

ಉದಕದೊಳಗಣ ಪ್ರತಿಬಿಂಬದಂತೆ
ಬೀಜದೊಳಗಣ ವೃಕ್ಷದಂತೆ
ಶಬ್ದದೊಳಗಣ ನಿಶ್ಶಬ್ದದಂತೆ
ಗುಹೇಶ್ವರ, ನಿಮ್ಮ ಶರಣಸಂಬಂಧ.
ವಚನವೇ ಹೇಳುವಂತೆ, ಅದು ಗುಹೇಶ್ವರನ ‘ಶರಣಸಂಬಂಧ’ವನ್ನು ನಿರೂಪಿಸಲು ಹೊರಟಿದೆ. ಈ ನಿರೂಪಣೆಗೆ ಅದು ಕೆಲವು ಹೋಲಿಕೆಗಳ ನೆರವನ್ನು ಪಡೆಯುತ್ತಿದೆ. ಈ ಹೋಲಿಕೆಗಳು ಮತ್ತು ಅವುಗಳ ಮೂಲಕ ನಿಷ್ಪನ್ನವಾಗುವ ‘ಸಂಬಂಧ’ ಇವುಗಳಲ್ಲೇ ಈ ವಚನದ ಒಟ್ಟಾರೆಯಾದ ಹೆಣಿಗೆಯಿದೆ.
ಈ ಎಲ್ಲ ಹೋಲಿಕೆಗಳಲ್ಲಿ ಒಂದು ಸಮಾನಾಂತರತೆ ಇದೆ. ಅವು ‘ಒಂದರ ಒಳಗಣ ಇನ್ನೊಂದರಂತೆ’ ಎಂಬ ರಚನೆಯಲ್ಲಿವೆ. ಅರ್ಥಾತ್ ಇವೆಲ್ಲದರಲ್ಲೂ ಒಂದು ವ್ಯಕ್ತದ ಸ್ತರವಿದೆ; ಅದಕ್ಕೆ ಹಿನ್ನೆಲೆಯಾಗಿ ಇನ್ನೊಂದು ಅವ್ಯಕ್ತದ ಸ್ತರವಿದೆ. ಹೀಗೆ ವ್ಯಕ್ತ ಮತ್ತು ಅವ್ಯಕ್ತದ ಹಿನ್ನೆಲೆಯಲ್ಲಿ ಇಲ್ಲೊಂದು ಅಸ್ತಿತ್ವದ ವಿವರಣೆಯಿದೆ. ಇನ್ನೊಂದು ಕಡೆಯಿಂದ ಇದನ್ನು ‘ಹೊರಗಣ ವಾಸ್ತವ’ ಮತ್ತು ‘ಒಳಗಣ ವಾಸ್ತವ’ ಎಂದೂ ಕರೆದುಕೊಳ್ಳಬಹುದಾಗಿದೆ. ಹೀಗೆ ‘ಒಳಗು-ಹೊರಗು’ಗಳಲ್ಲಿ ಪ್ರಕಟವಾಗುವುದರಲ್ಲೇ ಇಲ್ಲಿನ ಅಸ್ತಿತ್ವದ ಸ್ವ-ಭಾವವೂ, ಅರ್ಥಾತ್ ತನ್ನತನವೂ ಇದೆ. ಅಸ್ತಿತ್ವದ ಈ ಸ್ವರೂಪದ ಹಿನ್ನೆಲೆಯಲ್ಲೇ ಇಲ್ಲಿನ ಸಂಬಂಧದ ಸ್ವರೂಪವೂ ಇದೆ.
ಇದು ಒಂದು ಕಡೆಯಿಂದ ಗುಹೇಶ್ವರನು ಶರಣನೊಂದಿಗೆ ಹೊಂದಿರುವ ಸಂಬಂಧವಾಗಿದ್ದರೆ, ಇನ್ನೊಂದು ಕಡೆಯಿಂದ ಶರಣನು ಗುಹೇಶ್ವರನೊಂದಿಗೆ ಹೊಂದಿರುವ ಸಂಬಂಧವೂ ಆಗಿದೆ. ಇದನ್ನು ಇನ್ನೊಂದಿಷ್ಟು ವಿಸ್ತರಿಸಿಕೊಳ್ಳುವುದಾದರೆ, ಈ ಸಂಬಂಧದ ಹೆಣಿಗೆಯಲ್ಲೇ ಒಂದೆಡೆ ಶರಣತ್ವದ ನಿರ್ವಚನವಿದ್ದರೆ, ಇನ್ನೊಂದೆಡೆ ದೇವತ್ವದ ನಿರ್ವಚನವಿದೆ.
