ಅಂಕಣ, ಜ್ಯೋರ್ತಿಲಿಂಗ; ‘ಬಾರದ ಭವಂಗಳಲಿ’ ಬಂದ ಕಥನ

Jyotirlinga
Published on
ಒಂದಲ್ಲ ಎರಡಲ್ಲ ಮೂರಲ್ಲ ನಾಲ್ಕಲ್ಲ

ಎಂಬತ್ತುನಾಲ್ಕು ಲಕ್ಷ ಯೋನಿಯೊಳಗೆ

ಬಂದೆ ಬಂದೆ

ಬಾರದ ಭವಂಗಳನುಂಡೆನುಂಡೆ ಸುಖಾಸುಖಂಗಳ

ಹಿಂದಣ ಜನ್ಮಂಗಳು ತಾನೇನಾದರಾಗಲಿ

ಇಂದು ನೀ ಕರುಣಿಸು ಚೆನ್ನಮಲ್ಲಿಕಾರ್ಜುನ.

ಪ್ರಸ್ತುತ ವಚನವು ಅನುಭವವೊಂದರ ನಿರೂಪಣೆಯ ಕ್ರಮದಲ್ಲಿದೆ. ನಿರ್ದಿಷ್ಟಪಡಿಸುವುದಾದರೆ, ಇದು ಸ್ವಾನುಭವವೂ ಆಗಿದೆ. ಸಾಮಾನ್ಯವಾಗಿ ಅನುಭವದ ನಿರೂಪಣೆಯೆನ್ನುವುದು ಸ್ಮೃತಿಯೊಂದಿಗೆ ಕೂಡಿಕೊಂಡಿರುತ್ತದೆ. ಇಲ್ಲಿಯ ಅನುಭವದಲ್ಲಿಯೂ ಸ್ಮೃತಿಯಿದೆ. ಆದರೆ ಈ ಸ್ಮೃತಿಯ ವಿಶಿಷ್ಟತೆಯ ಕಾರಣಕ್ಕಾಗಿಯೇ ವಚನವೂ ವಿಶಿಷ್ಟವಾಗುತ್ತದೆ. ಸ್ಮೃತಿಯೊಂದಿಗೆ ವಿಸ್ಮೃತಿಯೂ ಸೇರಿಕೊಳ್ಳುತ್ತದೆ.

ಏಕೆಂದರೆ ಸ್ಮೃತಿಗೂ ಮಿತಿಯೆನ್ನುವುದಿದೆ. ಕಾಲ-ದೇಶಗಳ ಹಿನ್ನೆಲೆಯಲ್ಲಿ ಅದು ಅನುಭವಗಳನ್ನು ಆಯ್ಕೆ ಮಾಡುವ ಹಾಗೂ ಹಾಗೆ ಆಯ್ಕೆ ಮಾಡಿಕೊಳ್ಳುವುದನ್ನು ದಾಖಲಿಸಿಕೊಳ್ಳುವ ಕೆಲಸವನ್ನು ಮಾಡುತ್ತದೆ. ಈ ದಾಖಲೀಕರಣದಲ್ಲಿ ಒಂದು ಸಂಪಾದಕತ್ವದ (ಉಛಜಿಠಿಜ್ಞಿಜ) ವಿನ್ಯಾಸವೂ ಇರುತ್ತದೆ. ಅನುಭವಗಳು ಮುಖ್ಯ ಹಾಗೂ ಅಮುಖ್ಯವಾದವುಗಳೆಂದು ವಿಂಗಡಣೆಗೆ ಒಳಗಾಗುತ್ತವೆ. ಇದರೊಂದಿಗೆ ಇಷ್ಟವಿರುವ ಹಾಗೂ ಇಷ್ಟವಲ್ಲದ ಎಂಬ ವಿಂಗಡಣೆಗಳೂ ಜೊತೆಗೂಡುತ್ತವೆ.

