

ಚಾಮರಾಜನಗರ: ಕೋವಿಡ್ ಮಹಾಮಾರಿಯ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತು ದುಡಿಯುವ ವೈದ್ಯರಿಗೆ ಎಲ್ಲರೂ ಕೃತಜ್ಞತೆ ಸಲ್ಲಿಸುತ್ತಾ ಬಂದಿದ್ದಾರೆ. ಆದರೆ, ಅವರಿಗೆ ಸಲ್ಲಬೇಕಾದ ಮಾಸಿಕ ಭತ್ಯೆಯನ್ನು ಆರು ತಿಂಗಳಿನಿಂದ ನೀಡದಿರುವುದು ವಿಪರ್ಯಾಸವೇ ಸರಿ. ಈ ಹಿನ್ನೆಲೆಯಲ್ಲಿ ಚಾಮರಾಜನಗರದಲ್ಲಿ ನಡೆಯುತ್ತಿರುವ ಕಿರಿಯ ವೈದ್ಯರ ಮುಷ್ಕರ ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.
ಕೋವಿಡ್ ಡ್ಯೂಟಿ ಮಾಡಿದ ಕಿರಿಯ ವೈದ್ಯರಿಗೆ ಪ್ರತಿ ತಿಂಗಳು 10 ಸಾವಿರ ರೂಪಾಯಿ ಕೋವಿಡ್ ಭತ್ಯೆ ನೀಡುವುದಾಗಿ ಸರ್ಕಾರ ಘೋಷಿಸಿತ್ತು. ಆದರೆ, ಆರು ತಿಂಗಳಾದರೂ ಭತ್ಯೆ ಬಿಡುಗಡೆ ಮಾಡಿಲ್ಲದ ಹಿನ್ನೆಲೆಯಲ್ಲಿ ತುರ್ತು ಚಿಕಿತ್ಸೆ ಹೊರತುಪಡಿಸಿ, ಉಳಿದ ಕಿರಿಯ ವೈದ್ಯರೆಲ್ಲಾ ಸೇವೆಯಿಂದ ದೂರ ಉಳಿದು ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ.
ಚಾಮರಾಜನಗರದ ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆ ಮುಂದೆ ಪ್ರತಿಭಟನೆ ಹಮ್ಮಿಕೊಂಡಿರುವ ಕಿರಿಯ ವೈದ್ಯರು ನಾಲ್ಕನೇ ದಿನ ಸ್ವಯಂಪ್ರೇರಿತ ರಕ್ತದಾನ ಮಾಡುವ ಮೂಲಕ ಸತ್ಯಾಗ್ರಹ ನಡೆಸಿದರು. "ಜೀವದ ಹಂಗು ತೊರೆದು ಕೆಲಸ ಮಾಡಿದ್ದೇವೆ. ಈಗ ರಕ್ತದಾನ ಮಾಡಿ ಜೀವ ಉಳಿಸುವ ಕೆಲಸ ಮಾಡಿದ್ದೇವೆ. ನಾವು ಜೀವ ತೆಗೆಯುವವರಲ್ಲ. ಸರ್ಕಾರ ಮಾನವೀಯತೆಯಿಂದ ನಡೆದುಕೊಳ್ಳಲಿ" ಎಂದು ಪ್ರತಿಭಟನಾನಿರತ ವೈದ್ಯರು ಹೇಳಿದ್ದಾರೆ.