ಡಿಎಲ್ ಇಲ್ಲವೆಂದ ಮಾತ್ರಕ್ಕೆ ಘಟನೆಗೆ ನಿರ್ಲಕ್ಷ್ಯವೇ ಕಾರಣವಲ್ಲ: ಹೈಕೋರ್ಟ್ ಅಭಿಮತ

highcourt
Published on

ಬೆಂಗಳೂರು: ರಸ್ತೆ ಅಪಘಾತದಲ್ಲಿ ಸವಾರ ಪರವಾನಗಿ ಹೊಂದಿಲ್ಲ ಎಂದಮಾತ್ರಕ್ಕೆ ಘಟನೆಗೆ ಆತನ ನಿರ್ಲಕ್ಷ್ಯ ಕಾರಣವೆನ್ನಲಾಗದು ಎಂದಿರುವ ಹೈಕೋರ್ಟ್, ಮೋಟಾರು ಅಪರಾಧಗಳ ಪರಿಹಾರ ನ್ಯಾಯಾಧೀಕರಣ ನೀಡಿದ್ದ ಆದೇಶ ಪ್ರಶ್ನಿಸಿ ಹಾಸನ ಮೂಲದ ವ್ಯಕ್ತಿಯೋರ್ವ ಸಲ್ಲಿಸಿದ್ದ ಅರ್ಜಿಯನ್ನು ಭಾಗಶಃ ಪುರಸ್ಕರಿಸಿದೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಮೂಲದ ಶಿವೇಗೌಡ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಾ. ಚಿಲಕೂರು ಸುಮಲತಾ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ಅಲ್ಲದೆ, ಅಪಘಾತಕ್ಕೆ ಇನ್ನೊಂದು ವಾಹನ ಸವಾರ ನೇರ ಕಾರಣ ಎಂಬುದನ್ನು ಒಪ್ಪಿಕೊಳ್ಳಲು ಅರ್ಜಿದಾರರು ಸಾಕಷ್ಟು ಪುರಾವೆಗಳನ್ನೂ ಪೀಠದ ಮುಂದೆ ಪ್ರಸ್ತುತಪಡಿಸಿದರು. ಹೀಗಿರುವಾಗ ಅವರು ಚಾಲನ ಪರವಾನಗಿ ಹೊಂದಿಲ್ಲ ಎಂದು ಅವರ ನಿರ್ಲಕ್ಷ್ಯದಿಂದಲೇ ಘಟನೆ ಸಂಭವಿಸಿದೆ ಎನ್ನುವುದು ಸರಿಯಲ್ಲ ಎಂದು ಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ಜತೆಗೆ ತಾವು ಪ್ರಕರಣದಲ್ಲಿ ಯಾವುದೇ ತಪ್ಪೆಸಗಿಲ್ಲ ಎಂದು ಪ್ರತಿಪಾದಿಸಿ ಅದಕ್ಕೆ ಪುಷ್ಠಿ ನೀಡುವ ಎಲ್ಲ ದಾಖಲೆಗಳನ್ನು ನ್ಯಾಯಾಧೀಕರಣಕ್ಕೆ ಅರ್ಜಿದಾರರು ಒದಗಿಸಿದ್ದಾರೆ. ಆದರೂ ಅದನ್ನು ಪರಿಗಣಿಸದೆ ತೀರ್ಪು ನೀಡಿರುವುದು ಒಪ್ಪುವಂತದಲ್ಲ ಎಂದು ಪೀಠ ನುಡಿದಿದೆ. ಮಾತ್ರವಲ್ಲದೆ, ಅರ್ಜಿದಾರರಿಗಾದ ನಷ್ಟದ ಅನುಸಾರ 5,67,000 ರೂ. ಪಾವತಿಸುವಂತೆ ಪ್ರತಿವಾದಿಗಳಿಗೆ ನಿರ್ದೇಶಿಸಿ ಅರ್ಜಿ ಇತ್ಯರ್ಥಗೊಳಿಸಿ ಆದೇಶಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net