ಬರುವುದೆಲ್ಲ ಬರಲಿ, ಸರಿಯುವುದೆಲ್ಲ ಸರಿಯಲಿ, ಉಳಿಯುವುದೆಲ್ಲ ಉಳಿಯಲಿ; ದೇವರೊಲುಮೆ ಮಾತ್ರ ಜತೆಗಿರಲಿ

Kaggada Belaku vvani
Published on

ದೊರೆ ಮೂವರಿರುವಲ್ಲಿ ಸರಿಯಿಹುದೆ ಸೋಜಿಗವು |

ಕೊರತೆ ಹೆಚ್ಚಿಕೆಗಳಿರಲಚ್ಚರಿಯದೇನು? ||

ಬರಲಿ ಬರುವುದು; ಸರಿವುದೆಲ್ಲ ಸರಿಯಲಿ; ನಿನಗೆ |

ಪರಿವೆಯೇನಿಲ್ಲೆಲವೊ - ಮಂಕುತಿಮ್ಮ ||

‘ಮೂವರು ದೊರೆಗಳು ಇರುವಲ್ಲಿ ಎಲ್ಲವೂ ಸರಿ ಇದ್ದರೆ ಅದು ಆಶ್ಚರ್ಯವೇ ಸರಿ.ಬದುಕಿನಲ್ಲಿ ಒಂದೆಡೆ ಕೊರತೆ, ಇನ್ನೊಂದೆಡೆ ಹೆಚ್ಚಳವಿದೆ ಎಂದಾದರೆ ಅದರಲ್ಲಿ ಅಚ್ಚರಿಯೇನು? ಬರುವುದೆಲ್ಲ ಬರಲಿ, ಸರಿಯುವುದೆಲ್ಲ ಸರಿಯಲಿ; ನೀನಿದಕ್ಕೆ ಯೋಚಿಸಬೇಕಾದದ್ದಿಲ್ಲ’ ಎನ್ನುತ್ತದೆ ಈ ಕಗ್ಗ.

ಮೂವರು ಅರಸರು ಮನುಜ ಜನ್ಮವನ್ನು ಆಳುತ್ತಿದ್ದಾರೆ. ಅವರೇ ನರ, ಕರ್ಮ ಮತ್ತು ದೈವ. ಇವರು ಬದುಕನ್ನು ರೂಪಿಸುವ ರೂವಾರಿಗಳು. ಮನುಷ್ಯನು ತನ್ನ ಬುದ್ಧಿವಂತಿಕೆ, ಸಾಮರ್ಥ್ಯವನ್ನು ಬಳಸಿಕೊಂಡು ಮಾಡುವ ಪ್ರಯತ್ನವು ಬಾಳಿನ ಏಳಿಗೆಗೆ ಅತ್ಯಗತ್ಯ. ಅನಾದಿಯೂ, ಅವಿನಾಶಿಯೂ ಆದ ಆತ್ಮನು ಅನೇಕ ಜನ್ಮಗಳನ್ನು ದಾಟಿ ಬರುತ್ತ ಹೊತ್ತುತಂದ ಕರ್ಮಶೇಷವೂ ಬದುಕನ್ನು ಆಳುತ್ತದೆ. ಆಯಾ ಜನ್ಮದಲ್ಲಿ ಅನುಭವಿಸಿದ ಮೇಲೂ ಉಳಿದ ಕರ್ಮಶೇಷವು ಮುಂದಿನ ಜನ್ಮಗಳಲ್ಲಿ ಫಲ ಕೊಡುತ್ತದೆ. ಅಂದರೆ ನಿನ್ನೆ ಕಟ್ಟಿದ ಬುತ್ತಿಯನ್ನು ಈ ದಿನ ಉಣ್ಣಲೆಂದು ಹೊತ್ತು ತರಲಾಗತ್ತದೆ, ತಂದದ್ದನ್ನು ಉಣ್ಣದೆ ಉಳಿಯುವಂತಿಲ್ಲ. ಇವರಿಬ್ಬರ ಜತೆಗೆ ಇರುವ ಮೂರನೆಯ ಅರಸನಾದರೋ ಎಲ್ಲವನ್ನೂ ಬಲ್ಲ, ಎಲ್ಲವನ್ನೂ ಹಿಡಿದಿಡಬಲ್ಲ ಭಗವಂತ. ಪ್ರಾಚೀನ ಕರ್ಮ ಮತ್ತು ಪ್ರಸ್ತುತ ಸತ್ಕರ್ಮಗಳ ಆಧಾರದಲ್ಲಿ ದೇವನೆಂಬ ಅರಸನು ಮನುಷ್ಯ ಬದುಕನ್ನು ನಿಯಂತ್ರಿಸುತ್ತಾನೆ. ಮನುಜನ ಬಾಳ್ವೆಯನ್ನು ರೂಪಿಸುವಲ್ಲಿ ಆತನ ಪ್ರಯತ್ನದ ಜತೆಗೆ, ಅವನ ಕೆಲಸ ಮತ್ತು ನಿಯಾಮಕ ಶಕ್ತಿ ಪ್ರಮುಖ ಪಾತ್ರ ವಹಿಸುತ್ತವೆ.

