ಕೆ-ಸೆಟ್ ಪಾಸ್, ಅರ್ಜಿ ಸಲ್ಲಿಕೆ ಫೇಲ್: ಸಾಫ್ಟ್​ವೇರ್ ತೊಂದರೆ; ಸಹಾಯಕ ಪ್ರಾಧ್ಯಾಪಕ ಹುದ್ದೆ ಆಕಾಂಕ್ಷಿಗಳಿಗೆ ಸಂಕಷ್ಟ

K Set
Published on

| ದೇವರಾಜ್ ಕನಕಪುರ ಬೆಂಗಳೂರು

ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಸಲ್ಲಿಸಲು ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ- (ಕೆ-ಸೆಟ್) ಫಲಿತಾಂಶ ಪ್ರಕಟವಾಗುವುದನ್ನೇ ಕಾಯುತ್ತಿದ್ದ ಅಭ್ಯರ್ಥಿಗಳಿಗೆ ಇದೀಗ ನಿರಾಸೆ ಕಾಡಿದೆ. ಅರ್ಜಿ ಸಲ್ಲಿಕೆ ಸಾಫ್ಟ್​ವೇರ್​ನಲ್ಲಿ ಕಾಣಿಸಿಕೊಂಡಿರುವ ತಾಂತ್ರಿಕ ತೊಂದರೆಯಿಂದಾಗಿ ಅರ್ಜಿ ಸಲ್ಲಿಸಲು ಸಾಧ್ಯವಾಗದೆ ಸಂಕಷ್ಟ ಎದುರಾಗಿದೆ.

ಕಾಲೇಜು ಶಿಕ್ಷಣ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿರುವ ಸಹಾಯಕ ಪ್ರಾಧ್ಯಾಪಕ ಹುದ್ದೆ 1,242 ಭರ್ತಿಗೆ ಮುಂದಾಗಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವನ್ನು(ಕೆಇಎ) ನೇಮಕಾತಿ ಪ್ರಾಧಿಕಾರವಾಗಿ ನೇಮಿಸಿದೆ. ಕೆಇಎ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಕೆ-ಸೆಟ್ ಪಾಸ್ ಆದವರು ಅರ್ಜಿ ಸಲ್ಲಿಸಲು ಅರ್ಹತೆ ಪಡೆಯುತ್ತಾರೆ. ಪಾಸ್ ಆದವರು ಅರ್ಜಿಗಳನ್ನು ಸಾಫ್ಟ್​ವೇರ್ ಪರಿಗಣಿಸುತ್ತಿಲ್ಲ. ಇದರಿಂದ ಕೆಇಎಗೆ ಅಭ್ಯರ್ಥಿಗಳು ಶಾಪ ಹಾಕುತ್ತಿದ್ದಾರೆ.

ಅರ್ಜಿ ಸಲ್ಲಿಕೆಗೆ ಪ್ರತಿ ಬಾರಿ ಅಭ್ಯರ್ಥಿಗಳಿಂದ ಆಕ್ಷೇಪಗಳು ವ್ಯಕ್ತವಾದ ಮೇಲೆ ಅರ್ಜಿ ಸಲ್ಲಿಕೆ ನಿಯಮವನ್ನು ತಿದ್ದುಪಡಿ ಮಾಡುತ್ತಾ ಬಂದಿದೆ. ಇದೀಗ ಮತ್ತೊಮ್ಮೆ ತಿದ್ದುಪಡಿ ಮಾಡಿ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಬೇಕಾಗುತ್ತದೆ. ಕೆ-ಸೆಟ್ ಮುಗಿದ ತಕ್ಷಣವೇ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕೆಂದು ಉನ್ನತ ಶಿಕ್ಷಣ ಇಲಾಖೆ ಮೇಲೆ ಒತ್ತಡ ಹಾಕಿದ್ದರು. ಅವಕಾಶ ನೀಡುವಂತೆ ಮೌಖಿಕವಾಗಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಈ ಬಾರಿ ಕೆ-ಸೆಟ್​ಗೆ 83,907 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಪರೀಕ್ಷೆಗೆ 69,857 ಅಭ್ಯರ್ಥಿಗಳು ಹಾಜರಾಗಿದ್ದರು. ಇವರಲ್ಲಿ 4,779 ಅಭ್ಯರ್ಥಿಗಳು ಮಾತ್ರ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಹತೆ ಹೊಂದಿದ್ದಾರೆ. ಕೆಇಎ ಅ.10ರಿಂದ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಿದ್ದು, ನ.6 ಕೊನೆಯ ದಿನವಾಗಿದೆ. ಶುಲ್ಕ ಪಾವತಿಸಲು ನ.10 ರವರೆಗೆ ಅವಕಾಶ ನೀಡಿದೆ. ಈಗಾಗಲೆ, 50 ಸಾವಿರಕ್ಕೂ ಹೆಚ್ಚಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಕೆಗೆ ನಿಗದಿ ಪಡಿಸಿರುವ ಅವಧಿ ಬಹಳ ಹತ್ತಿರವಾಗುತ್ತಿರುವುದರಿಂದ ತಕ್ಷಣ ನಿಯಮಕ್ಕೆ ತಿದ್ದುಪಡಿ ತಂದು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಬೇಕೆಂದು ಕೆ-ಸೆಟ್ ಪಾಸ್ ಆದ ಅಭ್ಯರ್ಥಿಗಳು ಆಗ್ರಹಿಸಿದ್ದಾರೆ.

