ಕಗ್ಗದ ಬೆಳಕು: ಬಾಳಿನಲ್ಲಿ ಒಳಿತಿನ ದೃಷ್ಟಿ...

Kaggada Belaku vvani
Published on

ವ್ಯರ್ಥವೆಂದೆನಿಪುದಲ ಸೃಷ್ಟಿಯಲಿ ಬಹುಭಾಗ? |

ಅರ್ಥವೇಂ ಕ್ರಿಮಿಕೀಟಕೋಟಿ ರಚನೆಯಲಿ? ||

ಕರ್ತನಾಲೋಚಿಸದ ದುಂದಿನವನೆಂಬ ನುಡಿ |

ಯರ್ಧದೃಷ್ಟಿಯ ವಿವರ - ಮಂಕುತಿಮ್ಮ ||

‘ಸೃಷ್ಟಿಯ ಬಹುಭಾಗ ವ್ಯರ್ಥ ಎನಿಸುತ್ತದೆ. ಕೋಟಿಕೋಟಿ ಕ್ರಿಮಿಕೀಟಗಳ ರಚನೆಯ ಹಿಂದಿರುವ ಅರ್ಥವಾದರೂ ಏನು? ಸೃಷ್ಟಿಕರ್ತನು ಆಲೋಚಿಸದೆ ಮನಸ್ಸಿಗೆ ತೋಚಿದಂತೆ ನಡೆದುಕೊಳ್ಳುವಾತ ಎಂದು ನುಡಿದರೆ ಅದು ಅರ್ಧ ದೃಷ್ಟಿಯ ವಿವರವಾಗುತ್ತದೆ’ ಎನ್ನುತ್ತದೆ ಈ ಮುಕ್ತಕ.

ಪೂರ್ತಿ ಸೃಷ್ಟಿಯು ವೈವಿಧ್ಯ ಮತ್ತು ವೈಚಿತ್ರ್ಯಳ ಆಗರ. ಸೃಷ್ಟಿಯೊಳಗಿರುವ ಪ್ರತಿಯೊಂದೂ ಅದ್ಭುತ ಸಂಯೋಜನೆಯೊಂದಿಗೆ ಆಶ್ಚರ್ಯವನ್ನುಂಟು ಮಾಡುತ್ತದೆ. ಅಸಂಖ್ಯ ಜೀವಗಳು ಹುಟ್ಟು-ಸಾವಿನ ವರ್ತಲದೊಳಗೆ ಮತ್ತೆಮತ್ತೆ ಸುತ್ತುತ್ತಲೇ ಇವೆ. ಭೂಮಿಯಲ್ಲಿ ತಾವು ಮಾತ್ರವೇ ಅಲ್ಲದೆ, ಸಂತತಿಯೂ ಬಾಳಿ ಬದುಕಬೇಕೆಂದು ಜೀವಗಳು ಮಾಡುವ ಪ್ರಯತ್ನ ಕುತೂಹಲಕಾರಿ.

ಸೃಷ್ಟಿಯಲ್ಲಿ ಕಂಗಳಿಗೆ ಕಾಣುವ ಜೀವಗಳಷ್ಟೇ ಅಲ್ಲದೆ ಎಷ್ಟೋ ಸೂಕ್ಷಾ್ಮಣು ಜೀವಿಗಳೂ ಬದುಕುತ್ತಿವೆ. ಭೂಮಿಯಲ್ಲಿರುವ ನೀರು, ಗಾಳಿ, ಬೆಳಕು, ಆಹಾರಗಳನ್ನು ಅವಲಂಬಿಸಿಯೇ ಬದುಕುತ್ತಿವೆ. ಅಂದಮೇಲೆ ಇಷ್ಟೊಂದು ಜೀವಗಳು ಸೃಷ್ಟಿಯಲ್ಲಿರಬೇಕಾದ ಅಗತ್ಯವೇನು? ಕೆಲವಂತೂ ಉಳಿದ ಜೀವಗಳಿಗೆ ಮಾರಕವಾಗಿ ಪರಿಣಮಿಸುವುದುಂಟು. ಇನ್ನು ಕೆಲವು ಹುಟ್ಟಿದ ಕೆಲವೇ ಗಂಟೆಗಳಲ್ಲಿ ಅಸುನೀಗುವುದೂ ಉಂಟು. ಹೀಗಿರುತ್ತ ಸೃಷ್ಟಿಕರ್ತನೇಕೆ ಈ ಅನುಪಯುಕ್ತ ಜೀವಿಗಳನ್ನು ಹುಟ್ಟಿಸಿದ್ದಾನೆ? ಆತನೂ ಮುಂದಾಲೊಚನೆ ಮಾಡದೆ ಅವಸರದಲ್ಲಿ ನಿರ್ಧರಿಸುವ, ಭೂಮಿಯ ಸಂಪತ್ತನ್ನು ಪೋಲು ಮಾಡುವ ದುಂದುಗಾರಿಕೆ ತೋರುತ್ತಿದ್ದಾನೆಯೇ? ಇಂಥ ಸಂಶಯ ಬರಬಹುದು.

