‘ಎಲ್ಲಿಂದಲೋ ಕಣ್ಣ ದೃಷ್ಟಿಯ ಪರಿಧಿಯಾಚೆಯಿಂದ, ರಹಸ್ಯವಾಗಿ ಅನಂತ ಸತ್ತ್ವವೊಂದು ತೆರೆತೆರೆಯಾಗಿ ಬೀಸಿ ಬರುತ್ತಿದೆ. ಅಷ್ಟೇ ಅಲ್ಲದೇ ಹೊಸತನವನ್ನು ಎಡೆಬಿಡದೆ ಪ್ರತಿನಿತ್ಯವೂ ಜಗಕ್ಕೆ ಬಿತ್ತರಿಸುತ್ತಿದೆ’ ಎನ್ನುತ್ತದೆ ಈ ಕಗ್ಗ. ನಿಯತವಾಗಿ ಸೂರ್ಯೋದಯವಾಗುತ್ತಿದ್ದರೂ ಪ್ರತಿ ಬೆಳಗು ನವೀನವಾಗಿರುತ್ತದೆ. ಪ್ರತಿ ಹೂವಿನರಳಲ್ಲೂ ಹೊಸತನ ಹೊಳೆಯುತ್ತಿರುತ್ತದೆ. ಪ್ರತಿನಿತ್ಯ ಸಾಗರವನ್ನು ನೋಡುತ್ತಿದ್ದರೆ ನಿನ್ನೆಗಿಂತ ಇಂದು ಬೇರೆಯೇ ಆಗಿ ಗೋಚರಿಸುತ್ತದೆ. ಮಳೆ, ನದಿ, ಕಾನು, ಬಯಲು, ಬೆಟ್ಟ, ಹಕ್ಕಿ, ಸುಳಿಗಾಳಿ, ಆಕಾಶ - ಹೀಗೆ ವಾತಾವರಣವು ಪ್ರತಿಕ್ಷಣ ಹೊಸದಾದಂತೆ ಭಾಸವಾಗುತ್ತದೆ. ಹೊಸ ಅರಿವನ್ನು ಪಡೆಯುತ್ತ ಬೆಳೆವ ಮಡಿಲ ಮಗುವೂ ದಿನಂಪ್ರತಿ ಹೆತ್ತವರಿಗೆ ಬೆರಗನ್ನು ಮೂಡಿಸುವಷ್ಟು ಹೊಸ ವ್ಯಕ್ತಿಯಾಗುತ್ತದೆ. ಹಿರಿಯರೊಳಗೂ ಹೊಸತನವನ್ನು ತುಂಬುತ್ತದೆ. ಸೃಷ್ಟಿಯ ಈ ಅದ್ಭುತಗಳೆಲ್ಲ ಅವರ್ಣನೀಯ ಆನಂದವನ್ನುಂಟುಮಾಡುತ್ತದೆ. ಇಷ್ಟೇ ಅಲ್ಲ, ಜೀವನಪಥದಲ್ಲಿ ಅವೆಷ್ಟೋ ಸುಖ-ದುಃಖಗಳ ಸಂದರ್ಭಗಳು ಎದುರಾಗುತ್ತವೆ. ಆದರೆ ಈ ಅಳು-ನಗುವಿನ ಕ್ಷಣಗಳ್ಯಾವುವೂ ಸ್ಥಿರವಲ್ಲ. ಹೊಸ ಸಂದರ್ಭಗಳು ಕಾಣಿಸಿಕೊಳ್ಳುವುದರೊಂದಿಗೆ ಹಳೆಯದೆಲ್ಲವನ್ನೂ ಮರೆವು ಒರೆಸಿಬಿಡುತ್ತದೆ. ಹೊಸ ನಲಿವಿನ ಸಾಂತ್ವನ ಹಳೆಯ ನೋವಿಗೆ ಆಸರೆಯಾಗುತ್ತದೆ. ಈ ಬದಲಾವಣೆ ಮತ್ತು ನಿತ್ಯನೂತನತೆಯನ್ನು ಪ್ರಕೃತಿ ಉಳಿಸಿಕೊಳ್ಳುವ ಪರಿ ಮಾನವನ ಮತಿಗೆ ನಿಲುಕದು. ಆದರೆ ನಿಸರ್ಗದ ನಾವೀನ್ಯವನ್ನು ಕಂಗಳು ಗ್ರಹಿಸಬಲ್ಲುವಾದರೆ ಹೆಜ್ಜೆಹೆಜ್ಜೆಗೂ ಹೊಸತನದ ಅನುಭವಿಸುವ ಸಾಧ್ಯ, ಇದರಿಂದ ಮನಸ್ಸು ಕೂಡ ಪ್ರಫುಲ್ಲಿತವಾಗಿರಬಲ್ಲುದು. ಇತಿಹಾಸದ ಬಾಗಿಲಿನಾಚೆ ಇಣುಕಿದರೆ ಈ ಭೂಮಿ, ಸಮಾಜ ಅವೆಷ್ಟು ಮಾರ್ಪಾಡುಗಳಿಗೆ ಒಳಪಟ್ಟಿದೆ ಎನ್ನುವುದು ಅರ್ಥವಾಗುತ್ತದೆ. ದಿನ ಕಳೆದಂತೆ ಬದಲಾಗುತ್ತ ಹೋಗುವ ಬದುಕಿನ ರೀತಿ, ಚಿಂತನೆಯ ದಾಟಿ, ಪ್ರಾಕೃತಿಕ ಸ್ಥಿತಿಗಳು ಕೆಲವೊಮ್ಮೆ ಅಚ್ಚರಿ ಮೂಡಿಸುವುದರೊಂದಿಗೆ ಆತಂಕಕ್ಕೆ ಈಡುಮಾಡುತ್ತವೆ. ಹೊಸತನವೆನ್ನುವುದು ಬದುಕಿಗೆ ಸಹಜವಾಗಿಯೇ ಬರಬೇಕು. ಬಾಹ್ಯ ಆಡಂಬರದ ರೂಪವಾಗಿ ಹುಡುಕಿಕೊಂಡರೆ ಅದು ಮರೀಚಿಕೆಯನ್ನು ಬೆನ್ನಟ್ಟಿದಂತಾಗುತ್ತದೆ. ಅದರಿಂದಾಗಿ ಬದುಕು ಕೃತಕವಾಗುವುದರೊಂದಿಗೆ ಹೊಸತನದ ಹುಡುಕಾಟದಲ್ಲೇ ಜೀವ ಅತೃಪ್ತಿಯಿಂದ ನರಳುತ್ತದೆ. ಸಂತೋಷವಿರುವುದು ಮಾನವನಿರ್ವಿುತ ವಸ್ತುಗಳಲ್ಲೋ, ವೈಭೋಗದಲ್ಲೋ, ಕ್ಷಣಿಕ ಸುಖಗಳಲ್ಲೋ ಅಲ್ಲ. ಸಂತಸವನ್ನು ಹೃದಯಕ್ಕಿಳಿಸಬಲ್ಲ ಹೊಸತನವನ್ನು ಅರಸುತ್ತ ಹೋದರೆ ಅಸಹನೀಯ ದುಃಖದೊಂದಿಗೆ ಹಿಂತಿರುಗಬೇಕಾಗುತ್ತದೆ. ಎಂದೂ ಮಾಸದ ಸಂತೋಷವಿರುವುದು ನಮ್ಮ ಆಂತರ್ಯದಲ್ಲಿ. ನಿಸರ್ಗದ ನೈಜ ಚೆಲುವನ್ನು, ಅದ್ಭುತಗಳನ್ನು, ನವೀನತೆಗಳನ್ನು ಕಾಣುತ್ತ, ಅದನ್ನು ಅರ್ಥಮಾಡಿಕೊಳ್ಳಲು ಯತ್ನಿಸುತ್ತಿದ್ದಂತೆ ಅರಿವು ಬೆಳೆಯುತ್ತದೆ. ಜಗದ ನಿಯಾಮಕಶಕ್ತಿಯ ಬಲುಹು ಅರ್ಥವಾಗುತ್ತದೆ. ಪರಿಸರದಲ್ಲಿ ಮಿಳಿತವಾಗಿರುವ ಭಗವಂತನನ್ನು ಅರಸತೊಡಗಿದರೆ ಆನಂದವು ಹೃದಯಕ್ಕಿಳಿಯುತ್ತದೆ.