ಕಗ್ಗದ ಬೆಳಕು: ಸುಲಭ ಮತ್ತು ಕಷ್ಟಗಳ ನಡುವೆ...

Kaggada Belaku vvani
Published on

ಭಕ್ತಿ ನಂಬುಗೆ ಸುಲಭ; ಭಜನೆ ನಂಬುಗೆ ಸುಲಭ |

ತತ್ತ್ವಶೋಧನೆ ಕಷ್ಟ; ಮತಿ ಕಾರ್ಯ ಕಷ್ಟ ||

ಸುತ್ತುವುದು ಗಿರಿಸುತ್ತ ಸುಳುವೆಂದು ಲೋಕಜನ |

ಹತ್ತುವನು ತಾಪಸಿಯೊ - ಮಂಕುತಿಮ್ಮ |

‘ನಂಬುಗೆಯ ಆಚರಣೆಗಳಾದ ಭಕ್ತಿ, ಭಜನೆ ಮುಂತಾದವುಗಳನ್ನು ಮಾಡುವುದು ಸುಲಭ. ತತ್ತ್ವಶೋಧನೆ ಸುಲಭವಲ್ಲ. ಅದು ಕಷ್ಟ. ಮತಿಯ ಕೆಲಸವೇನಿದೆಯೋ ಅದು ಕಷ್ಟ. ಸುಲಭವೆಂದು ಲೋಕದ ಜನ ಗಿರಿಯ ಸುತ್ತ ಸುತ್ತುತ್ತಾರೆ. ಆದರೆ ತಾಪಸಿ ಮಾತ್ರ ಗಿರಿಯನ್ನು ಹತ್ತುತ್ತಾನೆ’ ಎನ್ನುತ್ತಾರೆ ಡಿ.ವಿ.ಜಿ.

ದೇವರಿಗೆ ತನ್ನಂತೆಯೇ ಸಂಸಾರ, ಆಹಾರ, ನಿದ್ರೆ, ಭೋಗವಸ್ತುಗಳನ್ನು ಅರ್ಪಿಸಿ ಸಾರ್ಥಕಪಡುವ ಭಕ್ತಿ ಒಂದೆಡೆ. ಭಜನೆ, ಪಾರಾಯಣ, ಪ್ರಾರ್ಥನೆ, ಧ್ಯಾನಗಳಲ್ಲಿ ತೊಡಗಿಸಿಕೊಂಡು ತನ್ಮಯವಾಗುವ ಭಕ್ತಿ ಇನ್ನೊಂದೆಡೆ. ನಿಯತವಾಗಿ ಅರ್ಚನೆ, ವ್ರತ, ಹೋಮ-ಹವನ, ದೇಗುಲ ದರ್ಶನ, ಪ್ರದಕ್ಷಿಣೆಗಳೆಂಬ ಆಚರಣೆಗಳೂ ಇವೆ. ಅಲ್ಲದೆ ಸಮಾಜಸೇವೆಯೇ ದೈವಾರಾಧನೆ ಎಂದು ಭಾವಿಸಿ, ಜೀವನದುದ್ದಕ್ಕೂ ದುಡಿಯುವ ಆದರ್ಶ ಭಕ್ತರೂ ಇದ್ದಾರೆ. ಈ ಎಲ್ಲ ಆಚರಣೆಗಳೂ ಬಹಳ ಸುಲಭ. ನಿತ್ಯಜೀವನದಲ್ಲಿ ಇವೆಲ್ಲ ಅಭ್ಯಾಸವಾಗಿಬಿಡುತ್ತವೆ. ಇವೆಲ್ಲ ಆಚರಣೆಗಳಿಗೂ ಮೂಲವಾದ ನಿಜವಿಚಾರವನ್ನು ಅರ್ಥೈಸಿಕೊಳ್ಳುವುದು ಸುಲಭವಲ್ಲ. ಭಗವಂತನ ಕುರಿತ ನಿರ್ವಚನಗಳನ್ನು ಅರ್ಥೈಸಿಕೊಂಡು, ತತ್ತ್ವಶೋಧನೆಗೆ ತೊಡಗಿಕೊಳ್ಳಲು ಪ್ರಬಲ ಇಚ್ಛಾಶಕ್ತಿ, ಸೂಕ್ಷ್ಮ ಮತಿ ಬೇಕು. ಹಾಗಾಗಿಯೇ ಎಲ್ಲರಿಗೂ ಪರತತ್ತ್ವವನ್ನು ಅರಿಯುವುದು ಸುಲಭವಲ್ಲ. ಪರ್ವತವನ್ನು ಹತ್ತಿ ಶಿಖರಾಗ್ರ ಸೇರಬೇಕೆನ್ನುವ ಹಂಬಲವುಳ್ಳ ಸಾಹಸಿಗರು ತೀರ ವಿರಳ. ಬೆಟ್ಟದ ಎತ್ತರವನ್ನು ಬೆರಗಿನಿಂದ ವೀಕ್ಷಿಸುತ್ತ ನಿಸರ್ಗಸೌಂದರ್ಯಕ್ಕೆ ಮಾರುಹೋಗುವವರು ಬಹಳ ಜನ. ಅವರು ತಪ್ಪಲಿನಲ್ಲಿದ್ದೇ ಬೆಟ್ಟದ ಎತ್ತರದಲ್ಲಿ ಹೀಗಿರಬಹುದು, ಹಾಗಿರಬಹುದು ಎಂದು ಕಲ್ಪಿಸಿಕೊಳ್ಳುತ್ತ ಸುತ್ತುತ್ತಿರುತ್ತಾರೆ. ಬೆಟ್ಟದ ಚೆಲುವಿಗೆ ಮನಸೋತು, ಎತ್ತರದಲ್ಲೇನಿದೆ ಎಂದು ನೋಡಲು ಹೊರಡುವವರು ಕೆಲವು ಮಂದಿ ಮಾತ್ರ. ಅವರಲ್ಲಿ ದೃಢಸಂಕಲ್ಪ ಮತ್ತು ವಿವೇಚಿಸುವ ಸಾಮರ್ಥ್ಯ ಇದ್ದರಷ್ಟೇ ಬಯಸಿದ ಸಾಧನೆ ಸಿದ್ಧಿಸೀತು. ಸಾಧನೆಗೆ ಅಪಾರ ಸಂಯಮ ಬೇಕು.

