ಅರಿವು ಮತ್ತು ನಿಲವು

Jyotirlinga
Published on
ನೆಲನೊಂದೆ ಹೊಲಗೇರಿ ಶಿವಾಲಯಕ್ಕೆ

ಜಲವೊಂದೆ ಶೌಚಾಚಮನಕ್ಕೆ

ಕುಲವೊಂದೆ ತನ್ನತಾನರಿದವಂಗೆ

ಫಲವೊಂದೆ ಷಡುದರುಶನ ಮುಕ್ತಿಗೆ

ನಿಲವೊಂದೆ ಕೂಡಲಸಂಗಮದೇವಾ ನಿಮ್ಮನರಿದವಂಗೆ

ಪ್ರಸ್ತುತ ವಚನ ತನ್ನ ಸಂದೇಶದ ಅಭಿವ್ಯಕ್ತಿಗೆ ಹಲವು ವಿಧಾನಗಳನ್ನು ಅನುಸರಿಸುತ್ತಿದೆ. ಮೊದಲನೆಯದಾಗಿ ಇಲ್ಲಿನ ಐದು ವಾಕ್ಯಗಳಲ್ಲಿ ಒಂದು ಸಮಾನಾಂತರತೆ (parallel) ಇದೆ. ಆಂತರಿಕ ಲಯಗಾರಿಕೆ ಕೂಡ ಶಾಬ್ದಿಕವಾಗಿ ವಾಕ್ಯಗಳನ್ನು ಒಂದರೊಡನೊಂದು ಕೂಡಿಸುತ್ತದೆ. ಎಲ್ಲ ವಾಕ್ಯಗಳಲ್ಲಿ ಕ್ರಿಯಾಪದಗಳನ್ನು ‘ಮೊದಲಿಗೆ’ ಇರಿಸಲಾಗಿದೆ.

ಹೀಗೆ ಇರಿಸುವುದರ ಮೂಲಕವೇ ಇದನ್ನೊಂದು ತಾರ್ಕಿಕ ಸಮರ್ಥನೆಯ ಸಾಧನವನ್ನಾಗಿಯೂ ಬಳಸಲಾಗಿದೆ. ಇದಲ್ಲದೆ ಒಂದೆ (ಒಂದು + ಎ) ಎನ್ನುವುದೂ ಅವಧಾರಣೆಯೇ ಆಗಿದ್ದು ಇದರ ಪುನರಾವರ್ತನೆಯಿಂದಾಗಿ ಇದಕ್ಕೆ ರ್ತಾಕ ನಿರೂಪಣೆಯ ಸ್ವರೂಪವೂ ಪ್ರಾಪ್ತವಾಗಿದೆ. ಒಟ್ಟಿನಲ್ಲಿ, ಹೇಳಬೇಕಾದುದನ್ನು ‘ಹೀಗೆಯೇ’ ಹೇಳಬೇಕು ಎಂದು ಇಲ್ಲಿ ಸಂಕಲ್ಪಿಸಿದಂತಿದೆ. ವಾದವೊಂದನ್ನು ಮಂಡಿಸಲು ಇದು ಎಲ್ಲ ರೀತಿಯಲ್ಲೂ ಸಜ್ಜಾಗಿದೆ.

ಮೊದಲಿಗೆ ಇಲ್ಲಿನ ‘ಒಂದು’ಗಳ ಸರಣಿಯನ್ನು ಗಮನಿಸೋಣ.

ಈ ಒಂದುಗಳು ಇಲ್ಲಿ ಕೂಡಿಸುವ ಅಥವಾ ಜೋಡಿಸುವ ಕೆಲಸದಲ್ಲಿ ಮುಖ್ಯವಾಗಿ ತೊಡಗಿಕೊಂಡಿವೆ. ಆದರೆ ಈ ‘ಜೋಡಣೆ’ಯ ಕೆಲಸಕ್ಕೆ ಪೂರ್ವಪಕ್ಷವೊಂದಿದೆ. ಅದು ಒಪ್ಪಿತವಾದ ಸಾಮಾಜಿಕತೆಯಲ್ಲಿ (ಹಾಗೂ ಧಾರ್ವಿುಕತೆ ಕೂಡ) ಎಲ್ಲವನ್ನೂ ವಿಭಜಿಸುತ್ತದೆ. ಹಾಗೆ ವಿಭಜಿಸುವುದರ ಮೂಲಕವೇ ಪ್ರತ್ಯೇಕ ವರ್ಗಗಳನ್ನು ಸೃಷ್ಟಿಸುತ್ತದೆ.

