

ರಾಮನಗರ : ಪಕ್ಷ ಮತ್ತು ಜಾತಿಯ ಅಂಟಿನ ನಂಟಿನಿಂದ ದೂರವೇ ಉಳಿಯಬೇಕಾದ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಚುನಾವಣೆ ಜಿಲ್ಲೆಯಲ್ಲಿ ಪಕ್ಷದ ಆಧಾರದ ಮೇಲೆಯೇ ಸದ್ದಿಲ್ಲದೆ ಸಾಗಿದೆ.
ನ.21ಕ್ಕೆ ಕೇಂದ್ರ ಸ್ಥಾನ ಮತ್ತು ಜಿಲ್ಲೆಯ ಅಧ್ಯಕ್ಷ ಸ್ಥಾನಕ್ಕೆ ಮತದಾನ ನಿಗದಿ ಆಗಿದ್ದು, ಅಭ್ಯರ್ಥಿಗಳು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಆದರೆ, ಇದರ ನಡುವೆ ಸದ್ದಿಲ್ಲದೆ ಕೆಲ ಅಭ್ಯರ್ಥಿಗಳು ಪಕ್ಷದ ನೆರಳಿನಲ್ಲಿ ಮತ ಬೇಟೆಗೆ ಇಳಿದಿರುವುದು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಗೆ ರಾಜಕೀಯದ ಕಳಂಕ ಅಂಟಿಸುವ ಕೆಲಸ ಮಾಡುತ್ತಿದ್ದಾರೆ.
ಚನ್ನಪಟ್ಟಣದಲ್ಲಿಯೇ ಜೋರು : ಜಿಲ್ಲೆಯ ಮತದಾರರ ಪೈಕಿ ಅತಿ ಹೆಚ್ಚು ಮತದಾರರಿರುವುದು ಚನ್ನಪಟ್ಟಣದಲ್ಲಿ. ಸುಮಾರು 4 ಸಾವಿರದಷ್ಟಿರುವ ಮತದಾರರನ್ನು ಸೆಳೆಯಲು ಕಸರತ್ತು ತೀವ್ರಗೊಂಡಿದೆ. ಆದರೆ, ಮತದಾರರನ್ನು ಪಕ್ಷವಾರು ಪಟ್ಟಿ ಮಾಡಿ, ಪಕ್ಷಗಳ ಸ್ಥಳೀಯ ನಾಯಕರ ಮೂಲಕವೇ ಮತಯಾಚಿಸುವ ಕೆಲಸವನ್ನೂ ಅಭ್ಯರ್ಥಿಗಳು ಮಾಡುತ್ತಿದ್ದಾರೆ. ಅಲ್ಲದೆ, ಎದುರಾಳಿ ಇಂತಹ ಪಕ್ಷದವನಾಗಿದ್ದು, ತಾನು ಸೋತರೆ ನಮ್ಮ ಪಕ್ಷಕ್ಕೆ ಸೋಲಾಗದಂತೆ ಎನ್ನುವ ಸಂದೇಶ ಸಾರುವ ಮೂಲಕ ಪಕ್ಷದ ಆಧಾರದ ಮೇಲೆ ಮತಯಾಚಿಸುತ್ತಿದ್ದಾರೆ. ಉಳಿದಂತೆ ರಾಮನಗರ, ಮಾಗಡಿ ಮತ್ತು ಕನಕಪುರಗಳಲ್ಲೂ ಪಕ್ಷದ ಪ್ರಭಾವ ಬಳಕೆ ಮಾಡಿಕೊಳ್ಳುವ ಯತ್ನಗಳು ನಡೆದಿದ್ದು, ರಾಜಕೀಯೇತರ ಸಂಬಂಧದಿಂದ ದೂರವೇ ಉಳಿದಿರುವ ಕಸಾಪಗೆ ರಾಜಕೀಯದ ಕೆಸರೆರಚುವ ಕೆಲಸ ಮಾಡಲಾಗುತ್ತಿದೆ.