ಹೀಗಾಗಿಯೇ ಇಲ್ಲಿ ಕೆಲವನ್ನು ಉಳಿಸಿಕೊಳ್ಳಲಾಗುತ್ತದೆ ಹಾಗೂ ಕೆಲವನ್ನು ಅಳಿಸಲಾಗುತ್ತದೆ. ಈ ಅಳಿಸಿ-ಉಳಿಸಿದವುಗಳ ಆಧಾರದ ಮೇಲೆಯೇ ತನ್ನದು ಎನ್ನಲಾದ, ಅಥವಾ ತನ್ನ ಅಪೇಕ್ಷೆಯ ತನ್ನತನದ ಅಸ್ಮಿತೆಯೊಂದನ್ನು ಕೂಡ ಕಟ್ಟಿಕೊಳ್ಳಲಾಗುತ್ತದೆ. ಈ ಹಿನ್ನೆಲೆಯಲ್ಲಿ ನೋಡಿದಾಗ ಬಹಳಷ್ಟು ಸಲ ಅನುಭವದ ನಿರೂಪಣೆಗಳು ಎನ್ನುವಂಥವು ತೋರಿಸುವುದಕ್ಕಿಂತ ತೋರಿಸದಿರುವುದೇ ಹೆಚ್ಚಾಗಿರುವುದುಂಟು.

ಪ್ರಸ್ತುತ ವಚನವು ಮುಂದಿಡುತ್ತಿರುವ ಅನುಭವದ ಸ್ವರೂಪ ಈ ದೃಷ್ಟಿಯಿಂದ ಅತ್ಯಂತ ವಿಭಿನ್ನವಾಗಿರುವುದನ್ನು ಗಮನಿಸಬಹುದು. ಸಾಮಾನ್ಯವಾಗಿ ಎಲ್ಲ ಅನುಭವದ ನಿರೂಪಣೆಗಳು ಹುಟ್ಟಿನಿಂದ, ನಿರ್ದಿಷ್ಟವಾಗಿ ಹೇಳುವುದಾದರೆ ಒಂದು ಹುಟ್ಟಿನಿಂದ ಪ್ರಾರಂಭವಾಗುತ್ತವೆ; ಅಥವಾ ಒಂದು ಹುಟ್ಟನ್ನು ಆಧರಿಸಿರುತ್ತವೆ. ಇದು ಸಾಮಾನ್ಯ ಗ್ರಹಿಕೆಯಲ್ಲಿ ಅನುಭವ ಹಾಗೂ ಅನುಭವಿ ಈ ಎರಡರ ನಡುವಣ ಸಮತೋಲನದ ಸಂಗತಿಯೂ ಹೌದು.

ಆದರೆ ವಚನದ ಪ್ರಾರಂಭದ ಬಿಂದುವಿರುವುದೇ ಈ ಸಮತೋಲನವನ್ನು ಮುರಿಯುವುದರಲ್ಲಿ. ‘ಒಂದಲ್ಲ ಎರಡಲ್ಲ ಮೂರಲ್ಲ ನಾಲ್ಕಲ್ಲ ಎಂಬತ್ತುನಾಲ್ಕು ಲಕ್ಷ ಯೋನಿಯೊಳಗೆ ಬಂದೆ ಬಂದೆ’ ಎಂಬ ಮಾತು ಇಲ್ಲಿಯ ಅನುಭವ ಹಾಗೂ ಅನುಭವಿಯ ನಡುವಣ ಸಂಬಂಧವನ್ನು ಪುನಾರಚಿಸುತ್ತದೆ. ‘ಒಂದಲ್ಲ ಎರಡಲ್ಲ ಮೂರಲ್ಲ ನಾಲ್ಕಲ್ಲ’ ಎಂಬಲ್ಲಿ ಇರುವ ‘ಅಲ್ಲ’ಗಳ ಪುನರಾವರ್ತನೆ ಹಾಗೂ ಸಂಖ್ಯಾತ್ಮಕ ಉಲ್ಲೇಖ ಇಲ್ಲಿ ಮೊದಲಿಗೆ ಅಸಂಖ್ಯದ ಸ್ಥಾಪನೆಗೆ ಅಗತ್ಯವಾದ ರ್ತಾಕ ಭೂಮಿಕೆಯನ್ನು ನಿರ್ವಿುಸುತ್ತದೆ.

