

ಚಿಕ್ಕನಾಯಕನಹಳ್ಳಿ: ಯಡಿಯೂರಪ್ಪ ವೈದ್ಯಕೀಯ ಶಿಕ್ಷಣ ಖಾತೆ ಕೊಡಲು ಬಂದಾಗ ಹಠ ಹಿಡಿದು ಪಡೆದ ಸಣ್ಣ ನೀರಾವರಿ ಖಾತೆಗೆ ನ್ಯಾಯ ದೊರಕಿಸಿ, ನೀರು ಹರಿಸುವ ಕೆಲಸ ಮಾಡಿದ್ದೇನೆ ಎಂದು ಸಣ್ಣ ನೀರಾವರಿ ಹಾಗೂ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ದುಗಡೀಹಳ್ಳಿಯಲ್ಲಿ ಅಂಗನವಾಡಿ ಕಟ್ಟಡ, ಗ್ರಾಪಂ ಕಟ್ಟಡಕ್ಕೆ ಭಾನುವಾರ ಶಂಕುಸ್ಥಾಪನೆ ನೆರೆವೇರಿಸಿ ಮಾತನಾಡಿದರು.
ನಾನು ಸಚಿವನಾಗಿ ನಗರದಲ್ಲೇ ಇದ್ದು ಜೀವನ ನಡೆಸಬಹುದಿತ್ತು. ಅದರೆ ಕೃಷಿ ಕುಟುಂಬದಿಂದ ಬಂದವನಾದ್ದರಿಂದ ರೈತರ ಸಮಸ್ಯೆಗಳು, ಸಂಕಟಗಳು ಗೊತ್ತಿತ್ತು. ಚಿಕ್ಕನಾಯಕನಹಳ್ಳಿ ಕ್ಷೇತ್ರವನ್ನೇ ಕರ್ಮಭೂಮಿ ಮಾಡಿಕೊಂಡು, ಜೆ.ಸಿ.ಪುರದಲ್ಲಿದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಕ್ಷೇತ್ರದ ರೈತರ ಹಿತದೃಷ್ಟಿಯಿಂದ ಹೇಮಾವತಿ, ಭದ್ರಾ ಮೇಲ್ದಂಡೆ ಯೋಜನೆಗಳ ಮೂಲಕ ಕೆರೆಗಳನ್ನು ತುಂಬಿಸುವ ಕೆಲಸ ಮಾಡುತ್ತಿರುವೆ, ಅಂತರ್ಜಲ ಪಾತಾಳಕ್ಕೆ ಕುಸಿದಿದ್ದ ಪ್ರದೇಶದಲ್ಲೀಗ ನೀರಿನ ಸೆಲೆ ಹೆಚ್ಚಾಗುತ್ತಿದೆ ಎಂದರು.
ಈ ಹಿಂದೆ ರಾಮಕೃಷ್ಣ ಹೆಗಡೆ ಅವರು ಬೆಂಗಳೂರಿನ ಮಲ್ಲೇಶ್ವರಂನಿಂದ ಸ್ಪರ್ಧಿಸಲು ಆಹ್ವಾನ ನೀಡಿದ್ದನ್ನು ತಿರಸ್ಕರಿಸಿದ್ದೆ. ಚಿಕ್ಕನಾಯಕನಹಳ್ಳಿ ಕ್ಷೇತ್ರದ ಜನರು ನಂಬಿದವರ ಕೈ ಹಿಡಿಯುತ್ತಾರೆ ಎಂದರು.
ಪೂರಕ ವಿದ್ಯುತ್ ಪೂರೈಕೆ: ರೈತರು ಸಮರ್ಪಕ ವಿದ್ಯುತ್ ಪೂರೈಸುವಂತೆ ಕೇಳುತ್ತಿದ್ದು, ವಿದ್ಯುತ್ ವಿತರಣಾ ಕೇಂದ್ರಗಳ ಸಾಮರ್ಥ್ಯವನ್ನು ದ್ವಿಗುಣ ಮಾಡಲಾಗುತ್ತಿದೆ. ಇವುಗಳಿಗೆ ವಿದ್ಯುತ್ ಪೂರೈಕೆ ಮಾಡುವ ಮೆಗಾ ಸ್ಟೇಷನ್ ಬೇಕಾಗಿದ್ದು, ಕಾರ್ಯಗತವಾದರೆ ಇನ್ನು ಮೂರು ವರ್ಷಗಳಲ್ಲೇ ಸಮಸ್ಯೆ ಬಗೆಹರಿಯಲಿದೆ ಎಂದು ಮಾಧುಸ್ವಾಮಿ ಭರವಸೆ ನೀಡಿದರು.