ಹಾಗಾಗಿಯೇ ಹೊಲಗೇರಿ-ಶಿವಾಲಯಗಳು, ಶೌಚ-ಆಚಮನಗಳು, ಇನ್ನೂ ಹಲವು ವಿಂಗಡಣೆಗಳು ಅಸ್ತಿತ್ವಕ್ಕೆ ಬಂದಿವೆ. ಈ ಅಸ್ತಿತ್ವವನ್ನು ಕುರಿತ ಪ್ರಶ್ನೆಯೇ ವಚನದ ಮುಖ್ಯ ಭೂಮಿಕೆಯೂ ಆಗಿದೆ. ಅಲ್ಲದೆ ಈ ಮೇಲೆ ಹೇಳಿದ ವಿಂಗಡಣೆಗಳು ವೈರುದ್ಧ್ಯಳೂ ಆಗಿವೆ. ಅಥವಾ ಆ ವೈರುದ್ಧ್ಯಲ್ಲಿಯೇ ಈ ವಿಂಗಡಣೆಗಳ ಅಸ್ತಿತ್ವವಿದೆ. ಶಿವಾಲಯ-ಆಚಮನಗಳ ಉಲ್ಲೇಖದಲ್ಲಿ ಇಲ್ಲಿ ಹೊಲಗೇರಿ-ಶೌಚಗಳನ್ನು ಇರಿಸಲಾಗುತ್ತಿದೆ.

ಹೀಗೆ ಇರಿಸುವುದರ ಮೂಲಕವೇ ಒಂದನ್ನು ಪವಿತ್ರವೆಂದೂ ಇನ್ನೊಂದನ್ನು ಅಪವಿತ್ರವೆಂದೂ ಸಾಧಿಸಲಾಗುತ್ತಿದೆ. ಆದರೆ ವಚನ ಇದನ್ನು ಪ್ರಶ್ನಿಸುತ್ತಿದೆ. ಹೀಗೆ ಪ್ರಶ್ನಿಸಲು ಅದು ರ್ತಾಕವಾದ ವಿಧಾನವೊಂದನ್ನು ಕೂಡ ಕಂಡುಕೊಂಡಿದೆ. ಇಲ್ಲಿ ಯಾವುವು ಪರಸ್ಪರ ವೈರುದ್ಧ್ಯಳಾಗಿವೆಯೋ ಆ ದ್ವಂದ್ವಗಳನ್ನು ಅವಕ್ಕಿಂತಲೂ ಹೆಚ್ಚು ವ್ಯಾಪಕವೂ ವಿಸ್ತಾರವೂ ಆದ ನೆಲೆಗಟ್ಟುಗಳಲ್ಲಿ ಇರಿಸುತ್ತಿದೆ. ಹಾಗೆ ಇರಿಸುವುದರ ಮೂಲಕವೇ ಅವುಗಳ ನಡುವಿನ ವೈರುದ್ಧ್ಯಳನ್ನು ಪರಿಹರಿಸಿ ಅಸ್ತಿತ್ವವನ್ನು ಬಂದಾಗಿ ಬೆಸೆಯಲು ನೋಡುತ್ತಿದೆ. ಹಾಗೆ ನೋಡಿದರೆ ಈ ‘ಒಂದಾಗಿ ಬೆಸೆಯುವುದೇ’ ಈ ವಚನದ ಆಧಾರಶ್ರುತಿಯೂ ಆಗಿದೆ.

ಈ ‘ಬೆಸೆಯುವಿಕೆ’ಗೆ ಸಂಬಂಧಿಸಿದಂತೆ ವಚನದಲ್ಲಿ ಒಂದು ವಿಶಿಷ್ಟವಾದ ಮೀಮಾಂಸೆಯೂ ನಿಷ್ಪನ್ನಗೊಳ್ಳುತ್ತದೆ. ಇರವನ್ನು ಅರಿವಿನೊಂದಿಗೆ ಬೆಸೆಯುವುದು ಈ ಮೀಮಾಂಸೆಯ ಲಕ್ಷಣವಾಗಿದೆ. ಇದರ ಉಲ್ಲೇಖ ಮೂರನೆಯ ಸಾಲಿನಲ್ಲಿದೆ. ‘ಕುಲವೊಂದೆ ತನ್ನ ತಾನರಿದವಂಗೆ’ ಎನ್ನುವುದರ ಮೂಲಕ ಇಲ್ಲಿ ಅರಿವನ್ನು ಮುನ್ನೆಲೆಗೆ ತರಲಾಗಿದೆ. ಈ ಅರಿವು ‘ಒಂದರ’ ಜೊತೆಗೆ ಬೆಸೆಯುವ ಅರಿವೂ ಆಗಿದೆ.

