

Kabutar Wale Baba : ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಪ್ರಸ್ತುತ ಮಹಾ ಕುಂಭಮೇಳ ನಡೆಯುತ್ತಿದೆ. ಇದು 144 ವರ್ಷಗಳಿಗೊಮ್ಮೆ ನಡೆಯುವ ಮಹಾ ಉತ್ಸವವಾಗಿದೆ. ಜಗತ್ತಿನ ಅತಿದೊಡ್ಡ ಧಾರ್ಮಿಕ ಹಬ್ಬವೆಂದೇ ಖ್ಯಾತಿ ಪಡೆದಿರುವ ಮಹಾ ಕುಂಭಮೇಳದಲ್ಲಿ ಭಾಗಿಯಾಗಲು ಕೋಟ್ಯಂತರ ಜನರು ಪ್ರತಿನಿತ್ಯ ಬರುತ್ತಿದ್ದಾರೆ. ಪವಿತ್ರ ತ್ರಿವೇಣಿ ಸಂಗಮದಲ್ಲಿ ಶಾಹಿ ಸ್ನಾನ ಮಾಡಲು ಭಕ್ತರು ಮತ್ತು ಸಂತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ.
ಮಹಾ ಕುಂಭಮೇಳದಲ್ಲಿ ಸಾಧು-ಸಂತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಐಐಟಿ ಬಾಬಾ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದ್ದರು. ಇದೀಗ ಪಾರಿವಾಳ ಬಾಬಾ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ರಾಜಸ್ಥಾನದ ಚಿತ್ತೋರ್‌ಗಢ ಮೂಲದ ಮಹಂತ್ ರಾಜ್ ಪುರಿ ಎಂಬುವರು ಪಾರಿವಾಳ ಬಾಬಾ ( Kabutar Wale Baba ) ಎಂದೇ ಪ್ರಸಿದ್ಧಿ ಪಡೆದಿದ್ದಾರೆ.
ಕಳೆದ 9 ವರ್ಷಗಳಿಂದಲೂ ಪಾರಿವಾಳವೊಂದು ಈ ಬಾಬಾ ಅವರ ತಲೆಯನ್ನೇ ಆಶ್ರಯಿಸಿದೆ. ನಡೆಯುವಾಗ, ಮಲಗಿರುವಾಗ ಮತ್ತು ಊಟ ಮಾಡುವಾಗ ಏನೇ ಮಾಡಿದರೂ ಪಾರಿವಾಳ ಮಾತ್ರ ಬಾಬಾರನ್ನು ಬಿಟ್ಟು ಎಲ್ಲಿಗೂ ಹೋಗುವುದಿಲ್ಲ. ಇದರಿಂದಾಗಿ ಪಾರಿವಾಳ ಬಾಬಾವನ್ನು ನೋಡಲು ತುಂಬಾ ಜನರು ಮಹಾ ಕುಂಭಮೇಳದಲ್ಲಿ ಮುಗಿಬಿದ್ದಿದ್ದಾರೆ.
ಈ ಬಗ್ಗೆ ಮಾತನಾಡಿರುವ ಮಹಂತ್ ರಾಜ್ ಪುರಿ ಮಹಾರಾಜ, ಜೀವಿಗಳಿಗೆ ಸೇವೆ ಸಲ್ಲಿಸುವುದೇ ಶ್ರೇಷ್ಠ ಧರ್ಮವೆಂದು ಹೇಳಿದ್ದಾರೆ. ಯಾರು ಜೀವಿಗಳಿಗೆ ಸೇವೆಯನ್ನು ಸಲ್ಲಿಸುತ್ತಾರೋ ಅವರು ಅದ್ಭುತವಾದ ಆಧ್ಯಾತ್ಮಿಕ ಪ್ರಯೋಜನಗಳನ್ನು ಪಡೆಯುತ್ತಾರೆ ಎಂದು ಪಾರಿವಾಳ ಬಾಬಾ ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು @SanjaiS41453342 ಬಳಕೆದಾರರು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ಪಾರಿವಾಳವೂ ಬಾಬಾ ಅವರ ತಲೆಯನ್ನು ಬಿಟ್ಟು ಎಲ್ಲಿಗೂ ಕದಲದಿರುವುದನ್ನು ನೋಡಬಹುದು. ದೇವರಿಗೆ ನಮಿಸುವಾಗ, ಊಟ ಮಾಡುವಾಗ, ಕಾರಿನಲ್ಲಿ ಪ್ರಯಾಣಿಸುವಾಗ, ಸಾರ್ವಜನಿಕ ಪ್ರದೇಶಗಳಿಗೆ ಹೋದಾಗ, ಅಂಗಡಿಗಳಿಗೆ ತೆರಳಿದಾಗ ಪಾರಿವಾಳ ಜತೆಯಲ್ಲೇ ಇರುವುದನ್ನು ವಿಡಿಯೋದಲ್ಲಿ ನೀವು ನೋಡಬಹುದು.
ಅಂದಹಾಗೆ ಮಹಾ ಕುಂಭಮೇಳವು ಜನವರಿ 13ರಿಂದ ಆರಂಭವಾಗಿದ್ದು, ಫೆಬ್ರವರಿ 26 ರವರೆಗೆ 45 ದಿನಗಳ ಕಾಲ ನಡೆಯಲಿದೆ. ಈ ವರ್ಷ ಮಹಾ ಕುಂಭಮೇಳಕ್ಕೆ 40 ಕೋಟಿಗೂ ಹೆಚ್ಚು ಜನರು ಬರುವ ನಿರೀಕ್ಷೆ ಇದೆ ಎಂದು ಉತ್ತರ ಪ್ರದೇಶ ಸರ್ಕಾರ ಅಂದಾಜಿಸಿದೆ. ಬರುವ ಯಾತ್ರಿಕರು ಯಾವುದೇ ಅನಾನುಕೂಲತೆಯನ್ನು ಎದುರಿಸದಂತೆ ನೋಡಿಕೊಳ್ಳಲು 1.6 ಲಕ್ಷ ಡೇರೆಗಳು ಮತ್ತು 1.5 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಭದ್ರತೆಗಾಗಿ 55 ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗಿದೆ ಮತ್ತು 45 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಕನ್ನಡ ಸೇರಿದಂತೆ ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಭಾಷೆಗಳಲ್ಲಿ ಸೇವೆಗಳನ್ನು ಒದಗಿಸುವ ಕಾಲ್ ಸೆಂಟರ್‌ಗಳನ್ನು ಸಹ ಯುಪಿ ಸರ್ಕಾರ ಸ್ಥಾಪಿಸಿದೆ. (ಏಜೆನ್ಸೀಸ್)