

ಪರಬೊಮ್ಮನಾ ವಿಧಿಯ ನೇಮಿಸಿಹುದೇತಕೆನೆ |
ನರಜಾತಿ ಸಾನುಭೂತಿಯ ಕಲಿಯಲೆಂದು ||
ಪರರೆಂಬರಿಲ್ಲ ಆತ್ಮಾಂಶರೆಲ್ಲರೆನುತ್ತೆ |
ಬೆರೆ ನೀನು ವಿಶ್ವದಲಿ - ಮಂಕುತಿಮ್ಮ ||
‘ಪರಬ್ರಹ್ಮನು ವಿಧಿಯನ್ನು ನೇಮಿಸಿರುವುದಾದರೂ ಯಾಕೆ? ನರಜಾತಿಯು ಸಾನುಭೂತಿಯನ್ನು ಕಲಿಯಲೆಂದು. ಈ ರೀತಿ ಪರರು ಎಂಬವರಿಲ್ಲ, ಎಲ್ಲರೂ ಆತ್ಮಾಂಶರು ಎಂಬ ಭಾವದಲ್ಲಿ ನೀನು ವಿಶ್ವದಲ್ಲಿ ಬೆರೆತಿರು’ ಎನ್ನುತ್ತದೆ ಈ ಕಗ್ಗ.
ಆದರೆ ಲೌಕಿಕ ಬದುಕಿನ ಆಕರ್ಷಣೆಗೆ ಬಲಿಬೀಳುವ ಜೀವನು ಬದುಕಿನ ನಿಜಮೌಲ್ಯವನ್ನು ತಿಳಿಯುವುದೇ ಇಲ್ಲ. ಆತನನ್ನು ಕಾಮ, ಕ್ರೋಧಾದಿಗಳು ಆಳುತ್ತವೆ. ಇದರಿಂದಾಗಿ ಸಾಮಾಜಿಕ ಹಿತದ ಕುರಿತು ಯೋಚಿಸುವುದಿಲ್ಲ. ಬಂಧು-ಮಿತ್ರರೊಡನೆ, ಪರಿಚಿತರೊಡನೆ ವ್ಯಾವಹಾರಿಕ ದೃಷ್ಟಿಯಿಂದಷ್ಟೇ ಒಡನಾಡುತ್ತಾನೆ. ಇಂಥವರಿಗೆ ಬಾಂಧವ್ಯದ ಉದ್ದೇಶ ಪ್ರಯೋಜನವೇ ಆಗಿರುತ್ತದೆ. ಸಮೀಪವರ್ತಿಗಳ ನೋವು-ಸಂಕಟಗಳಿಗೆ ಸ್ಪಂದಿಸಲಾರದಷ್ಟು ಕಠಿಣ ಹೃದಯಿಯಾಗಿರುತ್ತಾನೆ. ಇದಕ್ಕೆಲ್ಲ ವಿಧಿಯೇ ಕಾರಣ ಎಂದು ನುಣುಚಿಕೊಳ್ಳುವಂತಿಲ್ಲ. ಜೀವನದ ನಿಜಾರ್ಥವನ್ನು, ಮೌಲ್ಯವನ್ನು ಅರಿಯದೆ ಹೋದುದರ ಪರಿಣಾಮದಿಂದಾಗಿ ರಾಕ್ಷಸಿ ಸ್ವಭಾವವೇ ವಿಜೃಂಭಿಸುತ್ತದೆ.
