

ಹೂವಿನಹಡಗಲಿ: ನೀರುಗಂಟಿಗಳ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪಟ್ಟಣದ ಸಣ್ಣನೀರಾವರಿ ಅಂತರ್ಜಲ ಅಭಿವೃದ್ಧಿ ಇಲಾಖೆಯ ಉಪವಿಭಾಗ ಕಚೇರಿ ಮುಂಭಾಗದಲ್ಲಿ ಸಣ್ಣ ಏತ ನೀರಾವರಿ ಯೋಜನೆ ಹಾಗೂ ನಿರ್ವಾಹಕರ ಮತ್ತು ನೀರುಗಂಟಿ, ದಿನಗೂಲಿ ನೌಕರರ ಸಂಘದಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಯಿತು.
ಎಐಟಿಯುಸಿ ತಾಲೂಕು ಸಂಚಾಲಕ ಹಲಗಿ ಸುರೇಶ ಮಾತನಾಡಿ, ಅನೇಕ ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ಸರಿಯಾದ ಸಮಯಕ್ಕೆ ವೇತನ ನೀಡದೆ ಗುತ್ತಿಗೆದಾರರು ಕಾರ್ಮಿಕರಿಗೆ ಮೋಸ ಮಾಡುತ್ತಿದ್ದಾರೆ. ಕಾರ್ಮಿಕರು ತಮ್ಮ ಹಕ್ಕನ್ನು ಕೇಳಿದರೆ ಅಧಿಕಾರಿಗಳು ನಮಗೆ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಕಾರ್ಮಿಕರಿಗೆ ನ್ಯಾಯ ದೊರಕುವವರೆಗೂ ಪ್ರತಿಭಟನೆಯನ್ನು ಕೈಬಿಡುವುದಿಲ್ಲ ಎಂದರು.
ರೈತ ಸಂಘದ ತಾಲೂಕು ಅಧ್ಯಕ್ಷ ಹೊಸಮನಿ ಸಿದ್ದಪ್ಪ ಮಾತನಾಡಿ, ರೈತರ ಬದುಕಿನ ಒಂದು ಭಾಗವಾಗಿ ನೀರುಗಂಟಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ಕಷ್ಟ ಬಂದರೆ ರೈತರಿಗೆ ಕಷ್ಟ ಬಂದಂತೆ ಕೂಡಲೇ ಅಧಿಕಾರಿಗಳು ಅವರ ಬೇಡಿಕೆಗಳನ್ನು ಈಡೇರಿಸಬೇಕು ಎಂದರು.
ಸಂಜೆ ಎಇಇ ಜಗದೀಶ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾ ಕಾರರೊಂದಿಗೆ ಮಾತನಾಡಿ, ಕೂಡಲೇ ಗುತ್ತಿಗೆದಾರರ ಸಭೆ ಕರೆದು ಸಮಸ್ಯೆ ಬಗೆಹರಿಸಲಾಗುವುದು ಎಂದು ತಿಳಿಸಿದರು. ಪ್ರತಿಭಟನಾಕಾರರು ಭರವಸೆಗಳನ್ನು ಕೇಳಿ ರೋಸಿಹೋಗಿದ್ದೇವೆ. ಅಧಿಕಾರಿಗಳು ಲಿಖಿತವಾಗಿ ನೀಡಿದರೆ ಮಾತ್ರ ಪ್ರತಿಭಟನೆಯಿಂದ ಹಿಂದೆ ಸರಿಯುವುದಾಗಿ ತಿಳಿಸಿ ಪ್ರತಿಭಟನೆ ಮುಂದುವರೆಸಿದರು. ಇನ್ನು ಬೆಳಗ್ಗೆಯಿಂದಲೇ ಕಚೇರಿಯ ಬಾಗಿಲ ಮುಂಭಾಗದಲ್ಲಿ ಪ್ರತಿಭಟನಾಕಾರರು ಅಡುಗೆ ತಯಾರಿಸುವ ದೃಶ್ಯ ಕಂಡು ಬಂತು.
ಸಂಘದ ಅಧ್ಯಕ್ಷ ಎಚ್.ಎಂ.ಕೊಟ್ರೇಶ, ಉಪಾಧ್ಯಕ್ಷ ರುದ್ರಪ್ಪ, ಖಜಾಂಚಿ ಭೀಮಪ್ಪ, ಕಾರ್ಯದರ್ಶಿ ಕೆ.ಷಣ್ಮುಖಪ್ಪ, ಸಹಕಾರ್ಯದರ್ಶಿ ಹನುಮಂತ, ಸದಸ್ಯರಾದ ಪಾಂಡುನಾಯ್ಕ, ಮೈಲಾರಪ್ಪ, ಖಾಸಿಂಸಾಬ, ದೇವೇಂದ್ರಪ್ಪ, ನೀಲನಗೌಡ, ವೀರಣ್ಣ, ಉಮೇಶನಾಯ್ಕ ಚನ್ನಪ್ಪ ಇತರರಿದ್ದರು.