ಕಗ್ಗದ ಬೆಳಕು: ಮರುಳುಗೊಳಿಸುವ ಕರ್ಮಬಂಧನ

sudina kaggada belaku 13 feb
Published on
ಕರುಮ ಬಂದಿದಿರಹುದು ಮೋಹನದ ರೂಪಿನಲಿ |

ಕಿರುನಗುವು ಕುಡಿನೋಟ ಕೊಂಕುನುಡಿಗಳಲಿ ||

ಕರೆದು ತಳ್ಳುವ, ತಳ್ಕರಿಸುತೊಳಗೆ ಕಿಚ್ಚಿಡುವ |

ತರಳತೆಯದೇಂ ತಂತ್ರ - ಮಂಕುತಿಮ್ಮ ||

‘ಕರ್ಮವು ಮೋಹಕರೂಪದಲ್ಲಿ ಬಂದು ಇದಿರು ನಿಲ್ಲುತ್ತದೆ. ಕಿರುನಗು, ಕುಡಿನೋಟ, ಕೊಂಕು ನುಡಿಗಳಿಂದ ಬಳಿಗೆ ಕರೆಯುತ್ತದೆ, ಮತ್ತೆ ದೂರ ತಳ್ಳುತ್ತದೆ. ಕೆಲವೊಮ್ಮೆ ಆಲಿಂಗಿಸಿಕೊಂಡು ಒಳಗೊಳಗೇ ಕಿಚ್ಚಿಡುತ್ತದೆ. ಹೀಗೆ ಹುಡುಗುತನದ ಅವೆಷ್ಟೋ ತಂತ್ರಗಳಿಂದ ಕರ್ಮವು ಮರುಳುಗೊಳಿಸುತ್ತದೆ’ ಎನ್ನುತ್ತದೆ ಈ ಕಗ್ಗ.

ವಿವೇಕ, ಮಾತುಗಾರಿಕೆ, ಕೌಶಲಗಳಿಂದಾಗಿ ಮಿಕ್ಕುಳಿದ ಪ್ರಾಣಿಗಳಿಗಿಂತ ಶ್ರೇಷ್ಠನಾಗಿದ್ದರೂ ಮನುಷ್ಯ ತನ್ನ ಬದುಕಿನ ನಿಯಂತ್ರಣ ಸಾಧಿಸಿಲ್ಲ. ಪೂರ್ವಸಿದ್ಧತೆಗಳೊಂದಿಗೆ ಎಚ್ಚರದಿಂದ ಕಾರ್ಯಪ್ರವೃತ್ತನಾದರೂ ಸೋಲಬೇಕಾಗುತ್ತದೆ. ಸಂಯಮ, ದೃಢಚಿತ್ತ ಇದ್ದರೂ ಯಾವುದೋ ದುರ್ಬಲ ಕ್ಷಣದಲ್ಲಿ ಮನಸ್ಸು ಚಂಚಲವಾಗುವುದಿದೆ. ಕೆಲವರಂತೂ ಬದುಕು ಪಥನದತ್ತ ಸಾಗುತ್ತಿದೆ ಎಂದು ತಿಳಿದಿದ್ದರೂ ಮರಳದ ಸ್ಥಿತಿಗೆ ತಲುಪಿರುತ್ತಾರೆ.

ಪ್ರಕೃತಿಯಲ್ಲಿ ಯಾವ ಜೀವವೂ ಕರ್ಮವನ್ನು ಮಾಡದೆ ಸುಮ್ಮನಿರಲು ಸಾಧ್ಯವಿಲ್ಲ. ಪ್ರಕೃತಿಯೇ ಜೀವವನ್ನು ಪ್ರಚೋದಿಸಿ, ಬಗೆಬಗೆಯ ಆಕರ್ಷಣೆಗಳನ್ನೊಡ್ಡಿ ಇಂದ್ರಿಯಗಳನ್ನು ಕೆರಳಿಸಿ ಕಾರ್ಯೋನ್ಮುಖಗೊಳಿಸುತ್ತದೆ. ಮನೆ, ಮಕ್ಕಳು, ಸಂಸಾರ, ಆಸ್ತಿ ಇತ್ಯಾದಿ ಮೋಹಗಳನ್ನು ಎದುರಿಗಿಟ್ಟು ವ್ಯಕ್ತಿ ಸದಾ ಕರ್ಮನಿರತನಾಗಿರುವಂತೆ ನೋಡಿಕೊಳ್ಳುತ್ತದೆ. ಹಾಗೆಂದು ಮನುಷ್ಯನಿಂದ ಸಂಭವಿಸಿದ ದುರಿತ ಕರ್ಮಗಳಿಗೆ, ಅನುಚಿತ ವರ್ತನೆಗಳಿಗೆಲ್ಲ ಪ್ರಕೃತಿ ಹೊಣೆಯಲ್ಲ. ನಿಸರ್ಗವೊಡ್ಡುವ ಮೋಹನದ ರೂಪುಗಳು, ಆಸೆಯನ್ನು ಕೆರಳಿಸುವ ಸನ್ನಿವೇಶಗಳು ಜೀವನದ ಪರೀಕ್ಷೆಗಳು. ಅವು ಕಿರುನಗೆಯನ್ನು ಬೀರಿ ವ್ಯಕ್ತಿಯನ್ನು ಸೆಳೆಯಬಹುದು. ಕುಡಿನೋಟದಲ್ಲಿ ಕಾಡಬಹುದು ಇಲ್ಲವೇ ಕೊಂಕು ಮಾತುಗಳಿಂದ ಕೆರಳಿಸಬಹುದು. ವಿವೇಕಿಯಾದ ವ್ಯಕ್ತಿ ಇಂಥ ಪ್ರಚೋದನೆಗೆ ಒಳಗಾಗದೆ ತನ್ನತನವನ್ನು ಕಾಪಾಡಿಕೊಳ್ಳಬಲ್ಲ. ಬುದ್ಧಿಗೇಡಿ ಮಾತ್ರ ಆತುರದಿಂದ ಮೋಹವಶನಾಗಿ ದುಷ್ಕರ್ಮಗಳನ್ನು ಮಾಡುತ್ತಾನೆ. ಕೆಲವೊಮ್ಮೆ ತಾನಿಟ್ಟ ಹೆಜ್ಜೆ ತಪ್ಪೆಂದು ತಿಳಿದರೂ ತಿದ್ದಿಕೊಳ್ಳಲಾಗದೆ, ಮುಂದುವರಿಯುತ್ತಾನೆ. ಪರಿಣಾಮವಾಗಿ ಆಘಾತ, ನೋವುಗಳನ್ನು ಅನುಭವಿಸುತ್ತಾನೆ. ವಿಧಿಯೊಡ್ಡುವ ಪರೀಕ್ಷೆಯಲ್ಲಿ ಗೆದ್ದವನು ಆತ್ಮೋನ್ನತಿಯ ಹಾದಿಯಲ್ಲಿ ಸಾಗಬಲ್ಲ, ಸೋತವನು ಮತ್ತೆ ಭವದ ಬದುಕಿನಲ್ಲಿ ತೊಳಲಾಡುತ್ತ ಸ್ವ-ವಿಶ್ಲೇಷಣೆಗೆ ಒಳಗಾಗುವಂತಾಗುವುದು ಖಂಡಿತ.

