

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯ (ಕೆ-ಸೆಟ್) ಅಧಿಸೂಚನೆಯನ್ನು ಪ್ರಕಟಿಸಿದ್ದು, ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಿದೆ.
ಜು.22ಕ್ಕೆ ಆನ್ಲೈನ್ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು, ಆಗಸ್ಟ್ 22 ಕೊನೆಯ ದಿನವಾಗಿದೆ. ಶುಲ್ಕ ಪಾವತಿಗೆ ಆ.26ರವರೆಗೆ ಅವಕಾಶ ನೀಡಿದೆ. ಒಟ್ಟು 41 ವಿಷಯಗಳಲ್ಲಿ ಪರೀಕ್ಷೆ ಬರೆಯಬಹುದು. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುತ್ತಿರುವ ಎರಡನೇ ಕೆಸೆಟ್ ಇದಾಗಿದೆ. ರಾಜ್ಯದ 12 ಜಿಲ್ಲಾ ಕೇಂದ್ರಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ.
ಪ್ರವರ್ಗ-1, ಎಸ್ಸಿ, ಎಸ್ಟಿ, ಅಂಗವಿಲಕರಿಗೆ 750 ರೂ. ನಿಗದಿಪಡಿಸಲಾಗಿದೆ. ಸಾಮಾನ್ಯ ವರ್ಗ ಸೇರಿ ಉಳಿದವರು 1,000 ರೂ. ಪಾವತಿಸಬೇಕಿದೆ.
ಅಭ್ಯರ್ಥಿಗಳು ಕರ್ನಾಟಕ ರಾಜ್ಯದ ಯಾವುದೇ ವಿಶ್ವವಿದ್ಯಾಲಯ, ಪ್ರಥಮ ದರ್ಜೆ ಕಾಲೇಜು, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಲು ಅರ್ಹತೆ ಗಿಟ್ಟಿಸುತ್ತಾರೆ. ಆದರೆ, ಆಯಾ ಸಂಸ್ಥೆಗಳ ನಿಯಮಗಳಿಗೆ ಒಳಪಟ್ಟಿರುತ್ತದೆ.
ಯಾವುದೇ ವಿಶ್ವವಿದ್ಯಾಲಯ, ಉನ್ನತ ಶಿಕ್ಷಣ ಸಂಸ್ಥೆಯಿಂದ ಸ್ನಾತಕೋತ್ತರ ಪದವಿ ಪಡೆದಿರಬೇಕು. ಸಾಮಾನ್ಯ ವರ್ಗದವರು ಶೇ.55 ಅಂಕ ಹಾಗೂ ಉಳಿದವರಿಗೆ ಶೇ.50 ಅಂಕ ಗಳಿಸಿರಬೇಕು. ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬಹುದಾದರೂ, ಕೆ-ಸೆಟ್ ಲಿತಾಂಶ ಪ್ರಕಟವಾದ ಎರಡು ವರ್ಷದೊಳಗಾಗಿ ತಮ್ಮ ವ್ಯಾಸಂಗವನ್ನು ನಿಗದಿತ ಅಂಕಗಳೊಂದಿಗೆ ಪೂರ್ಣಗೊಳಿಸಬೇಕಾಗುತ್ತದೆ. ಪರೀೆ ತೆಗೆದುಕೊಳ್ಳಲು ಯಾವುದೇ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿಲ್ಲ.
ಈಗಾಗಲೇ ಅರ್ಹತೆ ಪಡೆದ ವಿಷಯದಲ್ಲಿ ಅಭ್ಯರ್ಥಿಗಳು ಮತ್ತೆ ಪರೀಕ್ಷೆ ತೆಗೆದುಕೊಳ್ಳುವಂತಿಲ್ಲ. ಅರ್ಜಿ ಸಲ್ಲಿಸಿದಲ್ಲಿ ಅವರ ಅರ್ಹತೆಯನ್ನು ರದ್ದುಪಡಿಸಲಾಗುತ್ತದೆ. ಅರ್ಹತಾ ಪರೀಕ್ಷೆಯು ಎರಡು ಪತ್ರಿಕೆಗಳನ್ನು ಒಳಗೊಂಡಿದ್ದು, ಮೊದಲ ಪತ್ರಿಕೆಯಲ್ಲಿ 100 ಅಂಕಗಳಿಗೆ 50 ಪ್ರಶ್ನೆಗಳನ್ನು ಕೇಳಲಾಗಿರುತ್ತದೆ. ಎರಡನೇ ಪತ್ರಿಕೆ 200 ಅಂಕಗಳದ್ದಾಗಿದ್ದು, 100 ಪ್ರಶ್ನೆಗಳಿರುತ್ತವೆ. ಎರಡೂ ಪತ್ರಿಕೆಗಳಿಗೂ 3 ತಾಸು ಸಮಯಾವಕಾಶವಿರಲಿದೆ.