ಶರಣತ್ವವು ತನ್ನನ್ನು ತಾನು ಒಪ್ಪಿಸಿಕೊಳ್ಳುವ ಅಸ್ತಿತ್ವವಾಗಿದ್ದರೆ, ದೇವತ್ವವು ಅದನ್ನು ಒಪ್ಪಿಕೊಳ್ಳುವ ವಾಸ್ತವವಾಗಿದೆ. ಹೀಗಾಗಿ ಇದು ಒಪ್ಪಿಸಿಕೊಳ್ಳುವುದರ ಮತ್ತು ಒಪ್ಪಿಕೊಳ್ಳುವುದರ ನಡುವಿನ ಸಂಬಂಧವೂ ಆಗಿದೆ. ಇಲ್ಲಿ ವಚನದ ಹೋಲಿಕೆಗಳ ನೆರವನ್ನು ಒಂದಿಷ್ಟು ಪಡೆಯುವುದಾದರೆ, ಯಾವುದು ಒಪ್ಪಿಸಿಕೊಳ್ಳುತ್ತಿದೆಯೋ ಅದು ‘ಹೊರಗಣ’, ಅರ್ಥಾತ್ ಪ್ರಕಟವಾಗುವ ಸ್ತರದಲ್ಲಿದೆ; ಯಾವುದು ಒಪ್ಪಿಕೊಳ್ಳುತ್ತಿದೆಯೋ ಅದು ‘ಒಳಗಣ’, ಅರ್ಥಾತ್ ಪ್ರಕಟವಾಗದ ಸ್ತರದಲ್ಲಿದೆ. ಇನ್ನೊಂದು ರೀತಿಯಲ್ಲಿ ನೋಡುವುದಾದರೆ, ಇಲ್ಲಿ ಶರಣನಿಗೂ ಕ್ರಿಯೆಯಿದೆ; ದೇವನಿಗೂ ಕ್ರಿಯೆಯಿದೆ. ಶರಣನದು ದೇವನಿಗೆ ಬಿಟ್ಟುಕೊಡುವ ಕ್ರಿಯೆಯಾಗಿದೆ; ದೇವನದು ಶರಣನದನ್ನು ತೆಗೆದುಕೊಳ್ಳುವ ಕ್ರಿಯೆಯಾಗಿದೆ. ಇಲ್ಲೊಂದು ರೀತಿಯಲ್ಲಿ ವಿರೋಧವೆಂದು ತೋರಬಹುದಾದ ಸಂಗತಿಯೂ ಇದೆ. ಯಾವುದು ಒಳಗಿನದಕ್ಕೆ ಬಿಟ್ಟುಕೊಡುತ್ತಿದೆಯೋ ಅದು ಹೊರಗಿನ ವ್ಯಕ್ತತೆಯಲ್ಲಿದೆ; ಯಾವುದು ಹೊರಗಿನದನ್ನು ಸ್ವೀಕರಿಸುತ್ತಿದೆಯೋ ಅದು ಒಳಗೆ ಅವ್ಯಕ್ತವಾಗಿದೆ. ಎಂದರೆ ಮೇಲುನೋಟಕ್ಕೆ ತೋರುವಂತೆ ಸಕ್ರಿಯತೆಯಲ್ಲಿ (active) ನಿಷ್ಕ್ರಿಯತೆಯಿದೆ (passive); ನಿಷ್ಕ್ರಿಯತೆಯಲ್ಲಿ ಸಕ್ರಿಯತೆಯಿದೆ. ಹಾಗೆ ನೋಡಿದರೆ ಇದು ಕೇವಲ ಹೀಗೆ ಇರುವುದು ಮಾತ್ರವಲ್ಲ, ಶರಣತ್ವ ಹಾಗೂ ದೇವತ್ವಗಳ ನಡುವಿನ ಒಂದು ‘ಒಳ’ ಒಪ್ಪಂದದ ಮಾದರಿಯಾಗಿಯೂ ಇದು ಕಾಣುತ್ತಿದೆ. ಶಿಲೆಯ ‘ಒಳಗು’ತನವೆನ್ನುವುದು ಪಾವಕನ ಸಾಧ್ಯತೆಯಾಗಿದೆ; ಹಾಗೆಯೇ ಉದಕದ ಒಳಗುತನವೆನ್ನುವುದು ಪ್ರತಿಬಿಂಬದ ಸಾಧ್ಯತೆಯೂ, ಬೀಜದ ಒಳಗುತನವೆನ್ನುವುದು ವೃಕ್ಷದ ಸಾಧ್ಯತೆಯಾಗಿಯೂ ಇದೆ. ಹಾಗೆಯೇ ಶಬ್ದ ಮತ್ತು ನಿಶ್ಯಬ್ದಗಳು ಒಂದು ದೃಷ್ಟಿಗೆ ಪರಸ್ಪರ ವಿರೋಧಗಳಾಗಿ ತೋರಬಹುದಾದರೂ ವಾಸ್ತವವಾಗಿ ನಿಶ್ಶಬ್ದದ ಸಾಧ್ಯತೆಯಲ್ಲಿಯೇ ಶಬ್ದದ ವ್ಯಕ್ತತೆಯಿದೆ. ಅಥವಾ, ನಿಜದ ಸಂಗತಿಯೆಂದರೆ, ಸಾಧ್ಯತೆಯ ಹಿನ್ನೆಲೆಯಲ್ಲಿ ಮಾತ್ರವೇ ವ್ಯಕ್ತತೆಗೆ ಅರ್ಥವಿದೆ. ಸಾಧ್ಯತೆಯ ಅಭಾವದಲ್ಲಿ ವ್ಯಕ್ತತೆಯೆನ್ನುವುದಾದರೂ ಶೂನ್ಯವೇ ಆಗಿಬಿಡುತ್ತದೆ. ಆದ್ದರಿಂದಲೇ, ಸಾಧ್ಯತೆಗೆ ತನ್ನನ್ನು ಒಪ್ಪಿಸಿಕೊಳ್ಳದೆ ವ್ಯಕ್ತತೆಯು ವ್ಯಕ್ತತೆಯಾಗಲಾರದು; ಇನ್ನೊಂದೆಡೆ, ವ್ಯಕ್ತತೆಯನ್ನು ಒಪ್ಪಿಕೊಳ್ಳುವುದರಲ್ಲೇ ಸಾಧ್ಯತೆಯ ಪೂರ್ಣತೆಯಿದೆ.
