ಸರ್ಕಾರಕ್ಕೆ ಬಿಸಿ ಮುಟ್ಟಿಸಿದ ನ್ಯಾ.ನಾಗಮೋಹನ್‌ದಾಸ್ ! | Works investigation

Nagamohana das
Published on

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿ ಕಾಮಗಾರಿಗಳ ತನಿಖೆಯ ಹೆಚ್ಚುವರಿ ಜವಾಬ್ದಾರಿ ಹೊತ್ತಿದ್ದ ನ್ಯಾ.ಎಚ್.ಎನ್.ನಾಗಮೋಹನ್ ದಾಸ್ ನೇತೃತ್ವದ ವಿಚಾರಣಾ ಆಯೋಗ ಮಂಗಳವಾರ ಮುಕ್ತಾಯವಾಗಲಿದೆ ಎಂದು ಹಠಾತ್ ತಿಳಿಸಿ, ಸರ್ಕಾರಕ್ಕೆ ಬಿಸಿ ಮುಟ್ಟಿಸಲಾಗಿದೆ.

ಮುಖ್ಯ ಕಾರ್ಯದರ್ಶಿಗೆ ಈ ಕುರಿತು ನ್ಯಾ.ಎಚ್.ಎನ್.ನಾಗಮೋಹನ್‌ದಾಸ್ ಸೋಮವಾರ ಅಧಿಕೃತವಾಗಿ ಪತ್ರ ಬರೆದು ತಿಳಿಸಿದ್ದಾರೆ. ಬದಲಿ ವ್ಯವಸ್ಥೆ ಕಲ್ಪಿಸದೆ ವಿಚಾರಣಾ ಆಯೋಗದ ವಾಹನ, ಸಿಬ್ಬಂದಿ ಹಿಂಪಡೆಯಲು ಕ್ರಮವಹಿಸಿದ್ದರಿಂದ ಈ ನಿರ್ಧಾರಕ್ಕೆ ಬಂದಿದ್ದಾರೆ.

ಬಿಬಿಎಂಪಿ ಕಾಮಗಾರಿಗಳ ತನಿಖಾ ವರದಿಯನ್ನು ಮುಖ್ಯಮಂತ್ರಿಗೆ ಆಯೋಗವು ಆ.30ರಂದು ಸಲ್ಲಿಸಿದೆ. ನಂತರ ಆಯೋಗದ ಕಾರ್ಯವನ್ನು ಕ್ರಮಬದ್ಧವಾಗಿ ಮುಕ್ತಾಯಗೊಳಿಸುವ ಹಿನ್ನೆಲೆಯಲ್ಲಿ ಕೆಲವು ಸಿಬ್ಬಂದಿ, ಸೌಕರ್ಯ ಒದಗಿಸಲು ಕಾಲಾವಧಿಯನ್ನು ಸೆ.30ರವರೆಗೆ ವಿಸ್ತರಿಸಲು ಪ್ರಸ್ತಾಪ ಮಾಡಲಾಗಿತ್ತು.

ವಿಚಾರಣಾ ಆಯೋಗವು ಚೌಕಟ್ಟಿನೊಳಗೆ ತನ್ನ ಜವಾಬ್ದಾರಿ ನಿರ್ವಹಿಸಿದೆ. ಕಾಲಾವಧಿ ವಿಸ್ತರಣೆಯ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಎರಡು ಬಾರಿ ಬರೆದ ಪತ್ರದಂತೆ ವಿಚಾರಣಾ ಆಯೋಗಕ್ಕೆ ಬದಲಿ ವ್ಯವಸ್ಥೆ ಕಲ್ಪಿಸದೆ ವಾಹನ ಮತ್ತು ಸಿಬ್ಬಂದಿಯನ್ನು ಹಿಂಪಡೆಯುತ್ತಿರುವ ಕಾರಣ ವಿಚಾರಣಾ ಆಯೋಗದ ಕಾರ್ಯವನ್ನು ಸೆ.23ಕ್ಕೆ ಮುಕ್ತಾಯಗೊಳಿಸಿದೆ ಎಂದು ನ್ಯಾ.ನಾಗಮೋಹನ್‌ದಾಸ್ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net