ಮೊದಲ ಪತ್ರಿಕೆಯು ಬೋಧನೆ, ಸಂಶೋಧನೆ ಮತ್ತು ಬುದ್ಧಿ ಸಾಮರ್ಥ್ಯದ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. 50 ಬಹುಆಯ್ಕೆ ಮಾದರಿಯ ಪ್ರತಿ ಪ್ರಶ್ನೆಗೆ ಎರಡು ಅಂಕಗಳಿರುತ್ತವೆ. ಎರಡನೇ ಪತ್ರಿಕೆಯು ಅಭ್ಯರ್ಥಿಯು ಆಯ್ಕೆ ಮಾಡಿಕೊಂಡ ಐಚ್ಛಿಕ ವಿಷಯದ್ದಾಗಿರುತ್ತದೆ. 100 ಕಡ್ಡಾಯ ಬಹುಆಯ್ಕೆ ಮಾದರಿಯ ಪ್ರಶ್ನೆಗಳಿಗೆ ತಲಾ ಎರಡು ಅಂಕಗಳಿರುತ್ತವೆ. ಅರ್ಹತೆ ಪಡೆಯಲು ಪ್ರವರ್ಗ ಒಂದು ಹಾಗೂ ಪರಿಶಿಷ್ಟರು, ಹಿಂದುಳಿದ ವರ್ಗದವರು, ಅಂಗವಿಕಲರು ಎರಡೂ ಪತ್ರಿಕೆಗಳಲ್ಲಿ ಶೇ.35 ಅಂಕ ಪಡೆಯಬೇಕು. ಉಳಿದ ಸಾಮಾನ್ಯ ವರ್ಗದವರು ಶೇ.40 ಅಂಕಗಳನ್ನು ಗಳಿಸಬೇಕಿರುತ್ತದೆ.
ಹಾಜರಾದ ಒಟ್ಟು ಅಭ್ಯರ್ಥಿಗಳ ಸಂಖ್ಯೆ ಆಧರಿಸಿ ಶೇ.6ರಷ್ಟನ್ನು ಅರ್ಹತಾ ಪ್ರಮಾಣವೆಂದು ಪರಿಗಣಿಸಲಾಗುತ್ತದೆ. ಬಳಿಕ ವಿಷಯವಾರು, ವಗರ್ಗವಾರು ಮೆರಿಟ್ ಪಟ್ಟಿಯನ್ನು ರೂಪಿಸಲಾಗುತ್ತದೆ. ಕೆಸೆಟ್ ಪಠ್ಯಕ್ರಮವು ಯುಜಿಸಿ/ಸಿಎಸ್ಐಆರ್ ನೆಟ್ ನಿಗದಿಪಡಿಸಿದ ಪಠ್ಯಕ್ರಮದ ಮಾದರಿಯಲ್ಲೇ ಇರಲಿದೆ. ಪ್ರಾಧಿಕಾರದ ವೆಬ್ಸೈಟ್ನಿಂದ ಪಠ್ಯಕ್ರಮವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
ಬೆಂಗಳೂರು, ಬೆಳಗಾವಿ, ಬಳ್ಳಾರಿ, ಬೀದರ್, ದಾವಣಗೆರೆ, ಧಾರವಾಡ, ಕಲಬುರಗಿ, ಮೈಸೂರು, ಶಿವಮೊಗ್ಗ, ತುಮಕೂರು, ಉಡುಪಿ, ವಿಜಯಪುರ. ಆದರೆ, ಒಟ್ಟು 18 ವಿಷಯಗಳಿಗೆ ಬೇರೆ ಜಿಲ್ಲೆಗಳನ್ನು ಆಯ್ಕೆ ಮಾಡಿಕೊಳ್ಳಬಹುದಾದರೂ, ಉಳಿದ 23 ವಿಷಯಗಳಿಗೆ ಬೆಂಗಳೂರು ಕೇಂದ್ರವನ್ನೇ ಆಯ್ಕೆ ಮಾಡಿಕೊಳ್ಳಬೇಕಿದೆ.