ಕೆ-ಸೆಟ್ ಫಲಿತಾಂಶವನ್ನೇ ಕಾಯುತ್ತಿದ್ದೆ. ಇದೀಗ ಬಂದಿದ್ದು, ಪಾಸ್ ಆಗಿದ್ದೇನೆ. ನಮಗೆ ಅರ್ಜಿ ಸಲ್ಲಿಸಲು ಸಾಫ್ಟ್​ವೇರ್​ನಲ್ಲಿ ಅವಕಾಶ ನೀಡಿಲ್ಲ. ಅರ್ಜಿ ಸಲ್ಲಿಕೆಗೆ ನ.6 ಕೊನೆಯ ದಿನ. ನಮಗೆ ನ್ಯಾಯ ದೊರಕಿಸಿಕೊಡಿ.

| ಕೆ-ಸೆಟ್ ಪಾಸ್ ಆದ ಅಭ್ಯರ್ಥಿ

ಅರ್ಜಿ ಸಲ್ಲಿಸಲು ನಿಗದಿ ಪಡಿಸಿರುವ ಕೊನೇ ಘಳಿಗೆಯಲ್ಲಿ ಕೆ-ಸೆಟ್ ಫಲಿತಾಂಶ ಬಿಡುತ್ತಾರೆ ಎಂದು ತಿಳಿದಿರಲಿಲ್ಲ. ತಿದ್ದುಪಡಿ ಮಾಡಿ ಅರ್ಜಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗುವುದು.

| ಎಸ್.ರಮ್ಯಾ ಕಾರ್ಯನಿರ್ವಾಹಕ ನಿರ್ದೇಶಕಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ

ಆಕ್ಷೇಪಣೆ ಕೇಳೋರಿಲ್ಲ: ಕೆ-ಸೆಟ್​ನಲ್ಲಿ ಅಂತಿಮ ಕೀ -ಉತ್ತರಗಳನ್ನು ಬಿಡುಗಡೆ ಮಾಡಿದ ವೇಳೆ ಬಹುತೇಕ ವಿದ್ಯಾರ್ಥಿಗಳು ಒಂದು ಪ್ರಶ್ನೆಗೆ ಒಂದು ಸಾವಿರ ರೂ.ಗಳಂತೆ ಶುಲ್ಕ ಪಾವತಿಸಿ ಎರಡು ಪ್ರಶ್ನೆಗಳಿಗೆ ಆಕ್ಷೇಪಣೆ ಸಲ್ಲಿಸಿದ್ದು, ಅಂತಿಮ ಫಲಿತಾಂಶದಲ್ಲೂ ಉತ್ತರ ಸರಿ ಪಡಿಸಿಲ್ಲ ಎಂದು ಅಭ್ಯರ್ಥಿಗಳು ಆರೋಪಿಸಿದ್ದಾರೆ. ಆಕ್ಷೇಪಣೆಗೆ ಒಂದು ಸಾವಿರ ರೂ. ಶುಲ್ಕ ಮಾಡಿದ್ದಾರೆ. ಇಷ್ಟೊಂದು ಹಣ ನೀಡಿ ಆಕ್ಷೇಪಣೆ ಸಲ್ಲಿಸಿದರೂ ಇದನ್ನು ಪರಿಗಣಿಸಿಲ್ಲ. ಇದರಿಂದ ನಾವು ಅನುತ್ತೀರ್ಣರಾಗಿದ್ದೇವೆ. ಇದಕ್ಕೆ ಯಾರು ಹೊಣೆ? ಮೈಸೂರು ವಿವಿ ಈ ರೀತಿ ಅಭ್ಯರ್ಥಿಗಳ ಆಕ್ಷೇಪಣೆ ನಿರ್ಲಕ್ಷ್ಯ ಮಾಡುವುದು ಸರಿಯಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net