ನ್ಯಾ.ನಾಗಮೋಹನ್‌ದಾಸ್ ಮಧ್ಯಂತರ ವರದಿ ವಾರದೊಳಗೆ ಸಲ್ಲಿಕೆ: ಸಚಿವ ಜಿ.ಪರಮೇಶ್ವರ್ | Cong govt firm on SC classification

CM meeting
Published on

ಬೆಂಗಳೂರು: ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಆಯೋಗವು ಒಂದು ವಾರದೊಳಗೆ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಯ ಮಧ್ಯಂತರ ವರದಿ ಸಲ್ಲಿಸುವುದಾಗಿ ತಿಳಿಸಿದೆ. ತದನಂತರ ಈ ಬಗ್ಗೆ ಸಿಎಂ ಚರ್ಚಿಸಿ ಶೀಘ್ರದಲ್ಲಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ತಿಳಿಸಿದರು.

ಸಿಎಂ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ

ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಕುರಿತು ಸೋಮವಾರ ನಡೆದ ಸಭೆ ಬಳಿಕ ಸಿಎಂ ಕಚೇರಿ ಕೃಷ್ಣಾದಲ್ಲಿ ಸಚಿವರಾದ ಡಾ.ಜಿ.ಪರಮೇಶ್ವರ್, ಡಾ.ಎಚ್.ಸಿ.ಮಹದೇವಪ್ಪ, ಕೆ.ಎಚ್.ಮುನಿಯಪ್ಪ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಜಾರಿಗೊಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ನಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಇದನ್ನು ಹೇಳಿದ್ದೇವೆ. ಎಂಪೆರಿಕಲ್ ಡೇಟಾ ನಿರ್ಧಿಷ್ಟವಾದ ಅಭಿಪ್ರಾಯ ಬರುತ್ತದೆ ಎಂದು ನ್ಯಾ.ನಾಗಮೋಹನ್ ದಾಸ್ ಸಭೆಗೆ ತಿಳಿಸಿದ್ದಾರೆ ಎಂದರು.

ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ.ಮಹದೆವಪ್ಪ ಅವರು ಮಾತನಾಡಿ, ಎಸ್‌ಸಿ ಒಳ ಮೀಸಲಾತಿಗೆ ಸಂಬಂಧಿಸಿ ಈವರೆಗೂ ಆಗಿರುವ ಪ್ರಗತಿಯ ಮಾಹಿತಿಯನ್ನು ನ್ಯಾ.ನಾಗಮೋಹನ್ ದಾಸ್ ಸಮಿತಿ ನೀಡಿದೆ. ಆದಷ್ಟು ಬೇಗ ಒಳಮೀಸಲಾತಿ ಜಾರಿಗೆ ಪ್ರಸ್ತಾಪ ಇಟ್ಟಿದ್ದಾರೆ ಎಂದು ತಿಳಿಸಿದರು.

ವರದಿ ಆಧರಿಸಿ ತೀರ್ಮಾನ

ದತ್ತಾಂಶ ಆಧಾರದ ಮೇಲೆ ಸುದೀರ್ಘ ಚರ್ಚೆ ಮಾಡಿದ್ದೇವೆ. ಆಯೋಗವು ವಾರದೊಳಗೆ ಮಧ್ಯಂತರ ವರದಿ ನೀಡಲಿದೆ. ಆ ವರದಿ ಮೇಲೆ ಒಳಮೀಸಲಾತಿ ಜಾರಿ ಕುರಿತು ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ಎಂಪೆರಿಕಲ್ ಡೇಟಾ ಸೇರಿ ಎಲ್ಲ ವಿಷಯಗಳನ್ನು ಚರ್ಚಿಸಿ, ನಮ್ಮ ಗಮನಕ್ಕೆ ತಂದಿದ್ದಾರೆ. ಎಸ್‌ಸಿ ಒಳ ಮೀಸಲಾತಿ ಜಾರಿ ಮಾಡಬೇಕು ಎಂಬುದು ನಮ್ಮ ಸರ್ಕಾರದ ಬದ್ಧತೆಯಾಗಿದೆ ಎಂದು ಪುನರುಚ್ಚರಿಸಿದರು.

ಯಾವುದೇ ಸಮುದಾಯವೂ ಇಷ್ಟೇ ಪರ್ಸೇಂಟ್ ಮೀಸಲಾತಿ ಕೊಡುವಂತೆ ಬೇಡಿಕೆ ಇಟ್ಟಿಲ್ಲ ಎಂದು ಸ್ಪಷ್ಟಪಡಿಸಿದ ಡಾ.ಎಚ್.ಸಿ.ಮಹದೇವಪ್ಪ, ಬಹುತೇಕ ಎಲ್ಲ ಇಲಾಖೆಗಳು ದತ್ತಾಂಶ ನೀಡಿವೆ. ಸುಪ್ರೀಂ ಕೋರ್ಟ್ ಮಾರ್ಗಸೂಚಿ ಪ್ರಕಾರ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂಬ ಭರವಸೆ ನೀಡಿದರು.

ಆಯೋಗದ ವರದಿಯಂತೆ ಪರಿಶಿಷ್ಟ ಜಾತಿ ಮೀಸಲು ವರ್ಗೀಕರಣ ಜಾರಿಯಾಗುವ ತನಕ ಬ್ಯಾಕ್‌ಲಾಗ್ ಹುದ್ದೆಗಳು ಸೇರಿ ಯಾವುದೇ ಹುದ್ದೆಗಳ ನೇಮಕವಿಲ್ಲ. ಬಡ್ತಿ ಕೂಡ ಮಾಡುವುದಿಲ್ಲ ಎಂದು ಡಾ.ಎಚ್.ಸಿ.ಮಹದೇವಪ್ಪ ಸ್ಪಷ್ಟಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net