ದೇಸಿ ಕ್ರೀಡೆ ಕುರಿತು ಮನ್‌ ಕೀ ಬಾತ್‌ನಲ್ಲಿ ಪ್ರಧಾನಿ ಹೇಳುತ್ತಿದ್ದಂತೆಯೇ ಸಿಕ್ಕ ಸ್ಪಂದನೆ ಇದು...

indoorgame
Published on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಕಳೆದ ತಿಂಗಳ ಮನ್‌ ಕೀ ಬಾತ್‌ ಕಾರ್ಯಕ್ರಮದಲ್ಲಿ ಸ್ವದೇಶಿ ವಸ್ತು ಬಳಕೆಗೆ ಕರೆ ಕೊಟ್ಟ ಬೆನ್ನಲ್ಲೇ ಅದೆಷ್ಟೋ ಬೆಳವಣಿಗೆಗಳು ಕಂಡುಬಂದವು.

ಹೊರದೇಶಗಳ ಅದರಲ್ಲಿಯೂ ಹೆಚ್ಚಾಗಿ ಚೀನಾದ ವಸ್ತುಗಳ ಮೇಲೆಯೇ ಅವಲಂಬಿತವಾಗಿರುವ ಭಾರತೀಯರು ದೇಶಪ್ರೇಮ ಮೆರೆದು ಚೀನಿ ವಸ್ತುಗಳಿಗೆ ಬಹಿಷ್ಕಾರ ಹಾಕುತ್ತಿರುವುದು ಹೊಸ ವಿಷಯವೇನಲ್ಲ. ವೈದ್ಯಕೀಯ ರಂಗದಲ್ಲಿ ಇದೀಗ ಅತ್ಯಂತ ಅವಶ್ಯಕವಾಗಿ ಬೇಕಾಗಿರುವ ಪಿಪಿಇ ಕಿಟ್‌ನಿಂದ ಹಿಡಿದು ಬಗೆಬಗೆಯ ಆ್ಯಪ್‌ಗಳಲ್ಲಿಯೂ ಸ್ವದೇಶಿ ಟಚ್‌ ಶುರುವಾಗಿದೆ.

ಇದೀಗ ಆಟಿಕೆಗಳ ಸರದಿ. ಇಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣದಲ್ಲಿ ಒಳಾಂಗಣ ಕ್ರೀಡಾಂಗಣಕ್ಕೆ ಹೆಚ್ಚಿನ ಮಹತ್ವ ಕೊಡುವಂತೆ ಹೇಳಿದರು. ಕರೊನಾ ವೈರಸ್‌ನ ಈ ದಿನಗಳಲ್ಲಿ ಮಕ್ಕಳು ಹೊರಕ್ಕೆ ಹೋಗುವುದು ಅಪಾಯಕಾರಿ ಎನ್ನುವ ಹಿನ್ನೆಲೆಯಲ್ಲಿ, ಮಕ್ಕಳನ್ನು ಮನೆಯೊಳಕ್ಕೇ ಆಟವಾಡುವಂಥ ಸ್ಥಿತಿ ನಿರ್ಮಾಣ ಮಾಡಬೇಕು ಎಂದು ಹೇಳಿದರು.

ಆದರೆ ಒಳಾಂಗಣ ಕ್ರೀಡೆ ಎಂದರೆ ಅದರಲ್ಲಿಯೂ ಸ್ವದೇಶಿಯ ಕುರಿತು ಮೋದಿ ಹೇಳಿದರು. ನಮ್ಮ ದೇಸಿ ಕ್ರೀಡೆಗಳೇ ಸಾಕಷ್ಟು ಇದ್ದು, ಸ್ಟಾರ್ಟ್‌ ಅಪ್‌ ಮೂಲಕ ಇನ್ನೂ ಹೊಸಹೊಸ ದೇಸಿ ಕ್ರೀಡೆಗಳನ್ನು ಬಳಸುವ ಬಗ್ಗೆ ಅವರು ಅಭಿಪ್ರಾಯ ಹಂಚಿಕೊಂಡರು.

ಅವರು ಆಗಷ್ಟೇ ತಮ್ಮ ಭಾಷಣವನ್ನು ಮುಗಿಸಿದ್ದರಷ್ಟೇ. ಅದಾಗಲೇ ರೋಲ್‌ದಿಡೈಸ್‌ ಸಂಸ್ಥೆಯು ದೇಸಿ ಕ್ರೀಡಾಂಗಣದ ಬಗ್ಗೆ ಟ್ವಿಟರ್‌ ಮೂಲಕ ಅನಿಸಿಕೆ ಹಂಚಿಕೊಂಡಿದೆ. ನಾವು ಸಾಂಪ್ರದಾಯಿಕ ಭಾರತೀಯ ಒಳಾಂಗಣ ಮತ್ತು ಬೋರ್ಡ್ ಆಟಗಳನ್ನು ಮರುರೂಪಿಸುವ ಕಾರ್ಯದಲ್ಲಿ ತೊಡಗಿದ್ದೇವೆ. ದೇಶಾದ್ಯಂತ ಇರುವ ಒಳಾಂಗಣ ಕ್ರೀಡಾಂಗಣಗಳ ಆಟದ ಸೆಟ್‌ಗಳನ್ನು ನಿರ್ಮಿಸುವಲ್ಲಿ ನಾವು ತೊಡಗಿಸಿಕೊಂಡಿದ್ದೇವೆ. ಈಗಾಗಲೇ ಇದು ದೇಶದ ವಿವಿಧ ಭಾಗಗಳಲ್ಲಿ ಪ್ರಶಂಸೆ ಪಡೆದಿರುವುದಾಗಿ ಹಂಚಿಕೊಂಡಿದೆ.

ಇಂಥದ್ದೊಂದು ದೇಸಿ ಸಂಸ್ಥೆ ಇರುವ ವಿಷಯವನ್ನೇ ತಿಳಿಯದ ಅನೇಕ ಕಮೆಂಟಿಗರು ಭಾರಿ ಶ್ಲಾಘನೆ ವ್ಯಕ್ತಪಡಿಸಿದ್ದು, ತಮಗೂ ಇಂಥ ಆಟಿಕೆಗಳನ್ನು ಖರೀದಿಸುವ ಆಸೆ ಇದೆ ಎಂದು ಕೇಳಿಕೊಂಡಿದ್ದಾರೆ. (ಏಜೆನ್ಸೀಸ್‌)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net