...ಸಂಸಾರದ ಆಡಳಿತವೆಂದರೆ ಅರಸನ ಊಳಿಗ. ಹರ್ಷದಿಂದ ಸೇವಿಸು ಎನ್ನುತ್ತಾರೆ ಡಿ.ವಿ.ಜಿ.

Kaggada Belaku vvani
Published on

   ಧರೆಯೆ ಕೋಸಲ, ಪರಬ್ರಹ್ಮನೇ ರಘುವರನು |

ಭರತನವೊಲನುಪಾಲನಕ್ರಿಯರು ನಾವು ||

ಅರಸನೂಳಿಗ ನಮ್ಮ ಸಂಸಾರದಾಡಳಿತ |

ಹರುಷದಿಂ ಸೇವಿಸೆಲೊ - ಮಂಕುತಿಮ್ಮ ||

‘ಈ ಭೂಮಿಯೇ ಕೋಸಲದೇಶ, ಪರಬ್ರಹ್ಮನೇ ರಘುವರ. ಭರತನ ಹಾಗೆ ಅನುಪಾಲನೆ ಮಾಡುವವರು ನಾವು. ನಮ್ಮ ಸಂಸಾರದ ಆಡಳಿತವೆಂದರೆ ಅರಸನ ಊಳಿಗ. ಹರ್ಷದಿಂದ ಸೇವಿಸು’ ಎನ್ನುತ್ತಾರೆ ಡಿ.ವಿ.ಜಿ. ರಾಮಾಯಣದಲ್ಲಿ ಸಹೋದರಪ್ರೇಮವನ್ನು ಸಾರಿ ಹೇಳಿದ ಕಥೆ ಜನಜನಿತ. ಶ್ರೀರಾಮನು ಪಿತೃವಾಕ್ಯ ಪರಿಪಾಲನೆಗಾಗಿ ಪಟ್ಟಾಭಿಷೇಕವನ್ನು ನಿರಾಕರಿಸಿ ವನಕ್ಕೆ ಹೋದನು. ಆ ವೇಳೆಗೆ ಭರತನು ಕೋಸಲದಲ್ಲಿರಲಿಲ್ಲ. ಶ್ರೀರಾಮ ವನವಾಸಕ್ಕೆ ತೆರಳಿದುದರಿಂದ ದುಃಖತಪ್ತ ದಶರಥನು ಅಸುನೀಗಿದನು. ಆಗ ಭರತನನ್ನು ಕೋಸಲಕ್ಕೆ ಕರೆತಂದರು. ತಂದೆಯ ಮರಣವಾರ್ತೆ ಕೇಳಿದ ಆತ ಶೋಕದಿಂದ ತತ್ತರಿಸಿದನು. ಹಿರಿಯಣ್ಣ ಶ್ರೀರಾಮನೂ ಅರಮನೆಯಲ್ಲಿಲ್ಲದ್ದನ್ನು ಕಂಡು ಅವನಿಗಾಗಿ ಹುಡುಕಾಡಿದ. ಭರತನ ಪ್ರಶ್ನೆಗಳಿಗೆ ಯಾರೂ ಸಮರ್ಪಕವಾಗಿ ಉತ್ತರಿಸಲಿಲ್ಲ. ಎಲ್ಲರೊಳಗೂ ತಿರಸ್ಕಾರ ಹೊಗೆಯಾಡುತ್ತಿರುವುದನ್ನು ಕಂಡ ಆತನು, ನಡೆದ ಎಲ್ಲ ವಿಚಾರವನ್ನು ಗುರು ವಸಿಷ್ಠರಿಂದ ತಿಳಿದು ಕ್ರೋಧಿತನಾದನು. ತಾಯಿಯ ಪ್ರಮಾದವನ್ನು ಸರಿಪಡಿಸಲು ನಿರ್ಧರಿಸಿ, ಅಣ್ಣನನ್ನು ಕರೆತರಲು ಕಾಡಿಗೆ ಹೋದನು. ತಮ್ಮನನ್ನು ಪ್ರೀತಿಯಿಂದ ಬರಮಾಡಿಕೊಂಡ ಶ್ರೀರಾಮನು ವನವಾಸ ಬಿಟ್ಟು ಹಿಂದಿರುಗಲು ಒಪ್ಪಲಿಲ್ಲ. ಆಗ ಭರತನು, ‘ರಾಮನ ಪ್ರತಿನಿಧಿಯಾಗಿ ಹದಿನಾಲ್ಕು ವರ್ಷ ಅಯೋಧ್ಯೆಯನ್ನು ಆಳುತ್ತೇನೆ, ನಂತರವೂ ಬಾರದೆ ಹೋದರೆ ಅಗ್ನಿಪ್ರವೇಶ ಮಾಡುತ್ತೇನೆ’ಂದು ಪ್ರತಿಜ್ಞೆ ಮಾಡಿ ರಾಮಪಾದುಕೆಯನ್ನು ಹೊತ್ತು ಅಯೋಧ್ಯೆಗೆ ಮರಳಿದನು. ರಾಮನ ಪಾರುಪತ್ಯದವನಂತೆ ದಕ್ಷತೆಯಿಂದ ಪ್ರಜಾಪಾಲನೆ ಮಾಡಿದನು. ರಾಮಪಾದುಕೆ ರಾಮನ ಪ್ರತಿನಿಧಿಯಾಯಿತು. ತಾನೂ ಅರಮನೆಯ ಸುಖಜೀವಿತದಿಂದ ವಿಮುಖನಾಗಿ ಸರಯೂತೀರದ ಪರ್ಣಕುಟೀರದಲ್ಲಿ ಯೋಗಿಯಂತೆ ಬಾಳಿದನು. ಹೀಗೆ ಹದಿನಾಲ್ಕು ವರ್ಷ ರಾಜ್ಯಭಾರ ಮಾಡಿದದರೂ ಆತನಲ್ಲಿ ರಾಜ್ಯದ ಬಗ್ಗೆ ಒಂದಿನಿತೂ ಮಮಕಾರ ಮೂಡಲಿಲ್ಲ. ಸಾಮಾನ್ಯವಾಗಿ ಜನತೆಗೆ ತಮ್ಮ ಒಡನಾಟಕ್ಕೆ ಬಂದ ಬಾಂಧವ್ಯ, ಓಡಾಡಿದ ನೆಲ, ವಹಿಸಿದ ಅಧಿಕಾರಗಳ ಬಗ್ಗೆ ಮೋಹ ಉದಿಸುತ್ತದೆ. ಇನ್ನೊಬ್ಬರಿಗೆ ಸೇರಿದ್ದು ಎಂದು ತಿಳಿದಿದ್ದರೂ ತಮ್ಮದಾಗಿಸಿಕೊಳ್ಳುವ ಹುನ್ನಾರವೂ ನಡೆಯುತ್ತದೆ. ಆದರೆ ಭರತನಲ್ಲಿ ಒಂದಿನಿತೂ ತನ್ನದು, ತನಗೇ ಇರಲಿ ಎಂಬ ಸ್ವಾರ್ಥ ಮೂಡಲಿಲ್ಲ. ನಗರದಲ್ಲಿದ್ದರೂ ಸಮಚಿತ್ತ ಕಳೆದುಕೊಳ್ಳದೆ ರಾಜನಲ್ಲದ ರಾಜನಾಗಿ, ಅಣ್ಣ ಶ್ರೀರಾಮನಿಗೆ ಸೇರಿದುದನ್ನು ಅವನಿಲ್ಲದ ಹೊತ್ತಿನಲ್ಲಿ ಕಾಪಾಡುವುದು ಕರ್ತವ್ಯವೆಂದು ಬಗೆದು ನಿರ್ವಂಚನೆಯಿಂದ ರಾಜ್ಯಭಾರ ಮಾಡಿದ. ಭರತನ ನಿಷ್ಠೆ, ನಿರ್ಮಮಭಾವದ ಕಾರ್ಯಕ್ಷಮತೆ ಅನನ್ಯ.

