

ಳೊರ್ವನುಂ ಸುಖಿಯಲ್ತು, ದಿಟದಿ, ಪೂರ್ಣದಲಿ ||
ಓರ್ವನುಬ್ಬಸದ ಬಿಸಿ ವಿಷವಾಯುವಾಗಿ ತಾ |
ನುರ್ವರೆಯ ಮುಸುಕೀತು - ಮಂಕುತಿಮ್ಮ ||
‘ಸೌಖ್ಯವೆನ್ನುವುದು ಸಮಸ್ತ ಲೋಕಕ್ಕೂ ನೆಲೆಯಾಗುವವರೆಗೆ ಈ ಭೂಮಿಯಲ್ಲಿ ನಿಜವಾಗಿಯೂ ಯಾರೂ ಪೂರ್ತಿಯಾಗಿಯೂ ಸುಖಿಯಾಗಿರಲು ಸಾಧ್ಯವಿಲ್ಲ. ಒಬ್ಬನ ಉಬ್ಬಸದ ಬಿಸಿ ವಿಷಗಾಳಿಯು ಭೂಮಿಯನ್ನು ಮುಸುಕೀತು’ ಎನ್ನುತ್ತದೆ ಈ ಕಗ್ಗ.
ಸಮಾಜದ ಭಾಗವಾಗಿರುವ ನಾವೆಲ್ಲರೂ ಪರಸ್ಪರ ಅವಲಂಬಿತರು. ಯಾರೊಬ್ಬರ ನೆರವೂ ಇಲ್ಲದೆ ಒಂಟಿಯಾಗಿ ಬಾಳುವುದು ಸಾಧ್ಯವಿಲ್ಲ. ಒಂದು ಹಂತದವರೆಗೆ ಮಾತ್ರ ಸ್ವಾವಲಂಬಿ ಬದುಕು ಸಾಧ್ಯ. ಸಮಾಜದಲ್ಲಿ ಒಂದಾದರಷ್ಟೇ ವ್ಯಕ್ತಿಗೆ ಅಸ್ತಿತ್ವ, ನೆಲೆ-ಬೆಲೆ. ಸಮಷ್ಟಿಯ ಹಿತದ ಚಿಂತನೆಯಿಲ್ಲದ ಯಾವುದೇ ಯೋಜನೆಗಳೂ ಯಶಸ್ವಿಯಾಗಲಾರವು.
ಕಣ್ಣು, ಕಿವಿ, ಮೂಗು ಮೊದಲಾದ ಇಂದ್ರಿಯಗಳು ಶರೀರದ ಭಾಗವಾಗಿದ್ದರೂ, ಬೇರೆಬೇರೆ ಕೆಲಸಗಳನ್ನು ಮಾಡುತ್ತವೆ. ಅವುಗಳಲ್ಲಿ ಯಾವುದಾದರೂ ಒಂದು ಅಂಗಕ್ಕೆ ತೊಂದರೆಯಾದರೂ ಪೂರ್ತಿ ಶರೀರವೇ ನೋವನ್ನು ಅನುಭವಿಸಬೇಕಾಗುತ್ತದೆ. ಅಂತೆಯೇ ಪ್ರತಿಯೊಬ್ಬ ವ್ಯಕ್ತಿಯೂ ಸಮಾಜದ ಅವಿಭಾಜ್ಯ ಅಂಗ. ಯಾರೊಬ್ಬರಿಗೆ ತೊಂದರೆಯಾದರೂ ಇತರರು ತೊಂದರೆ ಅನುಭವಿಸಬೇಕಾಗುತ್ತದೆ.
ಸಾಮಾನ್ಯವಾಗಿ ಪ್ರತಿಯೊಬ್ಬರೂ ಸ್ವಕೇಂದ್ರಿತರಾಗಿಯೇ ಯೋಚಿಸುತ್ತಾರೆ. ಸ್ವಹಿತವೇ ಮುಖ್ಯವಾಗಿರುತ್ತದೆ, ಲೋಕಹಿತ ಕಡೆಗಣಿಸಲ್ಪಡುತ್ತದೆ. ಆದರೆ ವ್ಯಕ್ತಿಯು ಇತರರಿಗೆ ಒಳಿತನ್ನು ಹಾರೈಸದೆ ತನ್ನ ಬದುಕಿನ ಸೌಖ್ಯವನ್ನು ಹೊಂದಲಾಗದು. ಕುಟುಂಬದ ವ್ಯಕ್ತಿಯೊಬ್ಬನಿಗೆ ಆರೋಗ್ಯದ ತೀವ್ರ ಸಮಸ್ಯೆಯುಂಟಾಗಿದೆ ಎಂದಾದರೆ ಕುಟುಂಬದ ಸದಸ್ಯರೆಲ್ಲ ಹತಾಶರಾಗುತ್ತಾರೆ. ಯಾರಿಗೆ ಏನಾದರಾಗಲಿ ತಾನೊಬ್ಬ ಸುಖವಾಗಿದ್ದರೆ ಸಾಕು ಎಂದು ಯೋಚಿಸುವ ಸ್ವಾರ್ಥಿ ಖಂಡಿತ ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ.
