ಕಗ್ಗದ ಬೆಳಕು: ವಿಧಿಯ ದಂಡನಿರ್ಣಯ

Kaggada Belaku vvani
Published on

ದಂಡನಿರ್ಣಯದಿ ನೀಂ ಕ್ಷಮಿಸೆನಲ್ ನ್ಯಾಯಪತಿ |

ಹಿಂದಿನಾ ನಿನ್ನೊಳ್ತನವನ್ ಅಂದಿನಳಲನ್ ||

ತಂದೆಬಗೆಯಿಂ ಬಗೆದು ಶಾಸನೋಗ್ರವನಿನಿತು |

ಕುಂದಿಸಲಿಕಾಗದೇಂ? - ಮಂಕುತಿಮ್ಮ ||

‘ನ್ಯಾಯಸ್ಥಾನದಲ್ಲಿ ನ್ಯಾಯಾಧೀಶರು ದಂಡನಿರ್ಣಯ ಮಾಡುವ ಸಂದರ್ಭದಲ್ಲಿ, ಹಿಂದಿನ ನಿನ್ನ ಒಳ್ಳೆಯತನವನ್ನು, ಅಂದಿನ ಅಳಲನ್ನು ತಂದೆಯಂತೆಯೇ ಕಂಡು; ಶಿಕ್ಷೆಯ ಕಾಠಿಣ್ಯವನ್ನು ಒಂದಿಷ್ಟಾದರೂ ಕಡಿಮೆಗೊಳಿಸುತ್ತಾರಲ್ಲವೇ?’ ಎನ್ನುತ್ತ, ‘ವಿಧಿಯೂ ಹೀಗೆಯೇ ನಡೆದುಕೊಳ್ಳಬಾರದೇಕೆ?’ ಎಂದು ಪ್ರಶ್ನಿಸುತ್ತದೆ ಈ ಕಗ್ಗ.

ಬದುಕಿನಲ್ಲಿ ಎಲ್ಲರೂ ಅರಿತೋ ಅರಿಯದೆಯೋ ತಪ್ಪುಗಳನ್ನು ಮಾಡುತ್ತಿರುತ್ತಾರೆ. ಮಾಡುವ ಕಾಲಕ್ಕೆ ಸರಿ ಎನ್ನಿಸಿದ್ದು ಪರಿಣಾಮದಲ್ಲಿ ಕೆಡುಕನ್ನುಂಟುಮಾಡುವುದು, ಭಾವಾವೇಶಕ್ಕೆ ಸಿಲುಕಿ ಅಚಾತುರ್ಯಗಳಾಗುವುದು, ನಿರ್ಲಕ್ಷ್ಯದಿಂದಾಗಿ ಪ್ರಮಾದ ಸಂಭವಿಸುವುದು ಸಾಮಾನ್ಯ. ತಪ್ಪನ್ನು ಒಪ್ಪಿಕೊಳ್ಳದೆ ಸಮರ್ಥಿಸಿಕೊಳ್ಳಲು ಹವಣಿಸುವುದು, ಇತರರಲ್ಲಿ ದೋಷಗಳನ್ನು ಹುಡುಕುವುದು ಇದ್ದೇ ಇದೆ. ಇವೆಲ್ಲ ಸಾಮಾನ್ಯ ಬದುಕಿನ ಪಾಡು. ಹಾಗಾಗಿಯೇ ಕಾನೂನು, ನ್ಯಾಯಾಲಯ, ನ್ಯಾಯಾಧೀಶರು, ನ್ಯಾಯತೀರ್ವನ ಮುಂತಾದ ವ್ಯವಸ್ಥೆಗಳು ಸಮಾಜದ ಹಿತಕ್ಕಾಗಿ ರೂಪಿಸಲ್ಪಟ್ಟಿವೆ.

ನ್ಯಾಯತೀರ್ವನದಲ್ಲಿ ನೀಡುವ ಶಿಕ್ಷೆಯು ಅಪರಾಧಿಯ ಮನಸ್ಸಿನ ಪರಿವರ್ತನೆಗೆ ಕಾರಣವಾಗಬೇಕೆಂಬ ಮಹತ್ತರವಾದ ಉದ್ದೇಶವಿದೆ. ಸಮಾಜದ ಸ್ವಾಸ್ಥ್ಯನ್ನು ಕಾಪಾಡುವ ಚಿಂತನೆಯೂ ಇರುತ್ತದೆ. ನ್ಯಾಯಾಲಯದಲ್ಲಿ ಅಪರಾಧಿಯಾಗಿ ನಿಂತವನು ತಾನೆಸಗಿದ ತಪ್ಪಿಗೆ ನಿಜವಾಗಿಯೂ ಪಶ್ಚಾತ್ತಾಪಪಡುತ್ತಿದ್ದರೆ, ನ್ಯಾಯಾಧೀಶರು ಆತನಿಗೆ ವಿಧಿಸುವ ಶಿಕ್ಷೆಯ ಪ್ರಮಾಣವನ್ನು ತುಸು ಕಡಿಮೆ ಮಾಡಬಹುದು. ತಪ್ಪು ಮಾಡಿ ಸಿಕ್ಕಿಬಿದ್ದ ಮಗನಿಗೆ ಶಿಕ್ಷೆ ನೀಡಲು ಮುಂದಾದ ತಂದೆಯು, ಅವನ ಅಳು, ಕ್ಷಮಾಯಾಚನೆ ಕೇಳಿ ಹಿಂದೆ ಸರಿಯುವಂತೆಯೇ; ನ್ಯಾಯಾಧೀಶರೂ ಅಪರಾಧಿಯ ಹಿನ್ನೆಲೆಯನ್ನು, ಆತ ಹಿಂದೆ ಮಾಡಿದ ಸತ್ಕಾರ್ಯಗಳನ್ನು ಗಮನಿಸಿ ಕರುಣೆ ತೋರಬಹುದು.

