ಕಗ್ಗದ ಬೆಳಕು: ಅಳಿವು ಉಳಿವು ಪರಸ್ಪರ ಪೂರಕ

Kaggada Belaku vvani
Published on

ಹೊಳಪುಹೊಳಪಿನ ನಡುವೆ ಬಿಡುವಿನಿತು ರತ್ನದಲಿ |

ಬೆಳಕು ಬೆಳಕಿನ ನಡುವೆ ಅನಿತಿನಿತು ನೆರಳು ||

ಬೆಳಸು ಬೆಳಸಿನ ಸಾಲು ನಡುವೆ ಬದಿ ಗದ್ದೆಯಲಿ |

ಉಳಿವಿಗಳಿವಿನ ನೆರೆಯೊ - ಮಂಕುತಿಮ್ಮ ||

‘ಆಭರಣಗಳಲ್ಲಿ ಹೊಳಪಿನ ಬಂಗಾರದ ಮಧ್ಯೆಮಧ್ಯೆ ರತ್ನವನ್ನು ಕೂರಿಸಿರುತ್ತಾರೆ. ಬೆಳಕಿನ ಮಧ್ಯೆ ಅಲ್ಪಸ್ವಲ್ಪ ನೆರಳು ಇರುತ್ತದೆ. ಹುಲುಸಾಗಿ ಬೆಳೆದ ಗದ್ದೆಯ ನಡುವೆ ಬದುವಿರುತ್ತದೆ. ಹಾಗೆಯೇ ಉಳಿವಿಗೆ ಅಳಿವಿನ ನೆರೆ ಕವಿಯುತ್ತದೆ’ ಎನ್ನುತ್ತದೆ ಈ ಕಗ್ಗ.

ಮೋಡ ಕವಿದು ಮಳೆ ಸುರಿಯುವ ಪ್ರಕ್ರಿಯೆಗಳ ನಡುವೆ, ಮಳೆ ಇರದ ಹೊತ್ತಲ್ಲಿ ಹರಡಿಕೊಳ್ಳುವ ಹೊಂಬಿಸಿಲು ಆಪ್ಯಾಯಮಾನ. ಸಮುದ್ರದಲ್ಲಿ ಮೇಲಿಂದ ಮೇಲೆ ಚಿಮ್ಮುವ ಅಲೆಗಳ ನಡುವಿನ ಪುಟ್ಟ ವಿರಾಮ ಆನಂದದಾಯಕ. ಹಾಡಿನ ಸಾಲುಗಳ ನಡುವೆ ಮೌನವು ಭಾವಸ್ಪಂದನಕ್ಕೆ ಅಗತ್ಯ.

ಸುರಿವ ಮಳೆಹನಿಗಳು ಭೂಮಿಯಾಳವನ್ನು ಸೇರಲು ಹೊಂಬಿಸಿಲಿನ ವಿರಾಮ ಬೇಕು. ಒಂದೇ ಸವನೆ ಮಳೆ ಸುರಿದರೆ ಜನಜೀವನ ದುಸ್ತರವಾಗುವುದು ಖಂಡಿತ. ಅಲೆಗಳ ಏರಿಳಿತದ ನಡುವೆ ಅಂತರವಿರುವದರಿಂದಲೇ ಅವುಗಳಿಗೆ ಸ್ಪಷ್ಟತೆ. ಪದಸಾಲಿನ ನಡುವಿನ ನಿಲುಗಡೆಯಿಂದಲೇ ಭಾವಪೂರ್ಣ ಅಭಿವ್ಯಕ್ತಿ ಸಾಧ್ಯವಾಗುತ್ತದೆ. ಹೀಗೆ ಇರದಿರುವ ಸ್ಥಿತಿಯು ಇರುವುದಕ್ಕೆ ಪೂರಕವಾಗಿರುತ್ತದೆ.

ರತ್ನಗಳನ್ನು ಕೂಡಿಸಿ ಮಾಡಿದ ಬಂಗಾರದ ಒಡವೆಯಲ್ಲಿ ಹರಳುಗಳ ನಡುವೆ ಬಂಗಾರವಿರುತ್ತದೆ. ಇದು ಒಡವೆಯ ಚೆಲುವನ್ನು ಹೆಚ್ಚಿಸುವುದರೊಂದಿಗೆ ಹರಳು ಬಿದ್ದುಹೋಗದಂತೆ ಕಾಪಾಡುತ್ತದೆ. ದೇದೀಪ್ಯಮಾನವಾಗಿ ಬೆಳಗುವ ದೀಪದ ಬುಡದಲ್ಲಿ ಕತ್ತಲಿರುವುದರಿಂದ ಬೆಳಕು ಇನ್ನಷ್ಟು ಪ್ರಜ್ವಲಿಸುತ್ತದೆ. ಇರುಳ ಹಿನ್ನೆಲೆಯಿದ್ದಾಗಲೇ ಬೆಳಕಿನ ಮಹತ್ವ ತಿಳಿಯುತ್ತದೆ. ಸಾಲುದೀಪಗಳಿದ್ದರೂ ನೆರಳ ಕತ್ತಲು ಇಲ್ಲವಾದರೆ ಆ ಬೆಳಕು ಬೇಕೆನಿಸದು. ಹೀಗೆಯೇ ಬೆಳೆಯ ನಡುವೆ ಅಂತರವಿದ್ದಾಗ, ಗದ್ದೆಗಳ ನಡುವಿನಲ್ಲಿ ಬದುವಿದ್ದಾಗ ಬೆಳೆ ಹುಲುಸಾಗಿ ಬೆಳೆಯಲು ಸಾಧ್ಯ. ಈ ರೀತಿ ಒಂದು ಇನ್ನೊಂದಕ್ಕೆ ಪ್ರೋತ್ಸಾಹಕವಾಗಿದೆ, ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯುತ್ತದೆ.

