

ಬೆಂಗಳೂರು: ಬೆಂಗಳೂರು ಉಪನಗರ ರೈಲು ಯೋಜನೆ (ಬಿಎಸ್ಆರ್ಪಿ), ಕೆಎಸ್ಆರ್ ಬೆಂಗಳೂರು ಸಿಟಿ ರೈಲ್ವೆ ನಿಲ್ದಾಣದಿಂದ-ದೇವನಹಳ್ಳಿ (ಕಾರಿಡಾರ್-1) ಮಾರ್ಗದ ನಿರ್ಮಾಣಕ್ಕೆ ಕೆ-ರೈಡ್ 1,422 ಕೋಟಿ ರೂ. ಮೊತ್ತದ ಟೆಂಡರ್ ಆಹ್ವಾನಿಸಿದೆ.
ಉಪನಗರ ರೈಲು ಯೋಜನೆ ಅನುಷ್ಠಾನಗೊಳಿಸುತ್ತಿರುವ ಕೆ-ರೈಡ್ ಸಂಸ್ಥೆ, ಕಾರಿಡಾರ್-1ರ 41.40 ಕಿ.ಮೀ ಮಾರ್ಗ ನಿರ್ಮಾಣಕ್ಕೆ ಎರಡು ಹಂತದಲ್ಲಿ ಟೆಂಡರ್ ಆಹ್ವಾನಿಸುತ್ತಿದೆ. ಮೊದಲ ಹಂತದ ಟೆಂಡರ್ನಲ್ಲಿ ಕೆಎಸ್ಆರ್ ಬೆಂಗಳೂರು ಸಿಟಿ ರೈಲ್ವೆ ನಿಲ್ದಾಣದಿಂದ ಯಲಹಂಕವರೆಗಿನ 18 ಕಿ.ಮೀ ಮಾರ್ಗ ಮತ್ತು ನಿಲ್ದಾಣಗಳ ನಿರ್ಮಾಣಕ್ಕೆ ಟೆಂಡರ್ ಅಹ್ವಾನಿಸಿದೆ.
ಟೆಂಡರ್ ಪ್ಯಾಕೇಜ್ನಲ್ಲಿ 14.5 ಕಿಮೀ ಉದ್ದದ ಎತ್ತರಿಸಿದ ಮಾರ್ಗ ನಿರ್ಮಾಣ, 3.5 ಕಿಮೀ ಉದ್ದದ ನೆಲಮಟ್ಟದ ಮಾರ್ಗದ ನಿರ್ಮಾಣ, ಏಳು ನಿಲ್ದಾಣಗಳ ಕಟ್ಟಡಗಳು ಮತ್ತು ಒಂದು ರೈಲ್ವೆ ಓವರ್ ಬ್ರಿಡ್ಜ್ ನಿರ್ಮಾಣವನ್ನು ಒಳಗೊಂಡಿದೆ.
ಎರಡನೇ ಹಂತದಲ್ಲಿ ಯಲಹಂಕದಿಂದ-ದೇವನಹಳ್ಳಿವರೆಗೆ (23 ಕಿ.ಮೀ) ಯೋಜನೆಯನ್ನು ಕೈಗೆತ್ತಿಕೊಳ್ಳಲಿದೆ. ಕಾರಿಡಾರ್-1 (ಸಂಪಿಗೆ ಮಾರ್ಗ) ನಿರ್ಮಾಣಕ್ಕೆ ಯುರೋಪಿಯನ್ ಇನ್ವೆಸ್ಟೆಮೆಂಟ್ ಬ್ಯಾಂಕ್ ಸಾಲ ನೀಡುತ್ತಿದೆ.