ಈ ಹಿನ್ನೆಲೆಯಲ್ಲಿ ನೋಡಿದಾಗ ಇಲ್ಲಿಯ ಅನುಭವಿಯ ‘ನಾನು’ ಎನ್ನುವುದು ಕೂಡ ರೂಢಿಗತ ಗ್ರಹಿಕೆಯ ‘ನಾನು’ವಿಗಿಂತ ವಿಭಿನ್ನವಾಗಿ ಸ್ಥಾಪಿತವಾಗುತ್ತದೆ. ಇಲ್ಲಿ ಕ್ರಿಯೆ ಅಸಂಖ್ಯವಾಗಿದೆ; ಆದರೆ ಆ ಎಲ್ಲ ಕ್ರಿಯೆಗಳೂ ಒಂದೇ ಕರ್ತೃವಿಗೆ ಸಂಬಂಧಿಸಿರುವುದರಿಂದ ಅಸಂಖ್ಯಾತವಾಗಿದ್ದರೂ ಏಕತೆಯ ಆಧಾರವನ್ನು ಹೊಂದಿವೆ. ಹೀಗಾಗಿ ಇಲ್ಲಿನ ‘ಬಂದೆ ಬಂದೆ’ ಎಂಬ ಪುನರುಕ್ತಿ ಸುದೀರ್ಘ ಸಂಚಾರವೊಂದರ ನಿಲುಗಡೆಯಿಲ್ಲದ ಚಲನೆಯನ್ನು ಮುನ್ನೆಲೆಗೆ ತಂದು ನಿಲ್ಲಿಸುತ್ತದೆ.

ಈ ದೃಷ್ಟಿಯಿಂದ ಇಲ್ಲಿನ ವರ್ತಮಾನವೆನ್ನುವುದು ಅಸಂಖ್ಯ ಭೂತಗಳ ವರ್ತಮಾನವಾಗಿದೆ. ಅಷ್ಟೇ ಅಲ್ಲದೆ ಇಲ್ಲಿಯ ‘ನಾನು’ ಕೂಡ ಅಸಂಖ್ಯ ಭೂತಗಳ ಪರಿಣಾಮವಾಗಿದೆ. ಇದರೊಂದಿಗೆ ಇದು ಕೇವಲ ಸಂಚಾರವಾಗದೆ ವಿಕಸನದ ಕಡೆಗಿನ ಒಂದು ಪಯಣವೂ ಆಗಿದೆ. ಇಲ್ಲಿನ ‘ನಾನು’ ಎಂಬ ಬಿಂದು ಲೋಕದಿಂದ ಪ್ರತ್ಯೇಕವಾಗಿ ನಿಲ್ಲದೆ ಲೋಕಶರಧಿಯಲ್ಲಿ ತನ್ನನ್ನು ತಾನು ಕರಗಿಸಿಕೊಳ್ಳುವ ‘ನಾನು’ವಾಗಿದೆ; ಲೋಕದ ‘ಎಂಬತ್ತುನಾಲ್ಕು ಲಕ್ಷ’ ಜೀವಜಾತಗಳೊಂದಿಗೆ ತನ್ನನ್ನು ತಾದಾತ್ಮ್ಯೊಳಿಸಿಕೊಳ್ಳುವ ‘ನಾನು’ವಾಗಿದೆ. ಹೀಗಾಗಿ ಇಲ್ಲಿಯ ‘ಬರುವಿಕೆ’ ಎನ್ನುವುದು ತನ್ನೊಂದಿಗೆ ‘ಆಗುವಿಕೆ’ಯೊಂದರ ಸೂಚನೆಯನ್ನೂ ಹೊತ್ತು ತಂದಿದೆ.