ಈ ಹಿನ್ನೆಲೆಯಲ್ಲಿ ನೋಡಿದಾಗ ಗುಹೇಶ್ವರನೆಂದರೆ ಅವ್ಯಕ್ತ ಶರಣ; ಶರಣನೆಂದರೆ ವ್ಯಕ್ತ ಗುಹೇಶ್ವರ. ಈ ಬಗೆಯ ವ್ಯಕ್ತ-ಅವ್ಯಕ್ತಗಳಲ್ಲೇ ಗುಹೇಶ್ವರನ-ಶರಣನ ಸಂಬಂಧದ ಹೆಣಿಗೆಯಿದೆ. ಇನ್ನೊಂದು ಮಗ್ಗುಲಿನಿಂದ ನೋಡುವುದಾದರೆ ಇದರಲ್ಲಿ ಗುಹೇಶ್ವರನ ದೇವತ್ವದ ಹಾಗೂ ಶರಣನ ಶರಣತ್ವದ ಒಂದು ವಿವರಣೆಯೂ ಇದೆ. ಗುಹೇಶ್ವರನ ಅವ್ಯಕ್ತದ ಆಧಾರದಲ್ಲಿ ಮಾತ್ರವೇ ಶರಣನ ಶರಣತ್ವವು ವ್ಯಕ್ತತೆಯನ್ನು ಪಡೆಯಬಲ್ಲುದು. ಅಥವಾ ತಾನು ಅವ್ಯಕ್ತವಾಗಿದ್ದುಕೊಂಡು ಶರಣನಿಗೆ ವ್ಯಕ್ತತೆಯನ್ನು ಬಿಟ್ಟುಕೊಟ್ಟಿರುವುದರಲ್ಲೇ ಗುಹೇಶ್ವರನ ದೇವತ್ವವಿದೆ. ಒಳಗಣವು ಹೊರಗಣವನ್ನು ಹೊರಗಿರಲು ಬಿಟ್ಟಿದ್ದರಲ್ಲಿ ಅದರ ಒಂದು ಮರೆಯಾಗುವ ಸ್ವಭಾವವಿದೆ. ಹೊರಗಣವು ಹೊರಗಿರುವುದಾದರೂ ಒಳಗಣದ ಆಧಾರದಲ್ಲಿ ಮಾತ್ರವೇ ಹೊರಗಿನದಾಗಲು ಬಯಸುತ್ತದೆ. ಈ ಅರ್ಥದಲ್ಲಿ ಅದಕ್ಕೂ ಒಂದು ನಾಚುವ ಸ್ವಭಾವವಿದೆ.
ಈ ಹಿನ್ನೆಲೆಯಲ್ಲಿ ನೋಡಿದಾಗ ಶರಣನ ಶರಣತ್ವವೂ ಗುಹೇಶ್ವರನ ದೇವತ್ವವೂ ಪರಸ್ಪರ ನಿರಪೇಕ್ಷವಾದ ಸಂಗತಿಗಳಲ್ಲ. ಶರಣನ ಶರಣತ್ವವಿಲ್ಲದೆ ಗುಹೇಶ್ವರನ ದೇವತ್ವವಿರಲಾರದು; ಗುಹೇಶ್ವರನ ದೇವತ್ವವಿಲ್ಲದೆ ಶರಣನ ಶರಣತ್ವವಿರಲಾರದು. ಅದೊಂದು ಸಮ್ಯಕ್-ಬಂಧವಾಗಿದೆ. ಈ ದೃಷ್ಟಿಯಿಂದ ಭಕ್ತಿಯೆನ್ನುವುದು ಕೂಡ ಆಯ್ಕೆಯ ಸಂಗತಿಯಾಗದೆ ಅಸ್ತಿತ್ವವೇ ಆಗಿದೆ.