

ಎಚ್.ಡಿ.ಕೋಟೆ: ಕನ್ನಡದಲ್ಲಿ ಐಎಎಸ್ ಪರೀಕ್ಷೆ ಬರೆದು ಉತ್ತೀರ್ಣರಾದ ಮೊದಲ ಅಧಿಕಾರಿ, ಶೋಷಿತ ಸಮುದಾಯಗಳ ಆಶಾಕಿರಣವಾಗಿದ್ದವರು ದಿ.ಕೆ.ಶಿವರಾಂ ಎಂದು ಆದಿಕರ್ನಾಟಕ ಮಹಾಸಭಾ ತಾಲೂಕು ಮಾಜಿ ಅಧ್ಯಕ್ಷ ಮುದ್ದಮಲ್ಲಯ್ಯ ಬಣ್ಣಿಸಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಮಂಗಳವಾರ ತಾಲೂಕಿನ ವಿವಿಧ ಪ್ರಗತಿಪರ ಸಂಘಟನೆಗಳ ವತಿಯಿಂದ ಏರ್ಪಡಿಸಿದ್ದ ದಿ.ಕೆ.ಶಿವರಾಂ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಐಎಎಸ್ ಅಧಿಕಾರಿಯಾಗಿ ಸಾರ್ವಜನಿಕ ಸೇವೆಯನ್ನು ಯಾವ ರೀತಿ ಮಾಡಬಹುದು ಎಂಬುದನ್ನು ಸ್ವತಃ ಕೆ.ಶಿವರಾಂ ಆಡಳಿತ ನಡೆಸಿ ತೋರಿಸಿಕೊಟ್ಟಿದ್ದಾರೆ. ಯುವ ಸಮೂಹಕ್ಕೆ ಮಾದರಿಯಾಗಿ, ಆಡಳಿತ ವರ್ಗಕ್ಕೆ ಪ್ರೇರಣೆಯಾಗಿ ತಮ್ಮ ಸೇವಾವಧಿಯಲ್ಲಿ ಕೆಲಸ ಮಾಡಿ ತೋರಿಸಿದ ಒಬ್ಬ ದಿಟ್ಟ ಅಧಿಕಾರಿ ಎಂದು ಶ್ಲಾಘಿಸಿದರು.
ಬೀದಿ ಬೀದಿಗೆ, ಊರು ಕೇರಿಗೆ, ಕೊಳಗೇರಿಗಳಿಗೆ ತಂಡ ಕಟ್ಟಿಕೊಂಡು ಜನಸಾಮಾನ್ಯರ ನೋವು-ನಲಿವು, ಕಷ್ಟ-ಕಾರ್ಪಣ್ಯ ದುಗುಡ-ದುಮ್ಮಾನಗಳನ್ನು ಆಲಿಸಿ ಸ್ಥಳದಲ್ಲಿ ಪರಿಹರಿಸಿ ವಿದ್ಯೆಯೊಂದೇ ಬದುಕನ್ನು ಬದಲಿಸುವ ಮಾರ್ಗ ಎಂದು ತೋರಿಸಿಕೊಟ್ಟರು ಎಂದರು.
ಕಪ್ಪು ಕನಿಷ್ಠವೆಂದು ಬಿಂಬಿಸಿ ಮೂಲ ನಿವಾಸಿಗಳನ್ನು ಮೂಲೆಗುಂಪು ಮಾಡಿದ್ದ ಸಿನಿಮಾ ಕ್ಷೇತ್ರಕ್ಕೂ ಸೆಡ್ಡು ಹೊಡೆದು ಸೈ ಎನಿಸಿಕೊಂಡರು. ಅಧಿಕಾರಿಯಾಗಿರುವಾಗಲೇ ಸಮುದಾಯದ ಸಬಲೀಕರಣಕ್ಕಾಗಿ ಸಂಘಟನೆಯನ್ನು ಆರಂಭಿಸಿ ಹತ್ತು ಹಲವು ಕನಸುಗಳ ಹೊತ್ತ ನಾಡಿನ ಹೆಮ್ಮೆಯ, ದಕ್ಷ, ಜನಾನುರಾಗಿ ಅಧಿಕಾರಿಯಾಗಿ ಕೆಲಸ ಮಾಡಿದವರು ಎಂದು ಸ್ಮರಿಸಿದರು.
ಜಿಪಂ ಮಾಜಿ ಸದಸ್ಯರಾದ ಎಚ್.ಸಿ.ಲಕ್ಷ್ಮಣ್, ವೆಂಕಸ್ವಾಮಿ, ತಾಪಂ ಮಾಜಿ ಅಧ್ಯಕ್ಷೆ ಮಂಜುಳಾ ದೇವಣ್ಣ, ಸರಗೂರು ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷೆ ರಾಧಿಕಾ ಶ್ರೀನಾಥ್, ಪುರಸಭಾ ಸದಸ್ಯ ನಂಜಪ್ಪ, ತಾಪಂ ಮಾಜಿ ಸದಸ್ಯ ಹೊಸಮಾಳ ರಾಜಣ್ಣ, ಗ್ರಾಪಂ ಮಾಜಿ ಅಧ್ಯಕ್ಷ ಶಿವನಂಜು, ಆನಗಟ್ಟಿ ಸೋಮಣ್ಣ, ವಕೀಲರಾದ ಚೌಡಹಳ್ಳಿ ಜವರಯ್ಯ, ಮುಖಂಡರಾದ ಹಂಚಿಪುರ ಗುರುಸ್ವಾಮಿ, ಉಯ್ಯಂಬಳ್ಳಿ ಸ್ವಾಮಿ, ಆನಗಟ್ಟಿ ಜವರಯ್ಯ, ಹೈರಿಗೆ ಶಿವರಾಜು, ಜಕ್ಕಹಳ್ಳಿ ಮಲ್ಲೇಶ್, ಮಂಜು ಮುಳ್ಳೂರು, ಮಗ್ಗೆ ಗೋವಿಂದ, ಜಕ್ಕಹಳ್ಳಿ ಪುಟ್ಟರಾಜು, ಸಿದ್ದರಾಜು ಕೋಟೆ, ಕಂದೇಗಾಲ ನಾಗರಾಜು, ಬಿಡಗಲು ರಾಜು, ಜವರಯ್ಯ ಇದ್ದರು.