ಕೈಗೆ ಕೈಕೊಟ್ಟು ಕಮಲ ಹಿಡಿದು ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಜ್ಯೋತಿರಾದಿತ್ಯ ಸಿಂಧಿಯಾ

ಜ್ಯೋತಿರಾದಿತ್ಯ
Published on

ಭೋಪಾಲ್​: ಕಾಂಗ್ರೆಸ್​ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿರುವ ಮಾಜಿ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಇಂದು ಮಧ್ಯಪ್ರದೇಶದ ರಾಜ್ಯ ಸಭಾ ಚುನಾವಣೆಗೆ ಬಿಜೆಪಿಯಿಂದ ನಾಮಪತ್ರ ಸಲ್ಲಿಸಿದ್ದಾರೆ.

ಇಂದು ಮಧ್ಯಾಹ್ನ 2 ಗಂಟೆಯ ಹೊತ್ತಿಗೆ ರಾಜ್ಯ ಬಿಜೆಪಿ ಕಚೇರಿಯಿಂದ ರಾಜ್ಯ ವಿಧಾನಸಭಾ ಕಾರ್ಯದರ್ಶಿಯ ಕಚೇರಿಯನ್ನು ತಲುಪಿದ ಸಿಂಧಿಯಾ ಅಲ್ಲಿ ತಮ್ಮ ನಾಮಪತ್ರವನ್ನು ಸಲ್ಲಿಸಿದ್ದಾರೆ. ಆ ವೇಳೆ ಮಾಜಿ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​, ರಾಜ್ಯ ಬಿಜೆಪಿ ಅಧ್ಯಕ್ಷ ವಿ.ಡಿ.ಶರ್ಮಾ, ರಾಜ್ಯಸಭಾ ಸದಸ್ಯ ಪ್ರಭಾತ್​ ಸೇರಿ ಪಕ್ಷದ ಅನೇಕ ಮುಖಂಡರು ಸಿಂಧಿಯಾ ಜತೆಯಿದ್ದು ಶುಭಹಾರೈಸಿದ್ದಾರೆ.

ನಾಮಪತ್ರ ಸಲ್ಲಿಕೆಗೆ ಮೊದಲು ಸಿಂಧಿಯಾ ಸೇರಿದಂತೆ ಬಿಜೆಪಿಯ ಅನೇಕ ಮುಖಂಡರು ಮಾಜಿ ಸಚಿವರಾದ ನರೋತ್ತಮ್​ ಮಿಶ್ರಾ ಅವರ ಮನೆಯಲ್ಲಿ ಔತಣ ಕೂಟದಲ್ಲಿ ಭಾಗವಹಿಸಿದ್ದರು.

ಮಾ.10ರಂದು ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್​ಗೆ ರಾಜೀನಾಮೆ ಪತ್ರವನ್ನು ನೀಡಿದ್ದರು. ಮಾ.11ರಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಶಿವರಾಜ್​ ಚೌಹಾಣ್​ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಪಕ್ಷಕ್ಕೆ ಸೇರಿದ ಕೆಲವೇ ಗಂಟೆಗಳಲ್ಲಿ ರಾಜ್ಯಸಭಾ ಚುನಾವಣೆಯ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net