ಕಾಂಗ್ರೆಸ್‌ನಿಂದ ಹಣವಂತರಿಗೆ ಮಣೆ: ಕಾಂಗ್ರೆಸ್ ಹಣವಂತ ಅಭ್ಯರ್ಥಿಗಳಿಗೆ ಮಣೆ ಹಾಕುತ್ತಿದೆ. ಮುಂಬರುವ ಚುನಾವಣೆಗೂ ಕಾಂಗ್ರೆಸ್ ನಾಯಕರು ಹಣವಂತರನ್ನು ಕರೆತಂದಿದ್ದಾರೆ. ಆ ಪಕ್ಷದಲ್ಲಿ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಲೇ ಇದೆ. ಅದು ಎಲ್ಲಿಗೆ ಹೋಗಿ ನಿಲ್ಲತ್ತದೋ? ಆದರೆ, ಕ್ಷೇತ್ರದ ಜನ ಯಾರ ಮೇಲೆ ನಂಬಿಕೆ, ವಿಶ್ವಾಸ ಇಟ್ಟಿದ್ದಾರೋ ಅವರನ್ನೇ ಆಯ್ಕೆ ಮಾಡುತ್ತಾರೆ ಎಂದು ಸಚಿವ ಮಾಧುಸ್ವಾಮಿ ಹೇಳಿದರು.
80ರ ದಶಕದಿಂದಲೂ ಚುನಾವಣೆಗಳನ್ನು ಎದುರಿಸುತ್ತಾ ಬಂದಿದ್ದೇನೆ. ಇದುವರೆಗೂ ಕಾಂಗ್ರೆಸ್ನಿಂದ ಸ್ಪರ್ಧಿಸಿದ ಯಾರೂ ಎರಡನೇ ಬಾರಿ ಸ್ಪರ್ಧಿಸಿಲ್ಲ. ಎಲ್ಲಿಂದಲೋ ಬಂದು ಸೋತು ಹೋದವರು ಮತ್ತೆ ಮುಖ ತೋರಿಸುತ್ತಿಲ್ಲ. ಇಂಥವರಿಗೆ ನಮ್ಮ ಜನ ಮತ ಹಾಕುವುದಿಲ್ಲ ಎಂದರು.
70 ವರ್ಷಗಳಿಂದ ಆಡಳಿತ ಮಾಡಿಕೊಂಡು ಬಂದವರು ತುಮಕೂರು ಜಿಲ್ಲೆಗೆ ಮಾಡದೇ ಇದ್ದ ಕೆಲಸಗಳನ್ನು ಈಗ ಮಾಡಲಾಗುತ್ತಿದೆ. ಈ ಬಾರಿಯ ಬಜೆಟ್‌ನಲ್ಲಿ ಚಿಕ್ಕನಾಯಕನಹಳ್ಳಿಗೆ ಪಾಲಿಟೆಕ್ನಿಕ್, ತಿಪಟೂರಿಗೆ ತೋಟಗಾರಿಕೆ ಕಾಲೇಜುಗಳನ್ನು ಮಂಜೂರು ಮಾಡಲಾಗಿದೆ.
ಜನಪ್ರತಿನಿಧಿಯಾದವರಿಗೆ ಜನರಿಗೆ ಸ್ಪಂದಿಸುವ ಆಶೋತ್ತರಗಳಿರಬೇಕು. ವಿಧಾನಸಭೆಗೆ ಹೋದವರಿಗೆ ಜವಾಬ್ದಾರಿ ಇರಬೇಕು. ಜನರ ಸಮಸ್ಯೆಗಳನ್ನು ನಿವಾರಿಸುವ ಕೆಲಸ ಮಾಡಿದರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಗೌರವ ಬರುತ್ತದೆ ಎಂದು ಸಚಿವರ ಹೇಳಿದರು.
ವಿವಿಧ ಕಾಮಗಾರಿಗಳಿಗೆ ಚಾಲನೆ: ಕೊಡಲಾಗರ ಹಾಗೂ ದುಗಡಿಹಳ್ಳಿ ಗ್ರಾಮದಲ್ಲಿ ತಲಾ 10 ಲಕ್ಷ ರೂಪಾಯಿ ವೆಚ್ಚದಲ್ಲಿ ಅಂಗನವಾಡಿ ಕಟ್ಟಡಗಳು, ಜಲಜೀವನ್ ಯೋಜನೆಯಡಿಯಲ್ಲಿ ಬಾಚೀಹಳ್ಳಿಯಲ್ಲಿ 92 ಲಕ್ಷ ರೂಪಾಯಿ, ಹುಳಿಯಾರು ಹೋಬಳಿಯ ಕಲ್ಲಹಳ್ಳಿಯಲ್ಲಿ 56 ಲಕ್ಷ ರೂಪಾಯಿ, ಪೋಚಕಟ್ಟೆಯಲ್ಲಿ 60ಲಕ್ಷ ರೂಪಾಯಿ, ಜಯಚಂದ್ರನಗರದಲ್ಲಿ 56 ಲಕ್ಷ ರೂಪಾಯಿ ವೆಚ್ಚದಲ್ಲಿ ಓವರ್ ಹೆಡ್ ಟ್ಯಾಂಕ್‌ಗಳ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.