ಕಗ್ಗದ ಬೆಳಕು; ಆಸೆಯನ್ನು ಅಳಿಸಿದರೆ ವಿವೇಕ ವೃದ್ಧಿ

Kaggada Belaku vvani
Published on
ಆಶೆ ಮಂಥರೆ, ನರವಿವೇಚನೆಯೆ ಕೈಕೇಯಿ |

ಬೀಸೆ ಮನದುಸಿರು ಮತಿದೀಪವಲೆಯುವುದು ||

ವಾಸನೆಗಳನುಕೂಲ ಸತ್ಯತರ್ಕಕೆ ಶೂಲ |

ಶೋಷಿಸಾ ವಾಸನೆಯ - ಮಂಕುತಿಮ್ಮ ||

‘ಆಸೆ ಎನ್ನುವುದು ಮಂಥರೆಯ ಹಾಗೆ. ಮನುಷ್ಯನಲ್ಲಿರುವ ವಿವೇಚನೆ ಕೈಕೇಯಿಯ ಹಾಗೆ. ಮನದ ಆಸೆಯುಸಿರು ಬೀಸಿದರೆ ಮತಿಯ ದೀಪ ಅಲ್ಲಾಡುವುದು, ವಾಸನೆಗಳು ಅನುಕೂಲಗೊಂಡು ಸತ್ಯತರ್ಕಕ್ಕೆ ಶೂಲದಂತಾಗುತ್ತದೆ. ಆ ವಾಸನೆಯನ್ನು ಶೋಷಿಸು’ ಎನ್ನುತ್ತದೆ ಈ ಕಗ್ಗ.

ರಾಮಾಯಣ ಕಥಾನಕದಲ್ಲಿ ಮಂಥರೆಯ ಪಾತ್ರವು ವಿಶಿಷ್ಟವಾದದ್ದು. ಆಕೆ ದಶರಥನ ಕಿರಿಯ ಸತಿ ಕೈಕೇಯಿಯ ಸಖಿ, ಅವಳನ್ನು ಎತ್ತಿ ಆಡಿಸಿ ಬೆಳೆಸಿದ್ದ ಮಮತಾಮಯಿ. ಕೈಕೇಯಿಯಾದರೋ ಸಾಮಾನ್ಯ ವನಿತೆಯಲ್ಲ. ವಿದ್ಯಾ-ವಿವೇಕ ಸಂಪನ್ನಳು, ನಿಸ್ವಾರ್ಥಿಯೂ ಆಗಿದ್ದಳು. ರಾಮ, ಲಕ್ಷ್ಮಣ, ಭರತ, ಶತ್ರುಘ್ನರನ್ನು ಸಮಭಾವದಿಂದಲೇ ಕಾಣುವವಳಾಗಿದ್ದಳು. ಶ್ರೀರಾಮನ ಮೇಲೆ ಕೈಕೇಯಿಗೆ ವಾತ್ಸಲ್ಯಾಭಿಮಾನಗಳಿದ್ದವು. ಹಾಗಾಗಿಯೇ ಮಂಥರೆಯು ಕದ್ದು ಕೇಳಿಸಿಕೊಂಡು ಬಂದ ಶ್ರೀರಾಮಪಟ್ಟಾಭಿಷೇಕದ ವಿಷಯವನ್ನು ಹೇಳಿದಾಗ ಕೈಕೇಯಿ ಹರ್ಷಗೊಂಡಿದ್ದಳು. ಆದರೆ ಯಾವಾಗ ಮಂಥರೆಯು ದುಬೋಧನೆ ಮಾಡಿ, ‘ಭರತನಿಗೆ ಪಟ್ಟಾಭಿಷೇಕವಾದರೆ ನೀನೂ ರಾಜಮಾತೆಯಾಗುವೆ’ ಎಂಬ ಆಸೆಯನ್ನು ಮುಂದಿಟ್ಟಳೋ ಆಗ ಕೈಕೇಯಿಯ ಮನಸ್ಸು ವಿಚಲಿತವಾಯಿತು. ಪರಿಣಾಮದ ಬಗ್ಗೆ ಯೋಚಿಸದೆ ದುರಾಸೆಗೆ ಬಲಿಯಾಗಿ ಶ್ರೀರಾಮ ವನಗಮನಕ್ಕೆ, ದಶರಥನ ಅವಸಾನಕ್ಕೆ ಕಾರಣಳಾದಳು. ಭರತನ ನೆಮ್ಮದಿಗೂ ಮುಳುವಾದಳು. ಈ ರೂಪಕದಂತೆಯೇ ಮನುಷ್ಯನ ವಿವೇಚನೆ ಕೈಕೇಯಿಯಂತೆ ಸದಾ ಒಳಿತನ್ನೇ ಚಿಂತಿಸುತ್ತ, ಉತ್ತಮವಾದುದನ್ನೇ ಗೈಯುತ್ತಿರುತ್ತದೆ. ಆದರೆ ಮಂಥರೆಯಂತೆ ಕಾಡುವ ಆಸೆ ಎದುರಾದಾಗ ವಿವೇಚನೆಯನ್ನು ಕಳೆದುಕೊಳ್ಳುತ್ತದೆ. ಮನಸ್ಸಿನಲ್ಲೇಳುವ ವಿಚಿತ್ರ ಬಯಕೆಗಳ ಉಸಿರು ಒಂದೇ ಸವನೆ ಬಲವಾಗಿ ಬೀಸುತ್ತಿರಲು, ಮನುಷ್ಯನ ಬುದ್ಧಿ ಎಂಬ ದೀಪವು ಅಲ್ಲಾಡತೊಡಗುತ್ತದೆ. ಭಾವೋದ್ವೇಗಕ್ಕೆ ಒಳಗಾಗಿ ತಾನೇನು ಮಾಡುತ್ತಿದ್ದೇನೆಂಬ ಪರಿವೇ ಇಲ್ಲದೆ ನಡೆ, ನುಡಿ ಹದ ತಪ್ಪುತ್ತದೆ.

