

ತನುಭವವ್ಯಾಮೋಹ ಮುಸುಕಿತಾ ವ್ಯಾಸನಂ |
ಜನಿಪುದದು ಪ್ರಕೃತಿತಂತ್ರದೆ ಹೃದಯತಲದೊಳ್ ||
ಕ್ಷಣಮಾತ್ರಮಾನುಮದು ಕಣ್ಣೀರ ಬರಿಸುವುದು |
ಗಣಿಸಬೇಡದನು ನೀಂ - ಮಂಕುತಿಮ್ಮ ||
‘ಮಕ್ಕಳ ಮೋಹ ವ್ಯಾಸರನ್ನೂ ಮುಸುಕಿತ್ತು. ಪ್ರಕೃತಿಯ ತಂತ್ರದಿಂದ ಅದು ಹೃದಯದಾಳದಲ್ಲಿ ಹುಟ್ಟುತ್ತದೆ. ಕ್ಷಣಮಾತ್ರವೇ ಆದರೂ ಕಣ್ಣೀರು ತರಿಸುತ್ತದೆ. ಅದನ್ನು ಗಣಿಸದಿರು’ ಎನ್ನುತ್ತದೆ ಈ ಕಗ್ಗ.
ಪ್ರಾಕೃತಿಕವಾಗಿಯೇ ಮನುಷ್ಯನಲ್ಲಿ ಸತ್ತ್ವ, ರಜಸ್ಸು, ತಮಸ್ಸು ಎಂಬ ಗುಣಗಳಿವೆ. ಇವು ವ್ಯಕ್ತಿಯಲ್ಲಿ ಅಸಮವಾಗಿ ಮೇಳೈಸಿ, ಮಾಯಾಮೋಹಕ್ಕೆ ತಳ್ಳಿಬಿಡುತ್ತವೆ. ಇದರಿಂದಾಗಿ ವ್ಯಕ್ತಿಯ ಬುದ್ಧಿಗೆ ಮಂಜು ಕವಿದಂತಾಗುತ್ತದೆ. ನ್ಯಾಯ-ಅನ್ಯಾಯ, ಸರಿ-ತಪ್ಪುಗಳ ವಿವೇಚನೆ ಇಲ್ಲದೆ ಭಾವಾವೇಶಕ್ಕೆ ಒಳಗಾಗುತ್ತಾನೆ. ಹೀಗೆ ವ್ಯಕ್ತಿಯನ್ನು ಕಂಗೆಡಿಸುವ ನಂಟುಗಳಲ್ಲಿ ಮಕ್ಕಳ ಬಗೆಗಿನ ವ್ಯಾಮೋಹವೂ ಒಂದು. ಅದೆಂಥ ಪ್ರತಿಕೂಲ ಸಂದರ್ಭಗಳು ಎದುರಾದರೂ ಎಲ್ಲವನ್ನೂ ಸಮಚಿತ್ತದಲ್ಲೇ ಎದುರಿಸಬಲ್ಲ ವ್ಯಕ್ತಿಗಳೂ ತಮ್ಮ ಮಕ್ಕಳ ವಿಚಾರದಲ್ಲಿ ದುರ್ಬಲರಾಗಿರುತ್ತಾರೆ. ಮಕ್ಕಳು ಅನಾರೋಗ್ಯಕ್ಕೆ ತುತ್ತಾದರೆ, ಒಂದೆರಡು ದಿನ ಪ್ರವಾಸಕ್ಕೋ, ನೆಂಟರಿಷ್ಟರ ಮನೆಗೋ ಹೋದರೆ ಚಡಪಡಿಸುತ್ತಾರೆ. ಮಕ್ಕಳಿಗೆ ತಮ್ಮದೇ ಆಸೆ, ಕನಸುಗಳಿವೆ ಎನ್ನುವುದನ್ನೂ ಗಮನಿಸದೆ, ತಮ್ಮ ಅಭಿಪ್ರಾಯಗಳನ್ನು, ತಮಗೆಟುಕದ ಕನಸುಗಳನ್ನು ಮಕ್ಕಳ ಮೇಲೆ ಹೇರುತ್ತಾರೆ. ಮಕ್ಕಳಿಗೆ ಹೆತ್ತವರ ಈ ಅತಿ ವ್ಯಾಮೋಹವೇ ಬಂಧನವೆನ್ನಿಸುವುದೂ ಸುಳ್ಳಲ್ಲ.
