'ಕಾಟೇರ' ನೋಡಿ ಸುದೀಪ್ ಕಾಲ್ ಮಾಡಿದ್ರಾ?, ಜಡೇಶ್ ಕುಮಾರ್ ಹಂಪಿ ಉತ್ತರಿಸಿದ್ದು ಹೀಗೆ…

darshan 123
Published on

ಬೆಂಗಳೂರು: ನಿರ್ದೇಶಕ, ಬರಹಗಾರರಾಗಿ ಗುರುತಿಸಿಕೊಂಡಿರುವ ಜಡೇಶ್ ಕುಮಾರ್ ಹಂಪಿ ಸದ್ಯ 'ಕಾಟೇರ' ಚಿತ್ರದ ಯಶಸ್ಸಿನಲ್ಲಿದ್ದಾರೆ. ಕಥೆಯೇ ಇಡೀ ಸಿನಿಮಾದ ಜೀವಾಳ ಎಂಬುದನ್ನು ಪ್ರತಿಯೊಬ್ಬರು ಸಾರಿ ಸಾರಿ ಹೇಳುತ್ತಿದ್ದು, 'ಕಾಟೇರ'ಗೆ ಇಂತಹ ಗಟ್ಟಿ ಕಥೆಯನ್ನು ಕಟ್ಟಿ ಕೊಟ್ಟ ಖುಷಿಯಲ್ಲಿದ್ದಾರೆ ಜಡೇಶ್ ಕುಮಾರ್ ಹಂಪಿ.

ಇದೀಗ 'ಕಾಟೇರ' ಸಕ್ಸಸ್ ಕುರಿತು 'ವಿಜಯವಾಣಿ'ಯೊಂದಿಗೆ ಮಾತನಾಡಿರುವ ಜಡೇಶ್ ಕುಮಾರ್ ತಮ್ಮ ಚಿತ್ರದ ಬಗ್ಗೆ ವೀಕ್ಷಕರ ಪಾಸಿಟಿವ್ ರೆಸ್ಪಾನ್ಸ್ ನೋಡಿ ಮನತುಂಬಿ ಮಾತನಾಡಿದ್ದಾರೆ. ಜತೆಗೆ ಚಿತ್ರ ನೋಡಿ ಯಾರು ಏನು ಹೇಳಿದರು ಎಂಬ ಬಗ್ಗೆಯೂ ತಿಳಿಸಿದ್ದಾರೆ.

"ವೀಕ್ಷಕರಿಗೆ ಏನು ಬೇಕು ಅನ್ನೋದು 'ಕಾಟೇರ' ಯಶಸ್ಸು ನೋಡಿದರೆ ತಿಳಿಯುತ್ತದೆ. ಒಳ್ಳೆಯ ಕಂಟೆಂಟ್ ಕೊಟ್ರೆ ತಗೊಳ್ತಾರೆ. ನಾವು ಕೂಡ ಅವರಿಗೇನು ಕೊಡಬೇಕೋ ಕೊಟ್ಟಿದ್ದೇವೆ. ಬರೀ ಸಿನಿಮಾ ಮಾತ್ರ ಹಿಟ್​​ ಆಗಿಲ್ಲ, ಜೀವನಕ್ಕೆ ಅಳವಡಿಸಿಕೊಳ್ಳಬೇಕಾದ ಸಂದೇಶವೂ ಕೊಡಲಾಗಿದೆ. ಜನರ ಮನಸ್ಥಿತಿ ಅರ್ಥ ಮಾಡಿಕೊಂಡು ಸಿನಿಮಾ ಮಾಡಬೇಕು. ಸೋಶಿಯಲ್ ಮೀಡಿಯಾದಲ್ಲಿ ಸಹ ನಾವಿದನ್ನು ಗಮನಿಸಿದ್ದೇವೆ. ಜನಕ್ಕೆ ಸಿನಿಮಾ ಇಷ್ಟ ಆದರೆ ಯಾವ ಲೆವೆಲ್ ಗೆ ಓಡಿಸ್ತಾರೆ ಅನ್ನೋದಕ್ಕೆ ಕಾಟೇರ ಸಿನಿಮಾ ಸಾಕ್ಷಿ.