ವಿಶ್ವವೆಂಬ ನ್ಯಾಯಾಲಯದಲ್ಲಿ ಈ ರೀತಿಯ ಅನುಕಂಪಕ್ಕೆ ಆಸ್ಪದವಿಲ್ಲ. ಮನುಷ್ಯನೆಸಗಿದ ದೋಷಗಳಿಗೆ ವಿಧಿಯೆಂಬ ನ್ಯಾಯಾಧೀಶನು ಯಾವ ಕಾರಣಕ್ಕೂ ಶಿಕ್ಷೆಯನ್ನು ಸಡಿಲಗೊಳಿಸಲಾರ. ವ್ಯಕ್ತಿಯು ಆರ್ಜಿಸಿದ ಪಾಪ-ಪುಣ್ಯಗಳನ್ನು, ಋಣಶೇಷವನ್ನು ಗಮನಿಸಿ ವಿಧಿಯು ಒಡ್ಡುವ ಕಠಿಣ ಪರೀಕ್ಷೆಗಳನ್ನು ಎದುರಿಸಲೇಬೇಕು. ಇದರರ್ಥ ವಿಧಿಯು ನಿಷ್ಕರುಣಿಯೆಂದೇನಲ್ಲ. ಪರಮಾತ್ಮನೆಡೆಗೆ ಪಯಣ ಹೊರಟಿರುವ ಆತ್ಮನೆಂಬ ಯಾತ್ರಿಕನನ್ನು ಸಿದ್ಧಗೊಳಿಸುವ ಕಾರ್ಯವನ್ನು ವಿಧಿಯು ಮಾಡುತ್ತಾನೆ.

ಆತ್ಮೋನ್ನತಿಯನ್ನು ಹೊಂದಬೇಕಾದರೆ ಇಹಜೀವನದ ಕುಲುಮೆಯಲ್ಲಿ ಜೀವವು ಒದ್ದಾಡಲೇಬೇಕು. ಜೀವನದ ಹೋರಾಟದಲ್ಲಿ ಒದ್ದಾಡಿ, ಅವುಡುಗಚ್ಚಿ ಸಹಿಸಿ ಬಾಳುವ ಯತ್ನದಲ್ಲಿ ವ್ಯಕ್ತಿಯು ತನ್ನ ತಾನರಿಯುತ್ತಾನೆ. ಜೀವನಾನುಭವಗಳಿಂದ ಪಕ್ವವಾದಂತೆ ಆತ್ಮವಿಸ್ತರಣ ಸಾಧ್ಯವಾಗುತ್ತದೆ. ಇದರಿಂದಾಗಿ ವಿಶ್ವದೆಲ್ಲೆಡೆ ಅವ್ಯಕ್ತವಾಗಿ ವ್ಯಾಪಿಸಿರುವ ಅನಂತ ಶಕ್ತಿಯ ಪರಿಚಯವಾಗುತ್ತದೆ. ಬದುಕಿನ ಪ್ರತಿ ಗಳಿಗೆಯನ್ನೂ ಆ ಶಕ್ತಿಯೇ ಸೂತ್ರಧಾರನಂತೆ ಸಂಯೋಜಿಸಿದೆ, ಜಗದ ಜೀವರುಗಳು ಆ ವಿಶ್ವಾತ್ಮ ಚೈತನ್ಯದ ಆಣತಿಯನ್ನು ಪರಿಪಾಲಿಸುವ ಒಂದೊಂದು ಪಾತ್ರಗಳು ಮಾತ್ರ ಎಂಬ ಸತ್ಯ ಅರಿವಾದಂದು ಕಷ್ಟ-ಕಾರ್ಪಣ್ಯಗಳನ್ನು ಸಹಿಸಿಕೊಳ್ಳುವ ದೃಢತೆ ಮೂಡುತ್ತದೆ.

ಜೀವೋತ್ಕರ್ಷ ಸಾಧ್ಯವಾಗಬೇಕಾದರೆ ಲೋಕಜೀವನದ ತಾಪತ್ರಯಗಳನ್ನು ಎದುರಿಸಲೇಬೇಕು. ವಿಧಿಯೊಡ್ಡುವ ಪರೀಕ್ಷೆಯಲ್ಲಿ ಉತ್ತೀರ್ಣರಾಗದೆ ಅರ್ಹರಾಗಲು ಸಾಧ್ಯವಿಲ್ಲ. ಹಾಗಾಗಿ ಜೀವಿತವನ್ನು ದೇವನಿಗರ್ಪಿಸಿ ಸಂಪೂರ್ಣ ಶರಣಾಗುವುದೇ ಸೂಕ್ತ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net