ಸಾಮಾನ್ಯವಾಗಿ ಜೀವನದಲ್ಲಿ ಗೆಲುವನ್ನು, ನಲಿವನ್ನು ಮಾತ್ರ ನೋಡಿದ ವ್ಯಕ್ತಿಗೆ ಜೀವನಾನುಭವದ ಕೊರತೆ ಇರುತ್ತದೆ. ಸಹಜವಾಗಿಯೇ ಆತನಲ್ಲಿ ಅಹಂಕಾರ ಮೈಗೂಡಿರುತ್ತದೆ. ಕಷ್ಟನಷ್ಟಗಳ ಪರಿಚಯವಿಲ್ಲದವರು ಜೀವನವನ್ನು ಹಗುರವಾಗಿ ತೆಗೆದುಕೊಳ್ಳುವ ಸಾಧ್ಯತೆಯೇ ಹೆಚ್ಚು. ಇಂಥವರು ಖಂಡಿತ ಇನ್ನೊಬ್ಬರ ದುಃಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಬದಲಾಗಿ ತಮ್ಮ ಹೆಚ್ಚುಗಾರಿಕೆಯನ್ನು ಮೆರೆಸಲು, ಸುಸ್ಥಿತಿಯನ್ನು ಪ್ರದರ್ಶಿಸಲು ಅವಕಾಶವಾಗಿ ಬಳಸಿಕೊಳ್ಳುತ್ತಾರೆ. ಕರುಣೆ, ಪ್ರೀತಿ, ಸಹಾನುಭೂತಿಗಳಂತಹ ಮಾನವೀಯ ಗುಣಗಳ್ಯಾವುವೂ ಇಲ್ಲದೆ; ತಾನೇ ಶ್ರೇಷ್ಠ, ತಾನು ಬಯಸಿದಂತೆ ಎಲ್ಲವೂ ಎಂಬ ಭ್ರಮೆಯಲ್ಲಿರುತ್ತಾರೆ. ಇಂತಹ ಹುಚ್ಚುತನವನ್ನು ಕಳೆಯಲೆಂದೇ ವಿಧಿಯು ಆಗೀಗ ಮುಗ್ಗರಿಸಿ ಬೀಳುವಂತೆ ಮಾಡುತ್ತಾನೆ. ಬದುಕಿನ ರಂಗಸ್ಥಳದಲ್ಲಿ ತನ್ನಿಚ್ಛೆಯಂತೆ ಕುಣಿಸುತ್ತಾನೆ. ಮನುಷ್ಯ ಸೋತಾಗಲೇ ಆತ್ಮಾವಲೋಕನವನ್ನು ಮಾಡಿಕೊಂಡು ತನ್ನ ದೌರ್ಬಲ್ಯಗಳನ್ನು ಗುರುತಿಸಿ ನಿಗ್ರಹಿಸಿಕೊಳ್ಳುವುದು. ಇದರ ಜೊತೆಗೆ ತಾನು ವಿಶಾಲ ಸೃಷ್ಟಿಯ ಒಂದು ಪುಟ್ಟ ಅಂಶ ರೂಪ ಎಂದೂ ಆತನಿಗೆ ಮನವರಿಕೆಯಾಗುತ್ತದೆ. ಸಕಲ ಚರಾಚರಗಳಲ್ಲೂ ಇರುವ, ಜಗತ್ತನ್ನೇ ಪೊರೆಯುತ್ತಿರುವ ಪರಮಾತ್ಮನ ಶಕ್ತಿಯನ್ನು ಅರ್ಥೈಸಿಕೊಳ್ಳುತ್ತಾನೆ. ಪರಮಾತ್ಮನ ಅಂಶವೇ ಆದ ಆತ್ಮಚೈತನ್ಯವು ತನ್ನೊಳಗಷ್ಟೇ ಅಲ್ಲದೆ ಇತರರೊಳಗೂ ಇರುವುದನ್ನೂ ಮನಗಾಣುತ್ತಾನೆ.
ಸರ್ವರೂ ಆತ್ಮಾಂಶಸಂಭೂತರೇ ಎನ್ನುವ ದೃಷ್ಟಿ ಆಂತರ್ಯಕ್ಕೆ ಮನನವಾದರೆ ಜನಸೇವೆಯೇ ಜನಾರ್ದನನ ಸೇವೆ ಎಂದು ಬಾಳುವುದು ಸುಲಭ. ಆಗ ಜನರು ಸುತ್ತಲಿರುವವರ ಕಷ್ಟ-ಸುಖಗಳಿಗೆ ಸಹಜವಾಗಿ ಸ್ಪಂದಿಸುತ್ತ, ಪರಿಹರಿಸುವುದಕ್ಕೆ ಪ್ರಯತ್ನಿಸುತ್ತ ಸೌಹಾರ್ದತೆಯಿಂದ ಸಂವೇದನಾಶೀಲರಾಗಿ ಬಾಳುತ್ತಾರೆ.