

ಆತುಮದ ಸಂಸ್ಥಿತಿಗೆ ದೈಹಿಕ ಸಮಾಧಾನ; |
ಭೌತವಿಜ್ಞಾನದಾ ರಾಷ್ಟ್ರಸಂಸ್ಥೆಗಳಾ |
ನೂತನ ವಿವೇಕಪ್ರಯೋಗಗಳಿನಾದೀತು ||
ಭೂತಿಸಂಪದ ಜಗಕೆ - ಮಂಕುತಿಮ್ಮ ||
ಹೀಗೆಯೇ ಲೋಕದ ಸಮೃದ್ಧಿಗೆ ಧಾರ್ವಿುಕ ನಂಬಿಕೆ- ಆಚರಣೆಗಳ ಜೊತೆಜೊತೆಗೆ ಭೌತವಿಜ್ಞಾನ, ರಾಜಕೀಯ ಮತ್ತು ಸೇವಾ-ಸಹಕಾರ ಸಂಸ್ಥೆಗಳಂತಹ ವ್ಯವಸ್ಥೆಗಳ ಉನ್ನತ ಯೋಜನೆಗಳೂ ಬೇಕು. ಹೀಗೆ ಅಭಿವೃದ್ಧಿಗಾಗಿ ಮಾಡುವ ಹಲವು ಪ್ರಯೋಗ, ಪ್ರಯತ್ನಗಳಿಗೆ ಸ್ವಾತಂತ್ರ್ಯರುವಂತೆಯೇ ಗುರುತರ ಜವಾಬ್ದಾರಿಯೂ ಉಂಟು. ರುಚಿಯಾದುದನ್ನು ತೋರಿಸಿ ಕಷ್ಟಕ್ಕೆ ಸಿಲುಕಿಸುವ ಪರಿಸ್ಥಿತಿಗೆ ಪ್ರಗತಿಯ ಪ್ರಯತ್ನ ಕಾರಣವಾಗಬಾರದು. ಪ್ರತಿ ರಾಷ್ಟ್ರವೂ ಒಳಿತಾಗಿ ಪ್ರಯೋಗಗಳನ್ನು, ನಾವೀನ್ಯಗಳನ್ನು ಶೋಧಿಸುವ ಧ್ಯೇಯವನ್ನು ಅನುಸರಿಸಿದರೆ ವಿಶ್ವವು ಶಾಂತಿ-ನೆಮ್ಮದಿಯಿಂದ ಬಾಳಬಲ್ಲುದು. ಜಗತ್ತಿನ ಯಾವುದೋ ದೇಶವು ಸಾಂಕ್ರಾಮಿಕ ರೋಗಕ್ಕೆ ಔಷಧ ಸಂಶೋಧಿಸಿದರೆ ಅದರಿಂದ ಪೂರ್ತಿ ಲೋಕಕ್ಕೆ ಹಿತವುಂಟಾಗುತ್ತದೆ. ಅದೇ ಇನ್ನೊಂದು ದೇಶವನ್ನು ನಾಶ ಮಾಡಬಲ್ಲಂತಹ ಕೃತ್ರಿಮಕ್ಕೆ ಕೈಹಾಕಿದರೆ ಪೂರ್ತಿ ಲೋಕಕ್ಕೆ ಕಂಟಕಪ್ರಾಯವೆನಿಸುತ್ತದೆ. ಲೋಕಕ್ಕೆ ಶಾಂತಿ-ಸಮೃದ್ಧಿ ಉಂಟಾಗುವ, ಕ್ರಿಯಾಯೋಜನೆಗಳನ್ನು, ವೈಜ್ಞಾನಿಕ ಸಂಶೋಧನೆಗಳನ್ನು ಅನುಸರಿಸುವಲ್ಲಿ ಪ್ರತಿ ರಾಷ್ಟ್ರವೂ ಪ್ರತಿಜ್ಞಾಬದ್ಧರಾಗಬೇಕು.
