ಸಾಲ ತೀರಿಸದಿದ್ರೆ ಒಡವೆ ಹರಾಜಾಕ್ತೇವೆ: ಸುಸ್ತಿದಾರರಿಗೆ ಖಾಸಗಿ ಬ್ಯಾಂಕ್ ನೋಟಿಸ್,  ಸಣ್ಣ ವ್ಯಾಪಾರಿಗಳು ಕಂಗಾಲು ಮರುಪಾವತಿ ಕಷ್ಟ

loan01
Published on

ರಾಮನಗರ : ಕರೊನಾ ಸಂದರ್ಭದಲ್ಲಿ ಜೀವನ ನಿರ್ವಹಣೆ ಕಷ್ಟವಾಗಿರುವಾಗ ಖಾಸಗಿ ಬ್ಯಾಂಕ್ ಒಂದು ರೈತರು ಮತ್ತು ವ್ಯಾಪಾರಿಗಳಿಗೆ ಸಾಲ ತೀರಿಸುವಂತೆ ಒತ್ತಡ ಹೇರಿ, ಒಡವೆ ಹರಾಜು ಹಾಕುವ ನೋಟಿಸ್ ಜಾರಿ ಮಾಡಿದೆ. ಖಾಸಗಿ ಬ್ಯಾಂಕ್‌ನ ಕನಕಪುರ ಶಾಖೆಯೊಂದು ರೈತರು, ಸಣ್ಣ ವ್ಯಾಪಾರಿಗಳಿಗೆ ನೋಟಿಸ್ ನೀಡಿದ್ದು, ಮೇ 31ರ ಒಳಗಾಗಿ ಸಾಲ ಮರುಪಾವತಿ ಇಲ್ಲ, ನವೀಕರಿಸಿ. ಇಲ್ಲದಿದ್ದರೆ ಅಂದೇ ಮಧ್ಯಾಹ್ನ ಅಡವಿಟ್ಟಿರುವ ಚಿನ್ನವನ್ನು ಸಾರ್ವಜನಿಕ ಹರಾಜು ಹಾಕಲಾಗುವುದು ಎಂದು ತಿಳಿಸಿದೆ.

ಸಂಕಷ್ಟದಲ್ಲಿ ಕೆಲವರು: ಇವರಲ್ಲಿ ಕೆಲವು ಮಂದಿ ಕೋವಿಡ್‌ನಿಂದಾಗಿ ತೊಂದರೆಗೆ ಒಳಗಾಗಿದ್ದಾರೆ. ಶಿವರಾಜು ಎನ್ನುವವರು ಕೋವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಬಿ.ಎಸ್.ದೊಡ್ಡಿಯ ಶಿವಲಿಂಗೇಗೌಡ ಎನ್ನುವರು ಈಗಷ್ಟೇ ಕೋವಿಡ್‌ನಿಂದ ಚೇತರಿಸಿಕೊಂಡು ಹೊರ ಬಂದಿದ್ದಾರೆ. ಅಲ್ಲದೆ, ಕರೊನಾ ಹಿನ್ನೆಲೆಯಲ್ಲಿ ಲಾಕ್‌ಡೌನ್ ಇರುವ ಕಾರಣದಿಂದಾಗಿ ಸಾಕಷ್ಟು ನಷ್ಟವೂ ಇದ್ದು, ಈ ಸಂದರ್ಭದಲ್ಲಿ ಸಾಲ ಮರುಪಾವತಿ ಅಥವಾ ನವೀಕರಣ ಕಷ್ಟ. ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳನ್ನು ಕೇಳಿದರೆ, ‘ಅದೆಲ್ಲ ಗೊತ್ತಿಲ್ಲ. ಬ್ಯಾಂಕ್‌ಗೆ ಹಣ ಕಟ್ಟಿ, ಇಲ್ಲವೇ ಒಡವೆ ಹರಾಜು ಹಾಕುತ್ತೇವೆ’ ಎನ್ನುತ್ತಾರೆ.

ಸಮಯ ಕೊಡಿ: ಸಾಲ ಪಡೆದವರಲ್ಲಿ ಹೆಚ್ಚಿನ ಮಂದಿ ಸಣ್ಣ ವ್ಯಾಪಾರ, ಕೃಷಿಯಲ್ಲಿ ತೊಡಗಿಸಿಕೊಂಡವರೇ ಇದ್ದಾರೆ. ಲಾಕ್‌ಡೌನ್ ನಿಂದಾಗಿ ಸಾಲ ಮರುಪಾವತಿ ಅಥವಾ ನವೀಕರಣ ಕಷ್ಟವಾಗುತ್ತದೆ. ಲಾಕ್‌ಡೌನ್ ಪೂರ್ಣಗೊಂಡು 15 ದಿನಗಳಿಂದ ಒಂದು ತಿಂಗಳು ಕಾಲಾವಕಾಶ ನೀಡಿದರೆ ಹೇಗಾದರೂ ಮಾಡಿ ನಮ್ಮ ಒಡವೆ ಉಳಿಸಿಕೊಳ್ಳುತ್ತೇವೆ ಎಂದು ಬೇಡಿಕೊಳ್ಳುತ್ತಿದ್ದಾರೆ. ಅಲ್ಲದೆ, ಕೆಲವರು ಇನ್ನೂ ಕೋವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಹೇಗೆ ತಾನೇ ಬ್ಯಾಂಕ್‌ಗೆ ಬರಲು ಸಾಧ್ಯ ಎನ್ನುವ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.

