ನ್ಯಾ.ನಾಗಮೋಹನ್ ದಾಸ್ ಸಮಿತಿಗೆ ಇನ್ನಷ್ಟು ಪ್ರಕರಣಗಳ ತನಿಖೆಯ ಹೊಣೆ

Published on

ಬೆಂಗಳೂರು:
40% ಕಮಿಷನ್ ಬಗ್ಗೆ ತನಿಖೆಗಾಗಿ ನೇಮಕಗೊಂಡಿರುವ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಸಮಿತಿ ಮುಂದೆ ಇನ್ನಷ್ಟು ಪ್ರಕರಣಗಳ ತನಿಖೆಯ ಹೊಣೆಯನ್ನು ಹೊರಿಸಲಾಗಿದ್ದು, ಸಮಿತಿ ವರದಿ ನೀಡುವುದು ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಕಾಮಗಾರಿಗಳಲ್ಲಿ ನಡೆದಿದೆ ಎನ್ನಲಾದ 40% ಕಮಿಷನ್ ಪ್ರಕರಣವನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತನಿಖೆ ನಡೆಸಲು ತೀರ್ಮಾನಿಸಿ ಸಮಿತಿ ರಚಿಸಿತ್ತು.
40% ಪರ್ಸೆಂಟ್ ಕಮಿಷನ್ ಪ್ರಕರಣಗಳ ತನಿಖೆ ಪ್ರಗತಿಯಲ್ಲಿರುವ ಸಂದರ್ಭದಲ್ಲಿಯೇ ಮತ್ತಷ್ಟು ಪ್ರಕರಣಗಳನ್ನು ಇದೇ ಆಯೋಗಕ್ಕೆ ವಹಿಸಿರುವುದು ತನಿಖೆ ವೇಗವನ್ನು ಕಡಿಮೆ ಮಾಡಿದೆ.

ನಾರಾಯಣಪುರ ಎಡದಂಡೆ ನಾಲೆ
ಸುಮಾರು 950 ಕಿ.ಮೀ., ನಾರಾಯಣಪುರ ಎಡದಂಡೆ ನಾಲೆಯನ್ನು 1600 ಕೋಟಿ ವೆಚ್ಚದಲ್ಲಿ ಆಧುನೀಕರಣ ಮಾಡಲಾಗಿತ್ತು. ಈ ಕಾಮಗಾರಿಗಳಲ್ಲಿ ನಡೆದಿರುವ ಅವ್ಯವಹಾರವನ್ನು ತನಿಖೆ ಮೂಲಕ ಪತ್ತೆ ಮಾಡಲು ಸಮಿತಿಯನ್ನು ರಚನೆ ಮಾಡಲಾಗಿತ್ತು. ಪ್ರತ್ಯೇಕ ಸಮಿತಿ ಬೇಡ ಎಂದು ನಿರ್ಧರಿಸಿರುವ ಸರ್ಕಾರ ಈ ಅವ್ಯವಹಾರ ಪ್ರಕರಣವನ್ನು ನ್ಯಾ.ನಾಗಮೋಹನ್ ದಾಸ್ ಸಮಿತಿಗೆ ವಹಿಸಿದೆ.

4 ಎಸ್‌ಐಟಿ ತನಿಖಾ ತಂಡ
ಇನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವ್ಯಾಪ್ತಿಯಲ್ಲಿ ಸುಮಾರು 6 ಸಾವಿರ ಕೋಟಿ ಕಾಮಗಾರಿಗಳನ್ನು ಮಾಡಿದ್ದು ಮೂರ‌್ನಾಲ್ಕು ವರ್ಷಗಳಿಂದ ಬಿಲ್ ಬಾಕಿ ಕೊಟ್ಟಿಲ್ಲ ಎಂದು ದೂರಲಾಗಿತ್ತು. ಈ ಪ್ರಕರಣದ ತನಿಖೆ ಮಾಡಲು ನಾಲ್ಕು ವಿಭಿನ್ನ ವಿಶೇಷ ತನಿಖಾ ತಂಡಗಳನ್ನು (ಎಸ್‌ಐಟಿ) ನಾಲ್ಕು ಐಎಎಸ್ ಅಧಿಕಾರಿಗಳ ನೇತೃತ್ವದಲ್ಲಿ ರಚಿಸಿ ತನಿಖೆ ನಡೆಸಲಾಗುತಿತ್ತು.
4 ಎಸ್‌ಐಟಿಗಳ ತಂಡದ ತನಿಖೆಯನ್ನು ಕೂಡ ಈಗ ನ್ಯಾ.ನಾಗಮೋಹನ್ ದಾಸ್ ಸಮಿತಿಗೆ ವಹಿಸಲಾಗಿದೆ.

10 ತಿಂಗಳ ಅವಧಿ ವಿಸ್ತರಣೆ
ಮೊದಲು ಕೇವಲ ಒಂದು ತಿಂಗಳ ಅವಧಿಗೆ ಎಂದು ರಚಿಸಲಾಗಿದ್ದ ನ್ಯಾ.ನಾಗಮೋಹನ್ ದಾಸ್ ಸಮಿತಿ ಅವಧಿಯನ್ನು ಮೊದಲು ನವೆಂಬರ್ ಬಳಿಕ ಡಿಸೆಂಬರ್ ತನಕ ವಿಸ್ತರಿಸಲಾಗಿತ್ತು. ಮತ್ತೆ 10 ತಿಂಗಳ ಕಾಲ ಸಮಿತಿ ಅವಧಿಯನ್ನು ವಿಸ್ತರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net