ಆದರೆ ಈ ಅರಿವು ಬಾಹ್ಯವಾದುದಾಗಿರದೆ ಆಂತರಿಕವಾದುದಾಗಿದೆ. ಈ ಆಂತರಿಕತೆಯೇ ಇಲ್ಲಿ ಅರಿವಿನ ಮುಖ್ಯ ಲಕ್ಷಣವೂ ಆಗಿದೆ. ತನ್ನನ್ನು ತಾನು ಅರಿಯುವುದೆಂದರೆ ತನ್ನೊಳಗಿನ ಮೂಲಕ ಎಲ್ಲವನ್ನೂ ಅರಿಯುವುದಾಗಿದೆ. ತನ್ನೊಳಗಿನ ಮೂಲಕ ಎಲ್ಲವನ್ನೂ ಅರಿಯುವುದರಲ್ಲಿ ಅದು ಕೇವಲ ಅರಿವಾಗಿರದೆ ಎಲ್ಲ ಇರವಿನೊಂದಿಗೆ ತನ್ನನ್ನು ಒಂದುಗೂಡಿಸುವ ಅರಿವೂ ಆಗಿದೆ. ಹೀಗೆ ಅರಿವು ಇರವನ್ನು ಕೂಡುವಲ್ಲಿ ಒಂದುಗೂಡಿಸುವಿಕೆಯೂ ಇದೆ. ಹೀಗಿರದ ಅರಿವು ಹಲವು ಕುಲಗಳನ್ನು ಹುಟ್ಟುಹಾಕುತ್ತದೆ. ಇದು ಅರಿವಿನ ಬಾಹ್ಯತನವೂ ಆಗಿದೆ. ಅರಿವು ಹೊರಗಾದಾಗ ಹಲವಿಗೆ ಎಡೆಮಾಡಿಕೊಡುತ್ತದೆ. ಆದರೆ ಅದು ಆಂತರಿಕವಾದಲ್ಲಿ ‘ಕುಲವೊಂದೆ’ ಎಂಬ ದರ್ಶನಕ್ಕೆ ಕಾರಣವಾಗುತ್ತದೆ.

ಹಲವು ದರುಶನಗಳನ್ನು ಹೊರಗಿನಿಂದ ನೋಡಿದಾಗ ಸೈದ್ಧಾಂತಿಕ ಭೇದಗಳಿಗೆ ಎಡೆಯಾಗುತ್ತದೆ. ಆದರೆ ದರುಶನಗಳ ಏಕತೆಯನ್ನು ವಚನವು ಮುಕ್ತಿಯೆಂಬ ಫಲದ ಸಾಫಲ್ಯದಲ್ಲಿ ಗುರುತಿಸುತ್ತದೆ. ಅಥವಾ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಈ ಏಕತೆಯೇ ಬಿಡುಗಡೆಯೂ ಆಗಿದೆ.

ವಚನದ ಪ್ರತಿಪಾದನೆಯಲ್ಲಿ ತನ್ನ ತಾನರಿಯುವುದೂ ಇದೆ; ಕೂಡಲಸಂಗಮದೇವನನ್ನು ಅರಿಯುವುದೂ ಇದೆ. ಈ ಎರಡೂ ಒಂದೇ ಅರಿವಿನ ವಿಸ್ತರಣೆಗಳೇ ಆಗಿವೆ. ಒಂದರಲ್ಲಿ ವ್ಯಕ್ತಿಯ ಕಡೆಯಿಂದ ವಿಶ್ವವನ್ನು ಸಂಧಿಸಿದರೆ, ಇನ್ನೊಂದರಲ್ಲಿ ವಿಶ್ವದ ಕಡೆಯಿಂದ ವ್ಯಕ್ತಿಯನ್ನು ಸಂಧಿಸಲಾಗುತ್ತದೆ. ಆದರೆ ಇವೆರಡೂ ಆಂತರಿಕವಾದ ಅನುಸಂಧಾನಗಳೇ ಆಗಿರುವುದರಿಂದ ಎಲ್ಲವನ್ನೂ ಕೂಡಿಸುತ್ತವೆ. ಹಲವು ಹದಿನೆಂಟು ಬಗೆಗಳಲ್ಲಿ ಹರಿದು ಹಂಚಿಹೋಗಿರುವ ಅಸ್ತಿತ್ವವನ್ನು ಪ್ರೀತಿಯಿಂದ ಒಗ್ಗೂಡಿಸುತ್ತವೆ. ಹೀಗಾಗಿ ಅರಿವಿನ ಸಾರ್ಥಕತೆಯನ್ನು ಇರವಿನ ಒಂದುಗೂಡಿಸುವಿಕೆಯಲ್ಲಿ ಗುರುತಿಸುವ ವಚನವು ಎಲ್ಲ ಕಾಲಕ್ಕೂ ಅಗತ್ಯವಾದ ಕಣ್ಣೊಂದನ್ನು ಕೂಡ ನೀಡಬಲ್ಲುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net