ಹಿಂದೆಲ್ಲಾ ಬಂಗಾರದ ಮನುಷ್ಯದಂತಹ ಸಾಮಾಜಿಕ ಸಂದೇಶವಿರುವ ಚಿತ್ರಗಳು ಓಡಿದ್ದ ಬಗ್ಗೆ ನಾವು ಕೇಳಿದ್ದೆವು. ಇದೀಗ ಕನ್ನಡಿಗರೇ 'ಕಾಟೇರ' ವನ್ನು ತಲೆ ಮೇಲೆ ಹೊತ್ತು ಸುತ್ತಾಡುತ್ತಿದ್ದಾರೆ. ಇದನ್ನು ಇನ್ನೊಂದು ಬಂಗಾರದ ಮನುಷ್ಯನನ್ನಾಗಿ ಮಾಡಿದ್ದಾರೆ. ಅವರಿಗೆ ನಾನು ಅಭಾರಿಯಾಗಿದ್ದೇನೆ. ಆ ಜವಬ್ದಾರಿ ಉಳಿಸಿಕೊಂಡು ಹೋಗುತ್ತೇನೆ" ಎಂದು ಜಡೇಶ್ ಕುಮಾರ್ ಹಂಪಿ ಸಂತೋಷ ವ್ಯಕ್ತಪಡಿಸಿದ್ದಾರೆ.

ಜೊತೆಗೆ ತಮಗೆ ಯಾರೆಲ್ಲಾ ವಿಶ್ ಮಾಡಿದ್ದರು ಎನ್ನುವ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಜಡೇಶ್ ಕುಮಾರ್, ಸದ್ಯಕ್ಕೆ ಯಶ್, ಸುದೀಪ್​​​ ಕರೆ ಮಾಡಿಲ್ಲ. ನಟರಾದ ಸತೀಶ್, ಡಾಲಿ ಧನಂಜಯ್, ವಸಿಷ್ಠ ಅವರು ಕರೆ ಮಾಡಿದ್ದರು. ಬಹಳ ಒಳ್ಳೆಯ ಪ್ರಯತ್ನ ಮಾಡಿದ್ದಿಯಾ ಅಂದ್ರು. ಕೆಲವು ನಿರ್ದೇಶಕರು ಸಹ ಕರೆ ಮಾಡಿದ್ದರು ಎಂದರು.

ಗುರು ಶಿಷ್ಯರು (2022) , ರಾಜಹಂಸ (2017) ಮತ್ತು ಕಾಟೇರ (2023) ಚಿತ್ರಗಳಿಗೆ ಜಡೇಶ್ ಕುಮಾರ್ ಹಂಪಿ ಹೆಸರುವಾಸಿಯಾಗಿದ್ದಾರೆ. ಜಡೇಶ ಕುಮಾರ್ ಹಂಪಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರತಿಭಾನ್ವಿತ ನಿರ್ದೇಶಕ. ಇವರು 2017 ರಲ್ಲಿ ತೆರೆಕಂಡ ಗೌರಿಶಂಕರ್ ಅಭಿನಯದ `ರಾಜಹಂಸ'ಚಿತ್ರವನ್ನು ನಿರ್ದೇಶಿಸಿದ್ದಾರೆ.

ಇತ್ತೀಚೆಗೆ ಸ್ವತಃ ಸುದೀಪ್ ಕಾಟೇರ ಸಿನಿಮಾವನ್ನು ವೀಕ್ಷಿಸಿರುವುದಾಗಿ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದರು. ಸೆಲೆಬ್ರಿಟಿ ಶೋಗೆ ಬರುವಂತೆ ಸುದೀಪ್ ಅವರಿಗೆ ಕಾಟೇರ ಚಿತ್ರತಂಡದಿಂದ ಕರೆ ಮಾಡಲಾಗಿತ್ತು. ಆಗ ಸುದೀಪ್ ಶೂಟಿಂಗ್ ನಲ್ಲಿ ಇರುವ ಕಾರಣ ಬರುವುದಕ್ಕೆ ಆಗಿರಲಿಲ್ಲ. ಆದರೆ ಅತೀ ಶೀಘ್ರದಲ್ಲೇ ಸಿನಿಮಾ ನೋಡುವುದಾಗಿ ಸುದೀಪ್ ಹೇಳಿದ್ದರು. ಅಂತೆಯೇ ಅವರು ಸಿನಿಮಾ ವೀಕ್ಷಣೆ ಮಾಡಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net