ಇದೇ ರೀತಿ ಬದುಕಿನಲ್ಲಿ ನಲಿವಷ್ಟೇ ಇದ್ದರೆ, ಗೆಲುವನ್ನೇ ಕಾಣುತ್ತಿದ್ದರೆ ಯಾವ ಸ್ವಾರಸ್ಯವೂ ಇರದು. ನಲಿವಿನ ನಡುವೆ ಅಂತಮುಖಿಯಾಗಿಸುವ ನೋವು, ಹಮ್ಮಡಗಿಸುವ ಸೋಲು ಜೀವದ ಪ್ರಗತಿಗೆ ಅತ್ಯಗತ್ಯ. ಜೀವನದ ಮೌಲ್ಯವು ಅರ್ಥವಾಗಲು ಸುಖ-ದುಃಖಗಳೆರಡೂ ಬೇಕು. ಹಸಿದವನಿಗೆ ಮಾತ್ರ ಅನ್ನದ ಬೆಲೆ ತಿಳಿದಿರುತ್ತದೆ. ಕಷ್ಟ-ನಷ್ಟಗಳಿಗೆ ಒಳಗಾದವನಿಗೆ ಮಾತ್ರ ಇತರರ ಬವಣೆಗಳು ಅರ್ಥವಾಗುತ್ತದೆ. ನೋವನ್ನು ಅನುಭವಿಸದ, ವಿಫಲತೆಯನ್ನು ಎದುರಿಸದ ವ್ಯಕ್ತಿ ಜೀವನದಲ್ಲಿ ಯಶಸ್ಸನ್ನು ಅನುಭವಿಸಲಾರ.

ಸೃಷ್ಟಿಯಲ್ಲೂ ಈ ಅಸಮತೆಯನ್ನು ಕಾಣುತ್ತೇವೆ. ಕಹಿ-ಸಿಹಿ, ಬಯಲು-ಬೆಟ್ಟ, ತಾಪ-ತಂಪು ಮುಂತಾದ ಗುಣವಿರೋಧಗಳನ್ನು ಇದ್ದೇ ಇವೆ. ಆದರೆ ಈ ವಿರೋಧವೇ ಇನ್ನೊಂದರ ಮಹತ್ವವನ್ನು ಎತ್ತಿಹಿಡಿಯುತ್ತದೆ. ಅಂತೆಯೇ ಅಳಿವು ಉಳಿವುಗಳು ವಿರುದ್ಧ ಪದಗಳಲ್ಲ. ಬೀಜವು ತನ್ನನ್ನು ತಾನು ಇಲ್ಲವಾಗಿಸಿಕೊಂಡು ಗಿಡವಾಗಿ ಬೆಳೆಯುತ್ತದೆ. ಹೊಸ ಹುಟ್ಟು ಬಾಳಿ ಬದುಕಬೇಕಾದರೆ, ಬದುಕಿದ್ದ ಜೀವಗಳು ಸಾವಿನ ಬಾಗಿಲಿನಾಚೆ ಸರಿಯಬೇಕು. ಕಾಲಪ್ರವಾಹದಲ್ಲಿ ಎಲ್ಲವೂ ಕೊಚ್ಚಿಕೊಂಡು ಹೋಗುತ್ತದೆ, ಹಳೆಯ ನೀರು ಸರಿದರಷ್ಟೇ ಹೊಸನೀರಿಗೆ ಅವಕಾಶ. ಆದುದರಿಂದ ಜೀವನದಲ್ಲಿ ಬದಲಾವಣೆ ಸಹಜ ಮತ್ತು ಅನಿವಾರ್ಯ. ಈ ರೀತಿ ವೈರುದ್ಧ್ಯಳು, ಅಸಮತೆ ಇರುವುದರಿಂದಲೇ ಭೂಮಿಯ ಬದುಕು ವೈವಿಧ್ಯವಾಗಿದೆ. ನಾವೀನ್ಯತೆ, ನೈಜತೆ ಉಳಿಸಿಕೊಂಡಿದೆ. ಮನುಷ್ಯನ ಮನಸ್ಸು ಕೂಡ ಈ ಸತ್ಯವನ್ನು ಅರ್ಥೈಸಿಕೊಳ್ಳಬೇಕು. ಕೊರತೆಗಳಿಗಾಗಿ ಕೊರಗದೆ, ಉತ್ಸಾಹದಿಂದ ಮುನ್ನಡೆದರಷ್ಟೇ ಸಂತೃಪ್ತಿ, ಸಂತೋಷ ಜತೆಗೂಡುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net