ವಿವೇಕ, ವಿದ್ಯೆಗಳಿದ್ದರೂ ವ್ಯಕ್ತಿಯು ವಿಕ್ಷಿಪ್ತನಂತೆ ವರ್ತಿಸುವುದು, ಸರಳ-ಸಜ್ಜನ ವ್ಯಕ್ತಿತ್ವವೂ ಕೂಡ ಕಪ್ಪು ಚುಕ್ಕಿ ಇಟ್ಟಂತೆ ದೌರ್ಬಲ್ಯಗಳನ್ನು ಪ್ರದರ್ಶಿಸುವುದು ನಮ್ಮೆಲ್ಲರ ನಿತ್ಯದ ಅನುಭವ. ಇದರೊಡನೆ ಪ್ರತಿಯೊಬ್ಬರೂ ತಮ್ಮ ಸ್ವಭಾವವನ್ನು ಅವಲೋಕಿಸಿಕೊಳ್ಳಲೇಬೇಕಾದ ಸಂದರ್ಭ. ಹೀಗೆ ಮನಸ್ಸು ದುರ್ಬಲವಾಗಲು ಆಸೆಯ ಪ್ರಚೋದನೆಯೊಂದೇ ಕಾರಣವಲ್ಲ. ಪೂರ್ವಾರ್ಜಿತ ಕರ್ಮವಾಸನೆಯೂ ಪ್ರೇರೇಪಿಸುತ್ತದೆ. ಇಂಥ ಸಂದರ್ಭದಲ್ಲಿ ವ್ಯಕ್ತಿಯ ವಿವೇಕವೂ ಕ್ಷೀಣವಾದರೆ ಅನಾಹುತಗಳು ಸಂಭವಿಸುತ್ತವೆ. ಮತ್ತೆಮತ್ತೆ ಸಾಂಸಾರಿಕ ಕ್ಲೇಶ-ನಾಶಗಳಿಗೆ ಒಳಗಾಗಬೇಕಾಗುತ್ತದೆ. ಈ ಪೂರ್ವವಾಸನೆಯು ಸತ್ಯವನ್ನರಿಯುವುದಕ್ಕೆ, ತರ್ಕಬದ್ಧವಾಗಿ ಯೋಚಿಸಿ ನಿರ್ಣಯಿಸುವುದಕ್ಕೆ ಅಡ್ಡಿಯಾಗುತ್ತದೆ. ಇದನ್ನು ಮೀರಲು ವ್ಯಕ್ತಿ ಸಮಚಿತ್ತನಾಗಬೇಕು, ಸಂಯಮದಿಂದ ಸನ್ನಿವೇಶಗಳನ್ನು ನಿಭಾಯಿಸಬೇಕು. ಪ್ರತಿಯೊಬ್ಬನಲ್ಲೂ ಸ್ವತಂತ್ರವಾಗಿ ವಿವೇಚಿಸುವ ಶಕ್ತಿ ನಿಸರ್ಗದತ್ತವಾಗಿರುತ್ತದೆ. ಯಾವಾಗ ಆತ್ಮಬಲ ಕುಗ್ಗಿರುತ್ತದೆಯೋ ಆಗ ವಿವೇಕ ಎಚ್ಚರಗೊಳ್ಳಲಾರದು. ಖಚಿತ ನಿರ್ಧಾರ ಮತ್ತು ಸಂಕಲ್ಪ ಶಕ್ತಿ ಬಲಗೊಳ್ಳಲು ವ್ಯಕ್ತಿಯು ಮನಸ್ಸನ್ನು ನಿಯಂತ್ರಿಸಬೇಕು. ಸಚ್ಚಿಂತನೆ, ಸತ್ಕಾರ್ಯ, ಸತ್ಸಂಗಗಳಲ್ಲಿದ್ದಾಗ ಮನಸ್ಸು ಕೆರಳಲಾರದು. ಇದರಿಂದಾಗಿ ಪೂರ್ವವಾಸನೆಯಿಂದ ಮೂಡುವ ಬಯಕೆಗಳನ್ನು ಇಲ್ಲವಾಗಿಸುವ ಸ್ಥೈರ್ಯ, ಪರಿಣಾಮದ ಬಗೆಗೆ ಎಚ್ಚರ, ಹದ ಮೀರದ ನಡೆ-ನುಡಿಗಳು ವ್ಯಕ್ತಿತ್ವದ ಭಾಗವಾಗುತ್ತವೆ. ಪಡೆದ ವಿದ್ಯೆ, ವಿವೇಚನೆಯನ್ನೂ ಮೀರಿ ಹೆಡೆಯೆತ್ತುವ ಕಾಮನೆಗಳನ್ನು ನಿಗ್ರಹಿಸಲು ಆತ್ಮಶಕ್ತಿ ಬಲಗೊಳ್ಳಬೇಕು. ಶರಣಾಗತಭಾವದಿಂದ ಭಗವಂತನನ್ನು ನಂಬಿ ನಡೆದರೆ ಬಾಳಿನಲ್ಲಿ ಪ್ರಮಾದ ಸಂಭವಿಸದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net