ವಿಶ್ವದ ಯಾವುದೋ ಮೂಲೆಯಲ್ಲಿರುವ ದೇಶವು ಪ್ರಾಕೃತಿಕ ವೈಪರೀತ್ಯಕ್ಕೆ ಸಿಲುಕಿ ನಲುಗಿದರೆ ಅಥವಾ ಸ್ವಾರ್ಥಪೂರಿತ ಹೊಣೆಗೇಡಿ ನಿರ್ಧಾರ ಮಾಡಿದರೆ ಉಳಿದ ದೇಶಗಳು ನಿರಾಳವಾಗಿ ಇರಲಾಗದು. ಆ ದೇಶಕ್ಕಾದ ಹಾನಿ ಉಳಿದ ದೇಶಗಳಿಗೂ ತಟ್ಟುತ್ತದೆ. ಹಾಗಾಗಿ ಸಮಸ್ತ ಲೋಕಕ್ಕೂ ಸೌಖ್ಯ ನೆಲೆಯಾಗುವವರೆಗೆ ಯಾರೊಬ್ಬರೂ ಈ ಭೂಮಿಯಲ್ಲಿ ಸುಖವಾಗಿರಲು ಸಾಧ್ಯವಿಲ್ಲ.
ಆಕಸ್ಮಿಕ ಆಕಸ್ಮಿಕಗಳು ಸಂಭವಿಸಿದಾಗ ನೆರವು-ಸಾಂತ್ವನಗಳು ವಿಶ್ವದೆಲ್ಲೆಡೆಯಿಂದ ಹರಿದುಬರುತ್ತವೆ. ಈ ಬಗೆಯ ಭಾವಸ್ಪಂದನಕ್ಕೆ ಪರಿಚಿತ-ಅಪರಿಚಿತ, ದೂರ-ಹತ್ತಿರ ಎಂಬ ಭೇದವಿಲ್ಲ. ಸಾವು-ನೋವುಗಳು ಜನರ ಹೃದಯವನ್ನು ಕಲಕಿ ಅವರನ್ನು ಒಗ್ಗೂಡಿಸುತ್ತವೆ. ಯಾಕೆಂದರೆ ವ್ಯಕ್ತಿ ಸಂಪೂರ್ಣವಾಗಿ ಜಗತ್ತಿನಿಂದ ಪ್ರತ್ಯೇಕತೆ ಸಾಧಿಸಲಾರ. ಲೋಕದಲ್ಲಿ ಎಲ್ಲವೂ ಒಂದಕ್ಕೊಂದು ಸಂಬಂಧಿಸಿವೆ, ಅವಲಂಬಿಸಿವೆ. ಹಲವು ದಳಗಳು ಜತೆಗೂಡಿದರೆ ಸುಂದರವಾದ ಹೂವು, ದಳಗಳನ್ನೆಲ್ಲ ಪ್ರತ್ಯೇಕಿಸುತ್ತ ಹೋದರೆ ಹೂವು ಹೂವಾಗಿರದು.
ಭೂಮಿಯ ಬಾಳುವೆಯಲ್ಲಿ ಒಬ್ಬಾತನ ಉಬ್ಬಸದ ವಿಷಗಾಳಿ ಎಲ್ಲರ ಬದುಕನ್ನು ಸೋಕಿ ನರಳಿಸಬಲ್ಲುದು. ಅಂದರೆ ವ್ಯಕ್ತಿಯೊಬ್ಬನ ಅಸಹನೀಯ ನೋವು ಅಥವಾ ಕೆಡುಕಿನ ಯೋಚನೆಗಳು ಪೂರ್ತಿ ಸಮಾಜವನ್ನೇ ಬಾಧಿಸುತ್ತವೆ. ಕುಟುಂಬದಲ್ಲಿ ಒಬ್ಬ ವ್ಯಕ್ತಿಯ ಸಣ್ಣತನವು ಒಟ್ಟು ಕುಟುಂಬದ ಸಾಮರಸ್ಯಕ್ಕೆ ದಕ್ಕೆಯುಂಟುಮಾಡುತ್ತದೆ. ಆದುದರಿಂದ ಜೀವನದ ಸೌಖ್ಯವೆನ್ನುವುದು ಸುಖ ಸಾಧನಗಳಿಂದಲೋ, ಸೌಲಭ್ಯಗಳಿಂದಲೋ ಪ್ರಾಪ್ತವಾಗುವುದಿಲ್ಲ. ಸ್ವಹಿತವು ಲೋಕಹಿತದಲ್ಲಿದೆ ಎಂಬ ಅರಿವು ಪ್ರತಿಯೋರ್ವರಲ್ಲೂ ಮೂಡಬೇಕು. ಸ್ವಂತ ಮುಕ್ತಿಗಾಗಿ ಸಾಧನೆ ಮಾಡುವುದರೊಂದಿಗೆ ಜಗತ್ತಿನ ಹಿತಕ್ಕಾಗಿಯೂ ಶ್ರಮಿಸಬೇಕು ಎನ್ನುವ ಧ್ಯೇಯವು ಸಮಾಜದ ಉಸಿರಾದಾಗ ಭೂಮಿಯಲ್ಲಿ ಶಾಂತಿ-ನೆಮ್ಮದಿಯು ನೆಲೆಯಾದೀತು.