

ಎಂದಿಗಾನುಂ ನಿನ್ನ ಪೂರ್ವ ಋಣಗಳ ಲೆಕ್ಕ |
ನೊಂದಬೇಕೆಂದಿರ್ದೊಡಿಂದೆ ಮೊದಲನಿಡು ||
ಅಂದಿಸಿಕೊ ಹೆರರೆನಿಪರನು ಹೃದಯವಿಸ್ತರದೆ |
ಹೊಂದು ವಿಶ್ವಾತ್ಮತೆಯ - ಮಂಕುತಿಮ್ಮ ||
ಜೀವವು ಈ ಜನ್ಮ ಪಡೆವ ಮೊದಲು ಹಲವು ಜನ್ಮಗಳನ್ನು ದಾಟಿ ಬಂದಿರುತ್ತದೆ. ಆಗೆಲ್ಲ ಮಾಡಿರಬಹುದಾದ ಪಾಪ-ಪುಣ್ಯದ ಕರ್ಮಶೇಷಗಳು, ಋಣಭಾರದ ಉಳಿಕೆಗಳು ಮುಂದಿನ ಜನ್ಮಗಳಿಗೂ ಜತೆಗೂಡಿರುತ್ತವೆ ಮತ್ತು ಫಲ ಕೊಡುವ ಕಾಲಕ್ಕಾಗಿ ಕಾಯುತ್ತಿರುತ್ತವೆ. ವಿಧಿಯ ಕಣ್ಗಾವಲಲ್ಲಿರುವ ಈ ನಿಯಮಕ್ಕೆ ಪ್ರತಿಯೊಬ್ಬರೂ ಒಳಗಾಗಲೇಬೇಕು. ಹಾಗಾಗಿ ಬದುಕಿನಲ್ಲಿ ನಾವೇನೋ ಅಂದುಕೊಳ್ಳುತ್ತೇವೆ, ಬೇರೇನೋ ಸಂಭವಿಸುತ್ತದೆ. ಪ್ರಾಮಾಣಿಕ ಪ್ರಯತ್ನವಿದ್ದರೂ ಗೆಲುವು ಕಾಣದೆ ಕುಸಿಯುತ್ತೇವೆ. ಆಕಸ್ಮಿಕ ಆಘಾತಗಳಿಗೆ ಜೀವವು ನಡುಗುತ್ತದೆ. ಬಾಂಧವ್ಯಗಳು ಇದ್ದಕ್ಕಿದ್ದಂತೆ ಕಳಚಿಬಿಡುತ್ತವೆ ಅಥವಾ ಉರುಳಾಗಿ ಹಿಂಸಿಸುತ್ತವೆ. ಜೀವನೋತ್ಸಾಹವೇ ಕುಂದಿದಂತೆನಿಸುತ್ತದೆ.
ಹೀಗೆ ವಿಧಿಯ ಲೆಕ್ಕಾಚಾರಕ್ಕೆ ಸಿಲುಕಿ ಜೀವ ನರಳುವುದನ್ನು ತಪ್ಪಿಸಬೇಕೆಂದರೆ ಹೊತ್ತು ತಂದ ಹೊರೆಯನ್ನು ಇಳಿಸಲೇಬೇಕು. ಋಣದ ಎಳೆಗಳಿಂದ ಬಿಡಿಸಿಕೊಳ್ಳಲೇ ಬೇಕು. ಅನುಭವಿಸಿಯೇ ತೀರಬೇಕೆಂಬ ವಿಧಿಯ ಕಟ್ಟುಪಾಡಿಗೆ ಒಳಗಾಗಿದ್ದರೂ ಅದರಿಂದ ಮುಕ್ತರಾಗಲು ಸಾಧ್ಯ. ಋಣದ ಲೆಕ್ಕಾಚಾರವನ್ನು ಆದಷ್ಟು ಬೇಗ ಮುಗಿಸಬೇಕು ಎಂಬ ಹಂಬಲ ಸಹಜ. ಆದ್ದರಿಂದ ತಡಮಾಡದೆ, ಇನ್ನೊಂದು ಯೋಚಿಸದೆ ಋಣವನ್ನು ತೀರಿಸಲು ಆರಂಭಿಸಬೇಕು. ಆದರೆ ಯಾರಿಂದ ಏನನ್ನು ಪಡೆದಿದ್ದೇವೆ, ಪಡೆಯಲಿದ್ದೇವೆ ಎಂದೇ ತಿಳಿಯದಿರುವ ನಾವು ಋಣ ಮುಕ್ತರಾಗುವುದಾದರೂ ಹೇಗೆ?