ಪರಬ್ರಹ್ಮನ ಈ ಜೀವಜಗತ್ತನ್ನು ಪರಿಪಾಲಿಸಲು ಭರತನಂತೆ ನಿಯುಕ್ತರಾದ ದೇವನ ಊಳಿಗದವರು ನಾವು. ರಘುವರನಂತೆಯೇ ಪರಬ್ರಹ್ಮನೂ ತನ್ನ ಸಾಮ್ರಾಜ್ಯದ ಹೊಣೆಯನ್ನು ನಮ್ಮ ಹೆಗಲಿಗೇರಿಸಿದ್ದಾನೆ. ಅದನ್ನು ಶಿರದಲ್ಲಿ ಹೊತ್ತು ಮಾಡುವ ಸೇವಕರು ನಾವಾಗಬೇಕು. ಲೋಕವ್ಯವಹಾರ, ಕುಟುಂಬ-ಸಂಸಾರದ ಆಡಳಿತಗಳೆಲ್ಲ ಪರಬ್ರಹ್ಮನಿಂದ ಸೂಚಿತವಾಗಿರುವ, ನಾವು ಮಾಡಲೇಬೇಕಾದ ಕರ್ತವ್ಯಗಳು. ಭಗವಂತನಿಗೆ ಸೇರಿದ ಈ ನೆಲ ಮತ್ತು ನಮ್ಮ ಬದುಕಿನಲ್ಲಿ ನಿಷ್ಠಾವಂತ ಸೇವಕರಂತೆ ಫಲಾಪೇಕ್ಷೆಯಿಲ್ಲದೆ ದುಡಿಯುವುದಕ್ಕೆ ಭರತನ ಬಾಳು ಪ್ರೇರಣೆಯಾಗಬೇಕು. ನಾನು, ನನ್ನದು ಎಂಬ ಮೋಹಪಾಶಗಳಿಂದ ಮುಕ್ತರಾಗುವುದರೊಂದಿಗೆ, ತಮ್ಮ ಪಾಲಿನ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ಮಾಡುವುದಷ್ಟೇ ತಮ್ಮ ಹೊಣೆ ಎಂಬ ಸಮರ್ಪಣಾಭಾವ ಬಲಿಯಬೇಕು. ನೋವು-ನಲಿವಿಗೂ ಮೀರಿದ ತೃಪ್ತಿ, ಬದುಕಿನ ಏರಿಳಿತಗಳಿಗೆ ಕಂಗೆಡದ ಸಮಚಿತ್ತ, ಲೋಕಹಿತಕ್ಕಾಗಿ ಶ್ರಮಿಸುವ ವಿಶಾಲತೆಗಳಿಂದ ಜೀವವು ಪಕ್ವವಾಗುತ್ತದೆ. ಪರಮಾತ್ಮನ ಸಾಮೀಪ್ಯದ ಅನುಭವದಿಂದ ಆನಂದಿತವಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net