ಭಕ್ತಿ, ನಂಬುಗೆ, ಪೂಜೆ, ಭಜನೆಗಳು ಈ ನೆಲದ ಸಂಸ್ಕೃತಿಯ ದ್ಯೋತಕಗಳು. ಅವುಗಳನ್ನು ಶ್ರದ್ಧೆಯಿಂದ ಅನುಸರಿಸಿದರೆ ಮನಸ್ಸು ಅವರ್ಣನೀಯ ಆನಂದ ಅನುಭವಿಸಬಹುದು. ಆದರೆ ಪರತತ್ತ್ವದ ಬಗೆಗಿನ ಸಂಪೂರ್ಣ ಜ್ಞಾನ ಲಭ್ಯವಾಗದು. ಯಾಕೆಂದರೆ ಸಾಮಾನ್ಯವಾಗಿ ಭಕ್ತಿನಂಬಿಕೆಯ ಹಿಂದೆ ಇಷ್ಟಾರ್ಥಗಳನ್ನು ಪಡೆಯುವ ಅಭಿಲಾಷೆ ಇರುತ್ತದೆ. ಐಶ್ವರ್ಯ, ಕೀರ್ತಿ, ಆಯುಸ್ಸು - ಹೀಗೆ ಹಲವು ಕಾಮನೆಗಳನ್ನು ಮನದಲ್ಲಿಟ್ಟುಕೊಂಡೇ ಭಕ್ತಿ, ಆರಾಧನೆಗಳಲ್ಲಿ ತೊಡಗುತ್ತಾರೆ. ಹಾಗಾಗಿ ಭಕ್ತನು ಮತ್ತೆಮತ್ತೆ ಚಾಂಚಲ್ಯಕ್ಕೆ ಒಳಗಾಗುತ್ತಾನೆ. ಪರಮಾತ್ಮನಿಂದ ವರಗಳನ್ನು ಪಡೆಯುವ ಉದ್ದೇಶವೇ ಆತನಿಗೆ ಮುಖ್ಯವಾಗುತ್ತದೆ. ದೇವರ ಬಗ್ಗೆ ಗಾಢವಾಗಿ ಚಿಂತಿಸಬೇಕು, ಸೃಷ್ಟಿರಹಸ್ಯವನ್ನು ಅರ್ಥೈಸಿಕೊಳ್ಳಬೇಕು ಎನಿಸುವುದಿಲ್ಲ. ಇಂಥವರಿಗೆ ಮತಿಕಾರ್ಯವು ಕಷ್ಟ ಎನ್ನಿಸುತ್ತದೆ.

ನಿಜತಾಪಸಿ ಹೀಗಿರುವುದಿಲ್ಲ. ತತ್ತ್ವಶೋಧನೆ ಮಾಡುತ್ತ ಪರಮಾತ್ಮನ ಸಾಕ್ಷಾತ್ಕಾರ ಹೊಂದಲು ಪ್ರಯತ್ನಶೀಲನಾಗಿರುತ್ತಾನೆ. ಕಡಲಾಳ ಹೊಕ್ಕು ಮುತ್ತಿನ ಚಿಪ್ಪನ್ನು ಹುಡುಕಿ ತರಬಲ್ಲ ಧೈರ್ಯ ಮತ್ತು ಪ್ರಬಲ ಇಚ್ಛಾಶಕ್ತಿಯ ಸಾಹಸಿಯಂತೆ ತಾಪಸಿಯೂ ತತ್ತ್ವಶೋಧನೆಗೆ ಇಳಿದು ಸರ್ವಶ್ರೇಷ್ಠವಾದುದನ್ನು ಪಡೆಯುತ್ತಾನೆ. ನಿರಾಯಾಸವಾಗಿ ಬೆಟ್ಟ ಸುತ್ತುವುದಕ್ಕಿಂತ ಸಾಹಸ-ಪೌರುಷದಿಂದ ನಿಧಾನವಾಗಿ ಬೆಟ್ಟ ಹತ್ತಲಾರಂಭಿಸಿದರೆ, ಹೆಜ್ಜೆಹೆಜ್ಜೆಗೂ ಮನಸ್ಸು ಮುದಗೊಳ್ಳುತ್ತದೆ, ಅರಿವಿನ ಬೆಳಕು ಸ್ಪಷ್ಟವಾಗುತ್ತದೆ. ಶೋಧನೆಯ ಸತ್ಪಲದಿಂದ ಆತ್ಮೋನ್ನತಿ ಸಾಧ್ಯವಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net