ಮನೆಯಲ್ಲಿ ಭಿನ್ನರಾಗ? : ಒಂದೆಡೆ ಪಕ್ಷದ ನಂಟು ಅಂಟಿಸುವ ಕೆಲಸ ನಡೆಯುತ್ತಿದ್ದರೆ, ಮತ್ತೊಂದೆಡೆ ಕಸಾಪ ಚುನಾವಣೆ ಕುಟುಂಬದಲ್ಲೂ ಪ್ರತ್ಯೇಕ ಚುನಾವಣೆ ಪ್ರಚಾರ ನಡೆಸುವಂತೆ ಮಾಡಿದೆ. ಅದರಲ್ಲೂ ಪ್ರಮುಖವಾಗಿ ಕನ್ನಡ ಸಾಹಿತ್ಯ ಪರಿಷತ್‌ನ ರಾಮನಗರ ಜಿಲ್ಲಾ ಘಟಕದ ಅಧ್ಯಕ್ಷ ಸಿಂ.ಲಿಂ.ನಾಗರಾಜು ಅವರು ಓರ್ವ ಅಭ್ಯರ್ಥಿ ಪರವಾಗಿ ಮತಯಾಚಿಸುತ್ತಿದ್ದರೆ, ಇವರ ಪುತ್ರ ಆದರ್ಶಕುಮಾರ್ ಮತ್ತೊಬ್ಬ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ. ಈ ಮೂಲಕ ಎಲ್ಲರನ್ನೂ ಒಗ್ಗೂಡಿಸಬೇಕಾದ ಕಸಾಪ ಸಂಬಂಧಗಳನ್ನು ವಿಭಜಿಸುವ ಹಂತಕ್ಕೆ ತಲುಪಿರುವುದುವಿಪರ್ಯಾಸ.
ನಿರಾಶ್ರಿತರ ತಾಣವಲ್ಲ? : ಕನ್ನಡ ಸಾಹಿತ್ಯ ಪರಿಷತ್ ಮೂಲಕವೇ ಕನ್ನಡಿಗರ ಮನ ಮತ್ತು ಮನೆಗಳನ್ನು ಒಂದುಗೂಡಿಸುವ ಕೆಲಸ ಮಾಡಬೇಕಿದೆ. ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಇದಕ್ಕೆ ವಿರುದ್ಧವಾದ ಚಟುವಟಿಕೆಗಳು ನಡೆಯುತ್ತಿದ್ದು, ಯಾರೇ ಅಧ್ಯಕ್ಷರಾದರೂ ಅವರಿಗೆ ಇದು ಶೋಭ ತರುವುದಿಲ್ಲ. ಚುನಾವಣೆ ಸೈದ್ಧಾಂತಿಕ ಹಿನ್ನೆಲೆಯಲ್ಲಿ ನಡೆಯಬೇಕಿದ್ದು ಕನ್ನಡ ಅಭಿವೃದ್ಧಿ ವಿಚಾರವನ್ನು ಮುಂದಿಟ್ಟುಕೊಂಡು ಮತಯಾಚಿಸಬೇಕಿದೆ. ಒಂದು ವೇಳೆ ರಾಜಕೀಯ ನಂಟನ್ನು ಮೆತ್ತಿಕೊಂಡು ಮುಂದುವರಿದಿದ್ದೇ ಆದರೆ ಮುಂದೊಂದು ದಿನ ಕನ್ನಡ ಸಾಹಿತ್ಯ ಪರಿಷತ್ ರಾಜಕೀಯ ಪಕ್ಷಗಳಲ್ಲಿ ಅಧಿಕಾರ ಇಲ್ಲದೆ ನಿರಾಶ್ರಿತರಾದವರಿಗೆ ಆಶ್ರಯ ತಾಣವಾಗಲಿದೆ.