ಈ ಆಗುವಿಕೆಯೆನ್ನುವುದು ಈಗಿನ ವರ್ತಮಾನದಲ್ಲಿ ‘ಒಂದಲ್ಲ ಎರಡಲ್ಲ... ಎಂಬತ್ತುನಾಲ್ಕು ಲಕ್ಷ’ ಭೂತಗಳನ್ನು ತನ್ನೊಳಗೆ ಸಾಂದ್ರಗೊಳಿಸಿಕೊಳ್ಳುತ್ತಿದೆ. ಹೀಗಾಗಿ ಇಲ್ಲಿಯ ಅನುಭವಿಯ ಪಿಂಡಾಂಡದಲ್ಲಿ ಬ್ರಹ್ಮಾಂಡದ ಅನುಭವಗಳ ಪ್ರಾತಿನಿಧ್ಯವಿದೆ. ಈ ಮೂಲಕ ವ್ಯಕ್ತಿಗತವಾದುದು ವಿಶ್ವಾತ್ಮಕವನ್ನು ತನ್ನೊಳಗೆ ಆವಾಹಿಸಿಕೊಳ್ಳುತ್ತಿದೆ. ‘ಬಾರದ ಭವಂಗಳಲಿ’ ‘ಬಂದೆ ಬಂದೆ’ ಎನ್ನುವುದರೊಂದಿಗೆ ‘ಉಂಡೆನು ಉಂಡೆನು ಸುಖ ಅಸುಖಂಗಳ’ ಎನ್ನುವುದು ತನ್ನ ಸೀಮಿತದಲ್ಲಿ ಅಸೀಮವನ್ನು ಅನುಭವಿಸುತ್ತದೆ. ಅಥವಾ ಬೇರೊಂದು ಬಗೆಯಲ್ಲಿ ಹೇಳುವುದಾದರೆ, ಸೀಮಿತದಲ್ಲಿಯೂ ಅಸೀಮವೇ ಆಗಿಬಿಡುತ್ತದೆ. ವಚನವು ತನ್ನ ನಿಲುಗಡೆಯಲ್ಲಿ ಬೇರೊಂದು ಸ್ತರಕ್ಕೆ ಹೊರಳುತ್ತದೆ.

ತನ್ನ ಸಾಂತತೆಯಲ್ಲಿ ಅನಂತತೆಯನ್ನು ಆವಾಹಿಸಿಕೊಂಡದ್ದರ ಫಲವಾಗಿಯೇ ಇಲ್ಲಿ ಬಿಡುಗಡೆಯ ಹಂಬಲವೊಂದು ವ್ಯಕ್ತವಾಗಿದೆ. ಈ ಹಂಬಲದಲ್ಲಿಯೇ ಶರಣಾಗತಿ, ಅರ್ಥಾತ್ ಶರಣತ್ವದ ವಿಕಸನವೂ ಇದೆ. ಇದು ‘ಹಿಂದಣ’ ಅಸ್ತಿತ್ವಗಳ ಎಲ್ಲ ಭಾರಗಳಿಂದ ಬಿಡಿಸಿಕೊಂಡು ‘ಇಂದಿನ’ ಕರುಣೆಗೆ ತವಕಿಸುತ್ತದೆ. ಈ ತವಕದಲ್ಲಿಯೇ ಇಲ್ಲಿನ ಭಕ್ತಿಯೂ ಇದೆ. ಇಲ್ಲಿ ಭಕ್ತಿಯೆನ್ನುವುದು ಅಸ್ತಿತ್ವದ ಅನಿವಾರ್ಯತೆಯಾಗಿದೆ. ಈ ದೃಷ್ಟಿಯಿಂದ ಇಲ್ಲಿ ಭಕ್ತಿಗೂ ಬೇರೊಂದು ಬಗೆಯ ಸಾಂರ್ದಭಿಕತೆ ಒದಗಿಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net