ಏಕಪಕ್ಷದ ವಿಧಿಲೀಲೆ

Kaggada Belaku vvani
Published on

ಲೋಕವೆಲ್ಲವು ದೈವಲೀಲೆಯೆಂಬರೆ, ಪೇಳಿ |

ಶೋಕ ಸೋಂಕಿರದೊಡಾ ಲೀಲೆ ನೀರಸವೇಂ? ||

ಮೂಕಂಗೆ ಕಳ್ ಕುಡಿಸಿ ಚೇಳ್ ಕಟುಕಿಪಾಟವಿದು |

ಏಕಪಕ್ಷದ ಲೀಲೆ - ಮಂಕುತಿಮ್ಮ ||

‘ಲೋಕವೆಲ್ಲ ದೈವದ ಆಟವೆನ್ನುವವರೇ, ಹೇಳಿ. ಶೋಕದ ಸ್ಪರ್ಶವಿರದೆ ಇದ್ದರೆ ಆ ಆಟವು ನೀರಸವೇನು? ಮೂಕನಿಗೆ ಮದ್ಯ ಕುಡಿಸಿ, ಆನಂತರ ಚೇಳಿನಿಂದ ಕುಟುಕಿಸಿ, ವಿನೋದವನ್ನು ನೋಡುವ ಆಟವಿದು. ಇದು ದೇವರ ಒಂದೇ ಪಕ್ಷದ ಆಟ.’

ಪೂರ್ತಿ ವಿಶ್ವವು ಭಗವಂತನ ಲೀಲೆಗೆ ಒಳಪಟ್ಟಿದೆ. ಆತ ವಿನೋದಕ್ಕಾಗಿ ಜಗದ ಜೀವರನ್ನು ಬಳಸಿಕೊಳ್ಳುತ್ತಿದ್ದಾನೆ. ಆತನ ಇಚ್ಛೆಯಂತೆಯೇ

ಎಲ್ಲ ನಡೆಯುತ್ತದೆ ಎಂಬಂಥ ಮಾತುಗಳನ್ನು ಹಲವರು ಆಡುತ್ತಾರೆ. ದೇವನ ವಿನೋದಕ್ಕೆ ಬದುಕು ಬಳಕೆಯಾಗುವುದು ಹೌದಾದರೆ ಆತ ವಿಷಾದವನ್ನೇಕೆ ನೀಡುತ್ತಾನೆ? ದುಃಖದ ಸೋಂಕಿದ್ದರೆ ಆಟ ಕಳೆಗಟ್ಟುವುದೆ? ಸಂಭ್ರಮ ಸಡಗರದಲ್ಲಿ ಸ್ವಾರಸ್ಯವಿರದೆ? ಜಗದ ಜೀವಗಳನ್ನು ನಲಿಸುವುದರ ಜತೆಗೆ ನೋಯಿಸಿಯೂ ಭಗವಂತನು ಯಾಕೆ ಆಟವಾಡುತ್ತಾನೆ? ಇಂಥ ಪ್ರಶ್ನೆಗಳು ಎಲ್ಲರೊಳಗೂ ಆಗೀಗ ಮೂಡುವುದುಂಟು.

ಡಿ.ವಿ.ಜಿ. ಸುಂದರವಾದ ರೂಪಕದ ಮೂಲಕ ಭಗವಂತನ ಲೀಲಾವಿನೋದವನ್ನು ವಿವರಿಸುತ್ತಾರೆ. ಮನದ ಭಾವಗಳನ್ನು ಮಾತಿಗಿಳಿಸಲಾಗದ ಮೂಕನೊಬ್ಬನಿಗೆ ಮದ್ಯ ಕುಡಿಸಿದರೆ ಆತ ವಿಚಿತ್ರವಾಗಿ ವರ್ತಿಸಬಹುದು. ಇದರ ಜತೆಗೆ ಚೇಳು ಕುಟುಕುವಂತೆ ಮಾಡಿದರೆ ಆತನ ಸ್ಥಿತಿ ಶೋಚನೀಯ ಎನಿಸಬಹುದು. ಯಾತನೆಯನ್ನು ಆಡಲಾರ, ಅನುಭವಿಸಲಾರ. ತಲೆಗೇರಿದ ಅಮಲು ಬುದ್ಧಿಗೂ ಮಂಕು ಕವಿಸುವುದರಿಂದ ತನ್ನ ವೇದನೆಯನ್ನು ಸ್ವತಃ ಪರಿಹರಿಸಿಕೊಳ್ಳಲು ಸಾಧ್ಯವಾಗದೆ ಒದ್ದಾಡುತ್ತಾನೆ. ಮೂಕನ ವಿಚಿತ್ರ ನಡವಳಿಕೆಗೆ ಕಾರಣ ತಿಳಿಯದ ಇತರರು, ಆತನನ್ನು ಕಂಡು ಪರಿಹಾಸ್ಯ ಮಾಡಿ ನಗಬಹುದು.