ಹೀಗೆ ಮೋಹಕರೂಪದಲ್ಲಿ ಸೆಳೆಯುವ ಕರ್ಮವು ಜನ್ಮಾಂತರಗಳಿಂದ ಜತೆಗೂಡಿ ಬಂದ ಸ್ವಯಾರ್ಜಿತ ಕರ್ಮಶೇಷ. ಸ್ವಧರ್ಮ ಪಾಲಿಸುತ್ತ, ಫಲಾಪೇಕ್ಷೆಯಿಲ್ಲದೆ ಸಮರ್ಪಣಾಭಾವದಿಂದ ಕರ್ವಚರಣೆ ಮಾಡುವವನನ್ನು ಕರ್ಮದೋಷ ಕಾಡದು. ಹಾಗೆಂದು ವಿಧಿಯೊಡ್ಡುವ ಮಾಟಕ್ಕೆ ಮನಸೋತವರ ಬಾಳು ವ್ಯರ್ಥವಲ್ಲ, ಅವರು ನಿಷ್ಪ್ರಯೋಜಕರೂ ಅಲ್ಲ. ಮತ್ತೆಮತ್ತೆ ಜೀವನದ ಹೋರಾಟದಲ್ಲಿ ಏಳು-ಬೀಳುಗಳನ್ನು ಕಾಣುತ್ತ, ಜನ್ಮಾಂತರಗಳನ್ನು ದಾಟಿಯಾದರೂ ಸೇರಬೇಕಾದ ಗಮ್ಯವನ್ನು ಸೇರುತ್ತಾರೆ.

ಪ್ರಕೃತಿ ಎಷ್ಟು ಬಗೆಗಳಲ್ಲಿ ಮಾಯೆಯನ್ನು ಮುಂದೊಡ್ಡಿದರೂ ಕರ್ಮ-ಅಕರ್ಮಗಳ ವಿವೇಚನೆಯುಳ್ಳ ವ್ಯಕ್ತಿ ವಿಧಿಯ ಸಂಚಿಗೆ ಬಲಿಯಾಗಲಾರ. ಕೆಲವೊಮ್ಮೆ ವಿಧಿಯು ಕರ್ವನುಸಾರ ಸರ್ವಸ್ವವೆನ್ನುವ ಭಾವ ಮೂಡಿಸಿ ವಂಚಿಸುವುದೂ ಉಂಟು. ಎಲ್ಲರೊಳಗಿದ್ದೂ ಯಾವುದಕ್ಕೂ ಅಂಟಿಕೊಳ್ಳದ ನಿಜಯಾತ್ರಿಕನು ಇದರಿಂದ ಕಂಗೆಡಲಾರ. ವಿಧಿಯು ಕಠಿಣ ಪರೀಕ್ಷೆಗೊಳಪಡಿಸಿದರೂ ಬದುಕನ್ನು ಸಾಕ್ಷಿಪ್ರಜ್ಞೆಯಿಂದ ನೋಡುವ, ತನ್ನ ಕರ್ತವ್ಯಗಳ ಫಲವನ್ನು ನಿರೀಕ್ಷಿಸದ, ವಿಹಿತ ಕರ್ಮಗಳನ್ನು ಅರಿತು ಮಾಡಬಲ್ಲ ವಿವೇಕಿಯು ಪುಟಕ್ಕಿಟ್ಟ ಚಿನ್ನದಂತೆ ಹೊಳಪನ್ನು ಹೊಂದುತ್ತಾನೆ. ಆತ್ಮೋದ್ಧಾರದ ಹಾದಿಯಲ್ಲಿ ಯಶಸ್ಸಿನ ಹೆಜ್ಜೆಗಳನ್ನಿಡುತ್ತಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net