆಲ್ಲಾ ಭಾಗಿ? : ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಪಕ್ಷದ ರಾಜ್ಯ ಉಸ್ತುವಾರಿ ಡಾ.ರಾಧಾಕೃಷ್ಣ ಮೋಹನ್ದಾಸ್ ಅಗರ್ವಾಲ್, ರಾಜ್ಯಾಧ್ಯಕ್ಷ ವಿಜಯೇಂದ್ರ, ಬಸನಗೌಡ ಪಾಟೀಲ ಯತ್ನಾಳ್, ಅರವಿಂದ ಲಿಂಬಾವಳಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಹಿರಿಯ ಮುಖಂಡರು, ರಾಜ್ಯ ಪದಾಧಿಕಾರಿಗಳು 40 ಮುಖಂಡರು ಪಾಲ್ಗೊಳ್ಳುವ ಸಾಧ್ಯತೆಗಳಿವೆ.