ಎನ್.ಸಿ.ಪ್ರಸಾದ್, ಪ್ರೇಮಾ ಅವಿರೋಧ ಆಯ್ಕೆ

06 KRN-1
Published on

ಕೆ.ಆರ್.ನಗರ: ತಾಲೂಕು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಹಾಡ್ಯ ಕ್ಷೇತ್ರದ ಎನ್.ಸಿ.ಪ್ರಸಾದ್ ಹಾಗೂ ಉಪಾಧ್ಯಕ್ಷೆಯಾಗಿ ಚೀರ‌್ನಹಳ್ಳಿ ಕ್ಷೇತ್ರದ ಪ್ರೇಮಾ ಕುಳ್ಳಬೋರೇಗೌಡ ಅವಿರೋಧವಾಗಿ ಆಯ್ಕೆಯಾದರು.

ಬ್ಯಾಂಕ್‌ನ ಆಡಳಿತ ಮಂಡಳಿಗೆ ಗುರುವಾರ ಚುನಾವಣೆ ನಿಗದಿಯಾಗಿತ್ತು. ಬ್ಯಾಂಕ್‌ನ ಒಟ್ಟು 14 ನಿರ್ದೇಶಕರ ಸ್ಥಾನಗಳಲ್ಲಿ ಕಾಂಗ್ರೆಸ್ 10, ಜೆಡಿಎಸ್ 4 ಸ್ಥಾನಗಳ ಬಲವನ್ನು ಹೊಂದಿದೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿ ಅಧ್ಯಕ್ಷ ಸ್ಥಾನಕ್ಕೆ ಎನ್.ಸಿ.ಪ್ರಸಾದ್, ಉಪಾಧ್ಯಕ್ಷ ಸ್ಥಾನಕ್ಕೆ ಪ್ರೇಮಾ ಕುಳ್ಳಬೋರೇಗೌಡ ಅವರು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯಾದ ಸಹಕಾರ ಇಲಾಖೆಯ ಸಹಾಯಕ ಅಭಿವೃದ್ಧಿ ಅಧಿಕಾರಿ ಡಿ.ಎಲ್.ಸುರೇಶ್ ಅವಿರೋಧ ಆಯ್ಕೆಯನ್ನು ಘೋಷಿಸಿದರು.

ಕಳೆದ 25 ವರ್ಷಗಳಿಂದ ಜೆಡಿಎಸ್ ತೆಕ್ಕೆಯಲ್ಲಿದ್ದ ಆಡಳಿತವನ್ನು ಈ ಬಾರಿ ಕಾಂಗ್ರೆಸ್ ತನ್ನ ಮಡಿಲಿಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಚುನಾವಣಾ ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸಿದರು.

ನಿರ್ದೇಶಕರಾದ ಬಿ.ಸಿದ್ದೇಗೌಡ, ಬಿ.ಎಂ.ಮಲ್ಲಿಕಾರ್ಜುನ, ಕೆ.ಟಿ.ಚಂದ್ರೇಗೌಡ, ಸಿದ್ದನಾಯಕ, ಬಿ.ಎಸ್.ಚಂದ್ರಹಾಸ, ಚಂದ್ರಶೇಖರ್, ಪುಷ್ಪರೇವಣ್ಣ, ಕಲಾವತಿ, ಎಂ.ಎಸ್.ಹರಿಚಿದಂಬರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಹದೇವ್, ವಕ್ತಾರ ಸೈಯದ್‌ಜಾಬೀರ್, ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಸಾ.ಮಾ.ಯೋಗೀಶ್, ಮುಖಂಡರಾದ ದಿಡ್ಡಹಳ್ಳಿ ಬಸವರಾಜು, ಕೆ.ಸಿ.ಹರೀಶ್, ಜಯಂತ್ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net