ಸೃಷ್ಟಿಯಲ್ಲಿ ಯಾವುದೂ ವ್ಯರ್ಥವಲ್ಲ. ಕೆಲಸಕ್ಕೆ ಬಾರದೆ ಇರುವುದನ್ನು ಸೃಷ್ಟಿಕರ್ತನು ಉಳಿಸಿಕೊಳ್ಳುವುದೂ ಇಲ್ಲ. ಪರಸ್ಪರ ಅವಲಂಬಿತವಾದ ಜೀವಿತವನ್ನು ಪ್ರಕೃತಿಯು ತನ್ನೊಡಲ ಜೀವಗಳ ಸುತ್ತ ಹೆಣೆದುಬಿಟ್ಟಿದೆ, ಅದನ್ನು ಮೀರಿ ನಡೆಯುವುದಕ್ಕೆ ಯಾವುದಕ್ಕೂ ಸಾಧ್ಯವಿಲ್ಲ. ಒಂದುವೇಳೆ ತನ್ನ ಬಲಿಷ್ಠತೆಯನ್ನು ಬಳಸಿಕೊಂಡು ನಿಸರ್ಗದ ಅಂಶಗಳಿಗೆ ಸಮಸ್ಯೆಯಾದರೆ ಅವುಗಳು ಅಳಿದುಹೋಗುತ್ತವೆ. ಈ ಅಳಿವು-ಉಳಿವಿನ ಪ್ರಕ್ರಿಯೆಗಳಿಗೆ ಭೂಮಿಯ ಬಾಳ್ವೆಯಿಂದಲೇ ಅನೇಕ ನಿದರ್ಶನಗಳನ್ನು ಪಡೆಯಬಹುದು. ಆಹಾರಚಕ್ರವು ಒಂದಕ್ಕೊಂದು ಜೋಡಿಸಿದಂತೆ ಅವಲಂಬಿತವಾಗಿದೆ. ಒಂದು ಜೀವಿಯ ಜೀವನಶೈಲಿಯು ಇನ್ನೊಂದು ಜೀವದ ಬಾಳ್ವೆಗೆ ಅತ್ಯಗತ್ಯ. ಸುಂದರ ಸೃಷ್ಟಿಯ ನಿರ್ವತೃವಿನಿಂದ ರೂಪುಗೊಂಡದ್ದೆಲ್ಲವೂ ಪರಸ್ಪರ ಪೂರಕ, ಪ್ರೇರಕವಾಗಿಯೇ ಬಾಳುತ್ತವೆ. ಈ ವ್ಯವಸ್ಥೆಯು ನಮ್ಮ ಅರಿವಿಗೆ ನಿಲುಕುವುದಿಲ್ಲ. ಹಾಗೆಂದ ಮಾತ್ರಕ್ಕೆ ಅವೆಲ್ಲ ಅಪ್ರಯೋಜಕ ಎನ್ನುವುದು ಸರಿಯಲ್ಲ. ಪರಿಸರದ ಸಮತೋಲವನ್ನು ಕಾಪಾಡುವಲ್ಲಿ ಈ ವೈವಿಧ್ಯದ ಅಗತ್ಯವಿದೆ. ಅದನ್ನು ಸೃಷ್ಟಿಕರ್ತನೇ ನಿಭಾಯಿಸುತ್ತಾನೆ. ಈ ಸುವ್ಯವಸ್ಥೆಯ ನಡುವೆ ಮನುಷ್ಯನು ಹಸ್ತಕ್ಷೇಪ ಮಾಡಲು ಹೋದಾಗ ಸಮಸ್ಯೆಗಳು ಹುಟ್ಟಿಕೊಳ್ಳುವುದುಂಟು. ಮತ್ತಮತ್ತೆ ಹದಗೊಳಿಸುವ ಪ್ರಕ್ರಿಯೆಯು ತನ್ನಿಂದತಾನೇ ನಡೆಯುವುದು.

ಜೀವ ಚೈತನ್ಯವಾದ ಆತ್ಮವು ಜಡ ರೂಪದ ಶರೀರವನ್ನು ಮಾಧ್ಯಮವನ್ನಾಗಿಸಿಕೊಂಡು ಪರಮಾತ್ಮನೆಡೆಗೆ ಪ್ರಯಾಣ ಹೊರಟಿದೆ. ಕರ್ವನುಸಾರ ಮತ್ತೆಮತ್ತೆ ಭೂಮಿಯ ಬದುಕಿಗೆ ಬೀಳುತ್ತದೆ, ಕೆಲವು ಹುಟ್ಟಿದ ಮರು ಗಳಿಗೆಯಲ್ಲೇ ನಾಶವಾಗಬಹುದು. ಇನ್ನು ಕೆಲವು ದೀರ್ಘ ಕಾಲ ಬದುಕುಳಿಯಬಹುದು. ಇವೆಲ್ಲದರ ಹಿಂದೆ ವಿಧಿಯ ಲೆಕ್ಕಾಚಾರವಿರುತ್ತದೆ. ಸೃಷ್ಟಿಯ ಭಾಗವೇ ಆಗಿರುವ ಮನುಷ್ಯನು ತನ್ನ ನಿಜ ನೆಲೆಯನ್ನು ತಿಳಿಯಬೇಕು, ತನ್ನ ಕರ್ತವ್ಯಗಳನ್ನು ಪಾಲಿಸಬೇಕು. ಆಗ ಗೊಣಗುವುದನ್ನು ಬಿಟ್ಟು ವಿಶಾಲವಾಗಿ ಚಿಂತಿಸುತ್ತಾನೆ. ಜ್ಞಾನದ ಕಂಗಳಲ್ಲಿ ವಿಶ್ವವನ್ನು ವೀಕ್ಷಿಸಿದರೆ ಎಲ್ಲವೂ ಸೇರಿರುವ ಭಗವಂತನ ಸ್ವರೂಪವನ್ನು ಕಾಣಲು ಸಾಧ್ಯ. ಆಗ ಬಾಳಿನಲ್ಲಿ ಒಳಿತಷ್ಟೇ ಕಾಣುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net