

ಜಡವೇನು? ಜೀವವೇಂ? ಚೈತನ್ಯ ನಿದ್ರಿಸಿರು |
ವೆಡೆಯೆಲ್ಲ ಜಡಲೋಕ ಕಲ್ಲು ಕಡ್ಡಿ ಕಸ ||
ಅಡಗಿರ್ಪ ಚೈತನ್ಯವೆಚ್ಚರಲು ಜಂತು ಜಗ |
ಜಡವೆ ಜೀವದ ವಸತಿ - ಮಂಕುತಿಮ್ಮ ||
ಬೆನ್ನಿನ ಮೇಲೆ ಹೊತ್ತು ತೆವಳುವ ಬಸವನಹುಳ ಇರುವವರೆಗೆ ಚಿಪ್ಪು ಮುಂದೆ ಸಾಗುತ್ತದೆ. ಹುಳು ಇಲ್ಲದೆ ಹೋದರೆ ಚಿಪ್ಪು ಮಣ್ಣಿಗುರುಳುತ್ತದೆ. ಹಾಗಾಗಿ ಆತ್ಮಚೈತನ್ಯ ಇರುವ ಎಡೆಗಳಲ್ಲಷ್ಟೇ ಜೀವಂತಿಕೆ ಇರುತ್ತದೆ. ಅದು ನಿದ್ರಿಸಿದ್ದರೆ ಅಥವಾ ಇಲ್ಲವಾದರೆ ಜೀವವೇ ಜಡವಾಗಿ ಕಲ್ಲಿನಂತಾಗುತ್ತದೆ. ಭಗವದ್ ಜ್ಞಾನ ಇದ್ದರೆ ಜೀವ-ಜಗತ್ತು ಮತ್ತು ಅದನ್ನು ನಿಯಂತ್ರಸುವ ಈಶ್ವರನ ಸಾಕ್ಷಾತ್ಕಾರವಾಗುತ್ತದೆ. ಅಲ್ಲದೆ ಹೋದರೆ ಮನಸ್ಸು ಜಡವಾಗುತ್ತದೆ. ನಿರಾಶೆ, ಅಸಹಾಯಕತೆಗಳಿಂದ ಮುದುಡುತ್ತದೆ. ಜೀವನೋತ್ಸಾಹವು ಕುಂದುತ್ತದೆ.
ಶರೀರವೆನ್ನುವುದು ಒಟ್ಟು ಭೌತಿಕ ಜಗತ್ತಿನ ವಿಭಜಿಸಲಾಗದ ಒಂದು ಅಂಗ. ಯಾವುದು ಪೂರ್ತಿ ಪ್ರಪಂಚವನ್ನು ವ್ಯಾಪಿಸಿ, ಪೋಷಿಸುತ್ತಿದೆಯೋ ಆ ವಿಶ್ವಾತ್ಮಚೈತನ್ಯದಲ್ಲಿ ಪ್ರಕೃತಿಯ ಎಲ್ಲವೂ ಸೇರಿವೆ. ಆ ಚೈತನ್ಯ ಇರುವುದರಿಂದಲೇ ಜಂತುಜಗ ಕ್ರಿಯಾಶೀಲವಾಗಿದೆ, ಆ ಶಕ್ತಿಯಿಲ್ಲದೆ ಹೋದರೆ ಜೀವಗಳೂ ಇಲ್ಲ, ಜಡವೂ ಇಲ್ಲ. ಈ ಜ್ಞಾನದ ಸಿದ್ಧಿಯೂ ಆತ್ಮಚೈತನ್ಯದ ಮುನ್ನಡೆಗೆ ಅಗತ್ಯ. ಭೋಗಜೀವಿತದಲ್ಲಿ, ಕ್ಷಣಿಕ ಸುಖಗಳನ್ನು ಅರಸಿ ಹೊರಡುವವನೊಳಗೆ ಆತ್ಮಶಕ್ತಿ ಕ್ಷೀಣಿಸಿರುತ್ತದೆ. ಯಾವಾಗ ನಿಯಾಮಕ ಶಕ್ತಿಯ ಪರಿಚಯವಾಗುವುದೋ ಆಗ ಅಜ್ಞಾನದ ಜಡತೆ ಕಳೆದುಹೋಗುತ್ತದೆ. ಜಡವಾದುದೇ ಜೀವದ ವಸತಿ. ಆತ್ಮವು, ವಲಸಿಗರಂತೆ ಒಂದಷ್ಟು ಕಾಲ ದೇಹದಲ್ಲಿ ಉಳಿದು ಸಾವಿನ ಹೆಬ್ಬಾಗಿಲನ್ನು ದಾಟಿ ಇನ್ನೊಂದು ಜಡ ದೇಹದಲ್ಲಿ ವಸತಿ ಹೂಡುತ್ತದೆ. ಜೀವ ಎದ್ದು ನಡೆದ ಮೇಲೆ ಉಳಿಯುವುದು ಜಡವಷ್ಟೇ. ಜೀವವಿದ್ದರೆ ಮಾತ್ರ ಜಡಕ್ಕೆ ಮೌಲ್ಯ, ಉಳಿಗಾಲ. ಕಲ್ಲು, ಕಸ-ಕಡ್ಡಿಗಳಂತೆ ಶರೀರಕ್ಕೂ ವಿನಾಶ, ಜಡತೆ ಇರುವುದರಿಂದ ಜೀವೋತ್ಕರ್ಷಕ್ಕಾಗಿ ಅಂತರಂಗವನ್ನು ಶೋಧಿಸಬೇಕು. ಆಲಸ್ಯ ತೊರೆದ, ಜೀವನದ ನಿಜಾರ್ಥವನ್ನು ಅರಸಿ ನಡೆವ ಜೀವಗಳು ಶುಷ್ಕವಾಗಿರದೆ ಜೀವನೋತ್ಸಾಹದಿಂದ ಬಾಳುತ್ತವೆ.