ಭಾಗವತ ಪುರಾಣದಲ್ಲಿ ವ್ಯಾಸಮಹರ್ಷಿಗಳ ಕಥೆಯೊಂದಿದೆ. ವ್ಯಾಸರ ಮಗ ಶುಕಮಹರ್ಷಿಗಳು ಗರ್ಭದಲ್ಲಿರುವಾಗಲೇ ಬ್ರಹ್ಮಜ್ಞಾನಿಗಳಾಗಿದ್ದರು. ಹಾಗಾಗಿ ಬ್ರಹ್ಮೋಪದೇಶಕ್ಕೂ ಮೊದಲೇ ಮನೆ ಬಿಟ್ಟು ಸಾಧನೆಯ ಹಾದಿ ತುಳಿದರು. ವ್ಯಾಸರು ದಿವ್ಯಜ್ಞಾನಿಗಳಾಗಿದ್ದರೂ ಮಗನು ಮನೆ ಬಿಟ್ಟುಹೋದುದನ್ನು ತಿಳಿದು ಕಣ್ಣೀರಿಟ್ಟರು. ಪುತ್ರವ್ಯಾಮೋಹದಿಂದ ಮಗನ ಹೆಸರನ್ನು ಕೂಗಿ ಕರೆಯುತ್ತ ಕಾಡುಮೇಡುಗಳಲ್ಲಿ ಅಲೆದಾಡಿದರು. ಆಗ ಮರ-ಗಿಡ, ಗುಡ್ಡ-ಬೆಟ್ಟಗಳು ವ್ಯಾಸರ ದನಿಯನ್ನು ಪ್ರತಿದ್ವನಿಸಿತು. ಅದನ್ನು ಕೇಳಿ ‘ಶುಕನೇ ಬ್ರಹ್ಮ, ಬ್ರಹ್ಮನೇ ಶುಕನು, ಶುಕನು ಎಲ್ಲೆಲ್ಲೂ ಮಿಳಿತನಾಗಿದ್ದಾನೆ’ ಎಂದರಿತು, ಸಮಾಧಾನ ಹೊಂದಿದರು. ಹಾಗೆ ಪುತ್ರವ್ಯಾಮೋಹವು ಎಷ್ಟೇ ದೃಢಚಿತ್ತರನ್ನೂ ಅಲ್ಲಾಡಿಸಿಬಿಡುತ್ತದೆ. ದಶರಥ, ದ್ರೋಣರಂಥ ಮೇಧಾವಿಗಳ ಉದಾಹರಣೆಗಳು ಪುರಾಣ-ಇತಿಹಾಸಗಳಲ್ಲಿವೆ. ಯಾವುದೋ ಸಂದರ್ಭದಲ್ಲಿ ತಮ್ಮ ಮೋಹ ಅತಿಯಾಯಿತೆನ್ನುವುದು ತಿಳಿದರೂ ಆಗ ಕಾಲ ಮಿಂಚಿರುತ್ತದೆ. ಪ್ರಾಣಿ-ಪಕ್ಷಿಗಳೂ ಒಂದು ಹಂತದ ಬಳಿಕ ಮರಿಗಳ ಮೇಲಿನ ವ್ಯಾಮೋಹದಿಂದ ಬಿಡಿಸಿಕೊಳ್ಳುತ್ತವೆ. ಬುದ್ಧಿವಂತನಾದ ಮನುಷ್ಯ ಮಾತ್ರ ಭಾವನೆಗಳಿಗೆ ಬಲಿಯಾಗುತ್ತಾನೆ. ಇದರಿಂದ ಪಾರಾಗುವುದು ಹೇಗೆ? ವಿವೇಕಿಗಳಾದವರು ನಿಸರ್ಗಸಹಜವಾದ ತ್ರಿಗುಣಗಳಲ್ಲಿನ ಸತ್ತ್ವಗುಣವನ್ನು ಉದ್ದೀಪಿಸುವಂಥ ಸತ್ಕರ್ಮಗಳನ್ನು ಮಾಡುತ್ತ ತಮ್ಮಲ್ಲುದಿಸಿದ ವ್ಯಾಮೋಹವನ್ನು ಕೈಬಿಡುತ್ತಾರೆ. ಮಕ್ಕಳ ಮೇಲಿನ ವ್ಯಾಮೋಹವು ಪ್ರಕೃತಿಸಹಜವೇ ಆಗಿದ್ದರೂ ಅದನ್ನು ಗಮನಿಸದೆ, ತನ್ನ ಕರ್ತವ್ಯವನ್ನು ನಿರ್ಮಮ ಭಾವದಿಂದ ಮಾಡುವ ಎಚ್ಚರ ಮೂಡಿದರೆ ಕಣ್ಣೀರಿಡುವ ಪರಿಸ್ಥಿತಿ ಎದುರಾಗದು. ಎಲ್ಲವನ್ನೂ ಶಾಂತವಾಗಿ ನಿಭಾಯಿಸುವ ಸಾಮರ್ಥ್ಯ ಮೈಗೂಡಬಹುದು.