ಮನುಷ್ಯ ಜೀವಿತವನ್ನು ಸುಗಮಗೊಳಿಸುವ, ಸಮಯವನ್ನುಳಿಸುವ ವಿಜ್ಞಾನದ ಆವಿಷ್ಕಾರಗಳು, ಸಾಮಾಜಿಕ ಸುಧಾರಣೆಗಳು ರಾಷ್ಟ್ರದ ಏಳಿಗೆಗೆ ಅತ್ಯಗತ್ಯ. ಸ್ವಪ್ರಯತ್ನದಿಂದ ಹೊಂದಿಸಿಕೊಂಡ ಸುಖ-ಸೌಲಭ್ಯಗಳಿಂದಾಗಿ ಮನುಷ್ಯ ಆಲಸಿಯಾದರೆ, ವಿಲಾಸಿಜೀವನವನ್ನು ಅನುಸರಿಸಿದರೆ ಅದನ್ನು ಪ್ರಗತಿ ಎನ್ನಲಾಗದು. ಭಗವಂತನ ಕೃಪೆಯಿಲ್ಲದೆ ಕೇವಲ ಮನುಷ್ಯ ಪ್ರಯತ್ನದಿಂದಲೇ ಎಲ್ಲವೂ ಸಾಧಿಸಲ್ಪಡುತ್ತಿದೆ ಎಂಬ ಹಮ್ಮು ನೆತ್ತಿಗೇರಿದರೆ ಎಲ್ಲವನ್ನೂ ತನ್ನ ಅನುಕೂಲಕ್ಕೆ ತಕ್ಕಂತೆ ಬದಲಿಸಿಕೊಳ್ಳುತ್ತಾನೆ. ಪ್ರಗತಿ ಮನುಷ್ಯನನ್ನು ಅಹಂಕಾರಿ, ಸೋಮಾರಿಯನ್ನಾಗಿ ಮಾಡಬಾರದು. ಪ್ರಪಂಚದೆಲ್ಲೆಡೆ ವಿಜ್ಞಾನ, ವಾಣಿಜ್ಯ, ನೂತನ ತಂತ್ರಜ್ಞಾನ, ಆವಿಷ್ಕಾರಗಳಿಂದ ವಿಷಯಜ್ಞಾನ ಹೆಚ್ಚುತ್ತಿದ್ದರೂ ವಿವೇಕ ಕುಂಠಿತವಾಗುತ್ತಿದೆ. ತಿಳಿವು ಬಂದು, ವಿವೇಚನೆ ತಡವರಿಸಿದರೆ ಪ್ರಗತಿಯ ಪಥವು ಜಗತ್ತನ್ನು ವಿನಾಶದಂಚಿಗೆ ಕೊಂಡೊಯ್ಯಬಹುದು. ಆತ್ಮದ ಉತ್ತಮ ಸ್ಥಿತಿಗೆ ಶಾರೀರಿಕ ಸಮಾಧಾನ ಬೇಕಾಗಿರುವಂತೆ, ವಿಶ್ವದ ಉತ್ತಮತೆಗೆ ಪ್ರತಿ ರಾಷ್ಟ್ರವೂ ವಿವೇಚನೆಯಿಂದ ಕೂಡಿದ ಭೌತವಿಜ್ಞಾನ, ಸಾಮಾಜಿಕ ಅಭಿವೃದ್ಧಿಯ ಪ್ರಯೋಗಗಳನ್ನು ಅಳವಡಿಸಿಕೊಳ್ಳಬೇಕು. ಇವು ಕುರುಡು ನಂಬಿಕೆಯಾಗದೆ, ಪರಾಮರ್ಶೆಗೊಂಡ ಅನ್ವೇಷಣೆಯಾಗಬೇಕು. ಹೀಗೆ ಪ್ರತಿ ದೇಶವೂ ವಿವೇಕದಿಂದ ನಡೆದುಕೊಳ್ಳುವುದರಿಂದ ಲೋಕಕ್ಕೆ ಮಂಗಳವಾಗುತ್ತದೆ. ಪ್ರತಿ ದೇಶವೂ ಸುಭಿಕ್ಷಗೊಂಡು, ಜೀವನ ಸಮೃದ್ಧವಾಗುತ್ತದೆ.