ಹೀಗೆ ಮೂವರು ದೊರೆಗಳ ಒಡೆತನಕ್ಕೆ ಒಳಪಟ್ಟ ಬದುಕಿನಲ್ಲಿ ಎಲ್ಲ ಸರಿಯಾಗಿದೆ ಎಂದಾದರೆ ಅದು ನಿಜಕ್ಕೂ ಆಶ್ಚರ್ಯವೇ ಸರಿ. ಯಾಕೆಂದರೆ ಪ್ರಾಮಾಣಿಕ ಪ್ರಯತ್ನವಿದ್ದರೂ ಪ್ರಾಚೀನ ಕರ್ಮದೋಷಗಳ ಫಲವಾಗಿ ಯಶಸ್ಸು ಸಿದ್ಧಿಸದಿರಬಹುದು. ಪ್ರಾರಬ್ಧಕರ್ಮವು ಬಲವಾಗಿರದಿದ್ದರೂ ಪ್ರಯತ್ನವಿಲ್ಲದೆ ಯಾವ ಕಾರ್ಯವೂ ಕೈಗೂಡದು. ಇವೆರಡೂ ಸಮವಾಗಿದ್ದರೂ ದೈವಾನುಗ್ರಹವಿಲ್ಲವಾದರೆ ಎಲ್ಲವೂ ಶೂನ್ಯವೇ ಆಗುವುದು. ಹಾಗಾಗಿ ಈ ಮೂವರ ಆಣತಿಯಂತೆ ಸಂಯೋಜಿತವಾಗುವ ಜೀವನದಲ್ಲಿ ಕುಂದುಕೊರತೆಗಳು ಸಾಮಾನ್ಯ. ಸುಖ-ದುಃಖ, ಸೌಭಾಗ್ಯ-ದೌರ್ಭಾಗ್ಯಗಳು ಇರುಳು-ಹಗಲಿನಂತೆ ಬಂದುಹೋಗುತ್ತಿರುತ್ತವೆ. ಆದರೆ ಯಾವುದೂ ಶಾಶ್ವತವಾಗಿರದು. ನೋವಿನಿಂದ ನರಳಿದ ಮರುಕ್ಷಣ ನಲಿವು ಹೃದಯವನ್ನು ತುಂಬುತ್ತದೆ. ಸೋಲಿಗೆ ತತ್ತರಿಸಿ ಕುಸಿದಾಗ ಗೆಲ್ಲುವ ದಾರಿ ತೋರುತ್ತದೆ.

ಬದುಕಿನಲ್ಲಿ ನಮ್ಮ ಇಚ್ಛೆಯಂತೆ ನಡೆಯಲಿಲ್ಲ ಎಂದು ಕೊರಗುವುದರಲ್ಲಿ ಅರ್ಥವಿಲ್ಲ. ಚಿತ್ರಕಲಾವಿದನನ್ನು ಕಂಡ ಸಂಗೀತಗಾರ ತನಗೆ ಆ ಭಾಗ್ಯವಿಲ್ಲವೆಂದು ಹಳಿದುಕೊಳ್ಳುವುದು ಸರಿಯಲ್ಲ. ಪ್ರತಿಯೊಬ್ಬರಲ್ಲೂ ಆಂತರಿಕ ದಿವ್ಯತೆ ಅಡಗಿರುತ್ತದೆ. ಅದನ್ನು ಗುರುತಿಸಿ, ಉದ್ದೀಪನಗೊಳಿಸಿದರೆ ಪ್ರತಿಭಾಶಕ್ತಿಯಾಗಿ, ಆತ್ಮಬಲವಾಗಿ ಮಿಂಚುತ್ತದೆ. ತನ್ನ ನಿಜಶಕ್ತಿಯನ್ನು ಅರಿಯದೆ ಕೊರತೆಯನ್ನಷ್ಟೇ ಕಾಣುತ್ತ ಹಲುಬುತ್ತಿದ್ದರೆ ಬದುಕಿನುದ್ದಕ್ಕೂ ಬೇಸರವಷ್ಟೇ ಉಳಿಯುತ್ತದೆ. ಜೀವನದ ಸಮೃದ್ಧಿಗೆ, ಕ್ಷೀಣತೆಗೆ ಅಚ್ಚರಿಪಡಬೇಕಿಲ್ಲ. ಯಾವುದೂ ಮನುಷ್ಯಪ್ರಯತ್ನದಿಂದಷ್ಟೇ ಲಭಿಸದು. ಮನುಷ್ಯ ಸಂಚಯಿಸಿದ ಪುಣ್ಯಬಲದೊಡನೆ ಭಗವಂತನ ಕಾರುಣ್ಯ ಸೇರಿದರಷ್ಟೇ ಜೀವನ ಧನ್ಯ.

ಬದುಕಿನಲ್ಲಿ ಬರುವುದನ್ನಾಗಲಿ, ಸರಿಯುವುದನ್ನಾಗಲಿ, ಉಳಿಯುವುದನ್ನಾಗಲಿ ತಡೆಯಲೋ, ತೊಡೆಯಲೋ ಸಾಧ್ಯವಿಲ್ಲ. ಹೀಗಾಯಿತಲ್ಲ ಎಂದು ನಿರಾಸೆಯಲ್ಲಿ ಅಳುವುದರಿಂದ ಪರಿಸ್ಥಿತಿ ಬದಲಾಗದು. ಬರುವುದೆಲ್ಲ ಬರಲಿ, ಸರಿಯುವುದೆಲ್ಲ ಸರಿಯಲಿ, ಉಳಿಯುವುದೆಲ್ಲ ಉಳಿಯಲಿ; ದೇವರೊಲುಮೆ ಮಾತ್ರ ಜತೆಗಿರಲಿ ಎಂಬ ಭಾವವಿರಬೇಕು. ಸಮಚಿತ್ತದಿಂದ ಬದುಕನ್ನು ಎದುರಿಸಬೇಕು. ಹೀಗೆ ಜೀವನಾನುಭವದಿಂದ ಅರಿವು ಬೆಳೆದಂತೆ ಮನಸ್ಸು ನಿರಾಳವಾಗುತ್ತದೆ. ಸ್ಥಿತಪ್ರಜ್ಞತೆ ಮೈಗೂಡುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net