ಋಣಕ್ಕೆ ಕಾರಣವಾದ ‘ನಾನು, ನನ್ನದು, ನನ್ನಿಂದಲೇ’ ಎಂಬ ಭಾವವನ್ನು ತೊಡೆದುಕೊಂಡಾಗ ದಾರಿ ಸ್ಪಷ್ಟವಾಗುತ್ತದೆ. ಈ ಭಾವವು ಬಲವಾಗಿದ್ದರೆ ವ್ಯಾಮೋಹ, ಮತ್ಸರಾದಿಗಳು ಪುಟಿದೆದ್ದು ಬಾಂಧವ್ಯದೆಳೆಗಳನ್ನು ಇನ್ನಷ್ಟು ಬಿಗಿಯಾಗಿಸುತ್ತವೆ. ‘ಎಲ್ಲವೂ ನನ್ನಿಂದಲೇ, ನಾನು ಹೀಗಿರುವವ’ ಎಂಬ ನಿಲುವನ್ನು ಬಿಟ್ಟು, ‘ನಾನು ಏನೂ ಅಲ್ಲ’ ಎಂಬ ಸ್ಥಿತಿಗೆ ಮನಸ್ಸು ಹದವಾಗಬೇಕು. ಆನಂತರ ‘ಎಲ್ಲರಲ್ಲೂ ನಾನೇ ಇದ್ದೇನೆ’ ಎಂಬ ವಿಶಾಲ ಚಿಂತನೆ ಅಂತರಂಗದಲ್ಲಿ ದೃಢವಾಗಬೇಕು. ಯಾರೊಬ್ಬರನ್ನೂ ಇತರರು ಎಂದು ತಿಳಿಯದೆ, ಎಲ್ಲರೂ ನನ್ನಂತೆಯೇ ಎಂದು ಆತ್ಮೀಯವಾಗಿ ಒಡನಾಡುವುದು ರೂಢಿಯಾಗಬೇಕು.
ಅಂತರಂಗದಲ್ಲಿ ಸಮಾನತೆ ದೃಢವಾಗಿದ್ದರೆ ಬಹಿರಂಗದಲ್ಲಿ ಯಾವ ತಾರತಮ್ಯವು ಕಾಣಿಸಿಕೊಳ್ಳದು. ಯಾರನ್ನೂ ತುಚ್ಛವಾಗಿ ಕಾಣದೆ, ದೂಷಿಸದೆ ಅರ್ಥಮಾಡಿಕೊಳ್ಳಲು ಸಾಧ್ಯ. ಲೋಕದ ಸಂಕಟಗಳನ್ನು ತನ್ನದೆಂದು ಬಗೆದು, ಅವುಗಳನ್ನು ನಿವಾರಿಸಲು ನಿಸ್ವಾರ್ಥವಾಗಿ ಪ್ರಯತ್ನಿಸುವುದು ರೂಢಿಯಾಗುತ್ತದೆ. ಹಾಗೆಂದು ವಿಭಿನ್ನ ಗುಣ-ಸ್ವಭಾವದವರಿರುವ ಪ್ರಪಂಚದಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣುವುದು ಸುಲಭವಲ್ಲ, ಸಾಧುವೂ ಅಲ್ಲ. ಅನ್ಯಾಯಕ್ಕೆ, ಅಧರ್ಮಕ್ಕೆ ಕಾರಣವಾಗುವಲ್ಲಿ ಉದಾರತೆಯನ್ನು ಪ್ರಕಟಿಸಬಾರದು. ಜಗದ ಶಾಂತಿಯೇ ಇಲ್ಲಿ ಮುಖ್ಯ.
ಹೀಗೆ ಫಲಾಪೇಕ್ಷೆ ಇಲ್ಲದೆ ಲೋಕಹಿತ ಬಯಸುತ್ತ ದುಡಿಯುವುದರಿಂದ ಪೂರ್ವಾರ್ಜಿತ ಕರ್ಮಶೇಷಗಳು ಸವೆಯುತ್ತವೆ, ಋಣದ ಗಂಟು ಕರಗುತ್ತದೆ. ವಿಶ್ವವೇ ತನ್ನದು ಎಂಬ ಆತ್ಮವಿಸ್ತರಣೆಯಿಂದಾಗಿ ಕೊಡು-ಕೊಳ್ಳುವಿಕೆಯ ಲೆಕ್ಕಾಚಾರ ಮಸುಕಾಗುತ್ತದೆ. ವಿಶಾಲ ಹೃದಯಿ ಎಲ್ಲರಿಗೂ ಬೇಕಾದವನಾಗಿ, ಎಲ್ಲರೊಳಗೂ ಮಿಳಿತನಾಗಿ, ಎಲ್ಲದರಿಂದ ಮುಕ್ತನಾಗಿ ಬಾಳುತ್ತಾನೆ. ವಿಶ್ವಾತ್ಮನೇ ಆಗುತ್ತಾನೆ.