ಸರ್ಕಾರ ಅವಕಾಶ ನೀಡಿಲ್ಲ: ಕಳೆದ ಬಾರಿ ಲಾಕ್‌ಡೌನ್ ಸಮಯದಲ್ಲಿ ಸಾಲ, ಇಎಂಐಗಳ ಪಾವತಿಗಾಗಿ ಕೆಲವು ನಿಯಮಯಗಳನ್ನು ಸಡಿಲ ಮಾಡಲಾಗಿತ್ತು. ಆದರೆ ಈ ಬಾರಿ ಇದಕ್ಕೆ ಅವಕಾಶ ನೀಡಿಲ್ಲ ಎನ್ನುವುದು ಬ್ಯಾಂಕ್ ಅಧಿಕಾರಿಗಳ ಮಾತು. ಅಲ್ಲದೆ, ಸಾಲ ಪಡೆದಿರುವವರು ಕಳೆದ 5 ತಿಂಗಳಿಂದ ಹಣ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಬ್ಯಾಂಕ್‌ನ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಅನಿವಾರ್ಯವಾಗಿ ನಾವು ಸಾಲ ವಸೂಲಿ ಮಾಡಲೇಬೇಕಿದೆ ಎನ್ನುವ ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

ನಾವು ಕೋವಿಡ್‌ನಿಂದ ಬಳಲುತ್ತಿದ್ದು ಕೋವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಆದರೆ ಬ್ಯಾಂಕ್‌ನವರು ಸಾಲ ಮರುಪಾವತಿ ಮಾಡುವಂತೆ ನೋಟಿಸ್ ನೀಡಿದ್ದಾರೆ. ಮೇ 31ಕ್ಕೆ ಒಡವೆ ಹರಾಜು ಹಾಕುವುದಾಗಿಯೂ ಹೇಳಿದ್ದಾರೆ. ಇಂತಹ ಸನ್ನಿವೇಶದಲ್ಲಿ ಹೇಗೆ ಹಣ ಕಟ್ಟಲಿ, ನನಗೆ ಸಮಯಾವಕಾಶ ಬೇಕಿದೆ. ಶಿವರಾಜು ಬ್ಯಾಂಕ್‌ನಿಂದ ಸಾಲ ಪಡೆದವರು ನಾನು ಸಣ್ಣ ವ್ಯಾಪಾರ ಮಾಡಿಕೊಂಡಿದ್ದು, ಈಗ ಬ್ಯಾಂಕ್‌ನವರು ಸಾಲ ತೀರಿಸದಿದ್ದರೆ ಒಡವೆ ಹರಾಜು ಹಾಕುವುದಾಗಿ ಹೇಳುತ್ತಿದ್ದಾರೆ. ವ್ಯಾಪಾರವೇ ಇಲ್ಲದ ಮೇಲೆ ಸಾಲ ಹೇಗೆ ತೀರಿಸಲಿ, ಲಾಕ್‌ಡೌನ್ ಮುಗಿದ 10-15 ದಿನಗಳಲ್ಲಿ ಸಾಲ ತೀರಿಸುತ್ತೇನೆ. ಲಕ್ಷ್ಮೀ ಕುರುಪೇಟೆ ನಿವಾಸಿ, ಕನಕಪುರ ಈ ಬಗ್ಗೆ ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಜತೆ ಮಾತನಾಡಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಲಾಗುವುದು. ಬಾಧಿತರು ಮನವಿ ಸಲ್ಲಿಸಲಿ. ಡಾ. ಕೆ. ರಾಕೇಶ್ ಕುಮಾರ್ ಜಿಲ್ಲಾಧಿಕಾರಿ, ರಾಮನಗರ ಬ್ಯಾಂಕ್‌ನ ನಿರ್ದೇಶನವನ್ನು ಪಾಲಿಸಲೇಬೇಕು, ಸಾಲ ಪಡೆದವರು ಸಕಾಲದಲ್ಲಿ ತೀರಿಸಿದರಷ್ಟೇ ಇತರರಿಗೆ ಸಾಲ ನೀಡಲು ಸಾಧ್ಯ. ವಿನಯ್ ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕ, ಕನಕಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net