ಯಾರ ಒತ್ತಡಕ್ಕೂ ಮಣಿದು ಸ್ಪರ್ಧಿಸಲಿಲ್ಲ: ಪಕ್ಷೇತರ ಅಭ್ಯರ್ಥಿ ಕೆ.ಎಸ್.ವಿಜಯಾನಂದ ಹೇಳಿಕೆ

1
Published on

ಮಂಡ್ಯ: ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದೇನೆಯೇ ಹೊರತು ಯಾರ ಒತ್ತಡಕ್ಕೂ ಮಣಿದಿಲ್ಲ. ಪ್ರಮುಖವಾಗಿ ನನ್ನನ್ನು ಯಾರು ಬಲಿಪಶು ಮಾಡಿಲ್ಲ. ಅಂತೆಯೇ ಮತದಾರರ ತೀರ್ಪಿಗೆ ನಾನು ಬದ್ದನಾಗಿದ್ದೇನೆಂದು ಪಕ್ಷೇತರ ಅಭ್ಯರ್ಥಿ ಕೆ.ಎಸ್.ವಿಜಯಾನಂದ ತಿಳಿಸಿದರು.

ಸ್ಪರ್ಧೆಯಿಂದ ನಾನು ಸಾಲಗಾರನಾಗಿಲ್ಲ. ಜನರ ಭಿಕ್ಷೆಯ ಹಣದಲ್ಲಿ ಚುನಾವಣೆ ಎದುರಿಸಿದ್ದೇನೆ. ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳ ಅಭ್ಯರ್ಥಿಗಳ ಅಬ್ಬರದಲ್ಲಿ ನನಗೆ ಲಭಿಸಿರುವ ಮತಗಳ ಬಗ್ಗೆ ತೃಪ್ತಿಯಿದೆ. ಈ ಸಂಬಂಧ ಅನ್ಯರನ್ನು ದೂಷಿಸುವುದು ಬೇಡ. ನಮ್ಮೆಲ್ಲರ ನೀರಿಕ್ಷೆಯಷ್ಟು ಮತಗಳು ಬಾರದಿರಬಹುದು. ಆದರೆ ನನಗೆ ದೊರಕಿರುವ ಮತಗಳು ಪ್ರಾಮಾಣಿಕತೆಯ ಮತಗಳಾಗಿವೆ ಎಂದು ಸುದ್ದಿಗೋಷ್ಠಿಯಲ್ಲಿ ನುಡಿದರು.

ನನ್ನ ಸ್ಪರ್ಧೆಗೆ ಮಾಜಿ ಶಾಸಕರು ಸೇರಿದಂತೆ ಹಲವು ಮುಖಂಡರು ಬೆಂಬಲ ಸೂಚಿಸಿದ್ದಾರೆ. ನನಗೆ 15 ಸಾವಿರಕ್ಕೂ ಹೆಚ್ಚು ಮತಗಳು ಲಭಿಸಿವೆ. ನನ್ನ ಚುನಾವಣೆಗೆ ಶ್ರಮಿಸಿದ ಎಲ್ಲ ಮುಖಂಡರು, ಕಾರ್ಯಕರ್ತರು ಹಾಗೂ ಮತ ನೀಡಿದ ಮತದಾರರಿಗೆ ಹೃದಯ ಪೂರ್ವಕ ಧನ್ಯವಾದ ಅರ್ಪಿಸುತ್ತೇನೆಂದರು.

ಮಾಜಿ ಶಾಸಕ ಎಂ.ಶ್ರೀನಿವಾಸ್ ಮಾತನಾಡಿ, ಮುಂದಿನ ದಿನಗಳಲ್ಲೂ ನಾವೆಲ್ಲ ಒಟ್ಟಾಗಿರುತ್ತೇವೆ. ಚುನಾವಣೆ ಎದುರಿಸಲು ಮುಂದಾಗುತ್ತೇವೆ. ಜೆಡಿಎಸ್ ಪಕ್ಷದ ವೈಫಲ್ಯದಿಂದ ಜಿಲ್ಲೆಯಲ್ಲಿ ಪಕ್ಷದ ಅಭ್ಯರ್ಥಿಗಳು ಸೋಲು ಕಂಡಿದ್ದಾರೆಂದು. ವಿಜಯಾನಂದ ಅವರನ್ನು ಯಾರು ಬಲಿಪಶು ಮಾಡಲು ಸಾಧ್ಯವಿಲ್ಲ. ನನ್ನ ಆರಂಭದ ಎರಡು ಚುನಾವಣೆಯಲ್ಲೂ ಸೋಲು ಕಂಡ ನಂತರ ಮೂರನೇ ಚುನಾವಣೆಯಲ್ಲಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಜನರೇ ಹಣ ಹಾಗೂ ಮತ ನೀಡಿ ಹಾರೈಸಿರುವುದು ನಮ್ಮ ಸುದೈವ. ನಮ್ಮ ಮುಂದಿನ ನಡೆ ಏನೆಂಬುದನ್ನು ಕಾದುನೋಡಿ ಎಂದರು.

ಜಿ.ಪಂ ಮಾಜಿ ಸದಸ್ಯ ಎಚ್.ಎನ್.ಯೋಗೇಶ್ ಮಾತನಾಡಿ, ನಮ್ಮ ಅಭ್ಯರ್ಥಿಗೆ 15 ಸಾವಿರಕ್ಕೂ ಹೆಚ್ಚು ಮತಗಳು ಲಭಿಸಿವೆ. ಮತ ಗಳಿಕೆ ಪ್ರಮಾಣದ ಬಗ್ಗೆ ತೃಪ್ತಿ ಇದೆ. ಎಲ್ಲರ ಸಹಮತದ ಅಭ್ಯರ್ಥಿಯಾಗಿ ವಿಜಯಾನಂದ ಅವರನ್ನು ಕಣಕ್ಕಿಳಿಸಲಾಗಿತ್ತು. ಮುಂಬರುವ ದಿನಗಳಲ್ಲೂ ಸಾಮೂಹಿಕ ಹೊಣೆಗಾರಿಕೆಯಿಂದ ಕಾರ್ಯತಂತ್ರ ರೂಪಿಸಲಾಗುವುದೆಂದು ತಿಳಿಸಿದರು.

ಮುಖಂಡರಾದ ಮಹಾಲಿಂಗೇಗೌಡ ಮುದ್ದನಘಟ್ಟ, ತಿಮ್ಮೇಗೌಡ, ಲೋಕೇಶ್, ಪುಟ್ಟಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net