ವಿಧಿಯೂ ಹೀಗೆಯೇ ಮನುಷ್ಯನನ್ನು ನಡೆಸಿಕೊಳ್ಳುತ್ತಿದೆ. ಕ್ಷಣಿಕ ಆಕರ್ಷಣೆಗಳನ್ನು ಕಣ್ಣ ಮುಂದಿರಿಸುತ್ತದೆ. ಇಂದ್ರಿಯಗಳು ಕೆರಳುವಂತೆ ಮಾಡಿ ಮಾಯೆಯ ಬಲೆ ಬೀಸುತ್ತದೆ. ಮನದ ತಲ್ಲಣಗಳನ್ನು ಹೇಳಿಕೊಳ್ಳಲಾಗದೆ ಅದರ ಗುಂಗಿನಲ್ಲೇ ಕಳೆದುಹೋದಂತಿರುವಾಗ, ಪಡೆದೆನೆಂಬ ಭ್ರಮೆಯಲ್ಲಿ ಬೀಗುವಾಗ ಅನಿರೀಕ್ಷಿತ ಆಘಾತವೊಂದು ಅಪ್ಪಳಿಸುತ್ತದೆ. ಇತ್ತ ಕಾಡುವ ಮೋಹಪಾಶಗಳು; ಇನ್ನೊಂದೆಡೆ ಕೈಗೆ ಎಟುಕಿಯೂ ಎಟುಕದಂತೆ ಅವೆಲ್ಲ ಸರಿದುಹೋಗುವ ಸಂದರ್ಭಗಳು. ಇದರಿಂದಾಗಿ ಜೀವವು ಹತಾಶೆ, ನಿರಾಶೆಗಳಿಂದ ಕಂಗೆಡುತ್ತದೆ.

ಜೀವನದುದ್ದಕ್ಕೂ ಮಾತಿಗೆ ನಿಲುಕದ ಭಾವಗಳನ್ನು ಬಸಿರಲ್ಲಿರಿಸಿಕೊಂಡು, ಒಳಗೊಳಗೆ ಕೊರಗುತ್ತ ನೆಮ್ಮದಿಯಿರದೆ ಬದುಕುವಂತಾಗುತ್ತದೆ. ಹೀಗೆ ನೋವುಂಡ ಜೀವಗಳು ದೇವನ ಆಟವನ್ನು ಪ್ರಶ್ನಿಸುತ್ತವೆ. ಆದರೆ ಅವರ ಮಾತುಗಳಿಗೆ, ಬೇಡಿಕೆಗೆ ಅವಕಾಶವೇ ಇಲ್ಲದಂತೆ ದೇವನೇ ಏಕಪಕ್ಷೀಯವಾಗಿ ನಿರ್ಣಯಿಸಿ, ದಾಳವುರುಳಿಸುತ್ತಿರುತ್ತಾನೆ.

ಮನುಜನ ಬದುಕು ದೇವನ ಏಕಪಕ್ಷೀಯ ನಿರ್ಧಾರದಂತೆಯೇ ಮುನ್ನಡೆಯುತ್ತದೆ ಎನ್ನುವುದು ಸತ್ಯ. ಇದರರ್ಥ ದೇವರು ನಿರ್ದಯಿ ಎಂದಲ್ಲ. ಜೀವಗಳನ್ನು ತನ್ನೆಡೆಗೆ ಬರ ಮಾಡಿಕೊಳ್ಳುವ ಕಾರ್ಯದಲ್ಲಿ ಆತ ನಿರತನಾಗಿದ್ದಾನೆ. ಜೀವಗಳನ್ನು ಹೇಗೆಂದರೆ ಹಾಗೆಯೇ ಕರೆದುಕೊಳ್ಳಲು ಅಸಾಧ್ಯ. ನಿಯಮಗಳನ್ನು ಮೀರಿ ನಡೆಯುವಂತಿಲ್ಲ. ತನ್ನಲ್ಲಿಗೆ ಬರಲು ಉದ್ಯುಕ್ತವಾಗಿರುವ ಜೀವಾತ್ಮಗಳನ್ನು ಪರಿಶುದ್ಧಗೊಳಿಸುವ, ಸಂಸ್ಕಾರ ನೀಡಿ ಉದ್ಧರಿಸುವ ಕಾರ್ಯವು ದೈವಲೀಲೆಯ ಮುಖ್ಯ ಭಾಗ. ಪಾಪ-ಪುಣ್ಯಗಳನ್ನು ಗಮನಿಸಿ ಅರ್ಹರನ್ನು ಆಯ್ಕೆ ಮಾಡುತ್ತಾನೆ. ಸುಖ-ದುಃಖದಲ್ಲಿ ಅದ್ದಿ ಆತ್ಮಶಿಕ್ಷಣ ನೀಡುತ್ತಾನೆ. ವ್ಯಕ್ತಿ ಆತ್ಮವಿಮರ್ಶೆಗೆ ಒಳಗಾಗುತ್ತ ತನ್ನನರಿಯುವುದಕ್ಕೆ ಅನುವು ಮಾಡಿಕೊಡುತ್ತಾನೆ. ಬದುಕಿನ ನೋವಿನ, ಕಷ್ಟದ ಕ್ಷಣಗಳು ಜೀವವನ್ನು ಪರಿಪಕ್ವಗೊಳಿಸುತ್ತವೆ. ಕತ್ತಲಿದ್ದರೆ ಬೆಳಕು ಆಪ್ತವಾಗುವುದು. ಸುಖ-ಸಂತೋಷವಷ್ಟೇ ಇದ್ದರೆ ಬಾಳುವೆ ನೀರಸವೆನ್ನಿಸಬಹುದು. ಸವಾಲುಗಳನ್ನು ಎದುರಿಸಿದಷ್ಟೂ ಆತ್ಮವಿಶ್ವಾಸ ಬೆಳೆಯುತ್ತದೆ. ಯಾವ ಆಕರ್ಷಣೆಗೂ ಬಲಿಯಾಗದ ದೃಢಚಿತ್ತ ಸಿದ್ಧಿಸುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net