ಇಂದು ವಿಶ್ವ ಸೈಕಲ್ ದಿನ: ಸೈಕ್ಲಿಂಗ್​ನಲ್ಲಿದೆ ಆರೋಗ್ಯದ ಗುಟ್ಟು..!

Untitled design (3)
Published on

ಬೆಂಗಳೂರು: ಚಿಕ್ಕ ವಯಸ್ಸಿನ ಮಕ್ಕಳಿಂದ ಹಿರಿಯರವರೆಗೂ ಬಯಸುವ ವಾಹನ ಎಂದರೆ ಬೈಸಿಕಲ್. ಒಮ್ಮೆ ಕಲಿತರೆ ಜೀವನ ಪರ್ಯಂತ ನೆನಪಿರಬಹುದಾದ ವಿದ್ಯೆಗಳ ಸಾಲಿನಲ್ಲಿ ಸೈಕಲ್ ಸವಾರಿ ಸಹ ಒಂದಾಗಿದೆ. ಹೆಣ್ಣಾಗಲೀ ಗಂಡಾಗಲೀ ಕೈ ಕಾಲು, ಬುದ್ಧಿಗಟ್ಟಿ ಇರುವವರೆಗೂ ಮರೆಯದ ವಿದ್ಯೆ ಹಾಗೂ ಬಡವ, ಶ್ರೀಮಂತ ಬಳಸುವ ವಾಹನಗಳಲ್ಲಿ ಸೈಕಲ್ ಕೂಡ ಒಂದಾಗಿದೆ. ಸಾರಿಗೆ ಸಾಧನವಾಗಿ ಸೈಕಲ್ ಬಹುತೇಕ ಉಳಿದಿಲ್ಲ. ಇದರ ಜಾಗಕ್ಕೆ ಎಲೆಕ್ಟ್ರಿಕಲ್ ವಹಿಕಲ್, ಸ್ಕೂಟರ್​ಗಳು ತುಂಬಿಕೊಂಡಿವೆ. ವಿನೋದ ಮತ್ತು ವ್ಯಾಯಾಮಕ್ಕೆ ಬಳಕೆ ಮಾಡುವರ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿದೆ. ಇಂತಹ ಗ್ರಾಹಕರನ್ನೇ ಮನದಲ್ಲಿ ಇಟ್ಟುಕೊಂಡು ಉತ್ಪಾದನಾ ಕಂಪನಿಗಳು ನಾನಾ ವಿನ್ಯಾಸದ ಸೈಕಲ್​ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ. ಅದರಲ್ಲಿಯೂ ಎಲೆಕ್ಟ್ರಿಕಲ್ ಸೈಕಲ್​ಗಳು ಸಹ ಮಾರ್ಕೆಟ್ ಆವರಿಸಿಕೊಂಡಿದ್ದು, ಬೆಲೆಯಲ್ಲಿ ದ್ವಿಚಕ್ರ ವಾಹನಗಳಿಗೆ ಸವಾಲು ಒಡ್ಡುತ್ತಿವೆ.

ಕರೊನಾ ಆನಂತರ ಬೈಸಿಕಲ್ ಬಳಕೆದಾರರ ಸಂಖ್ಯೆ ಹೆಚ್ಚಿದೆ ಎನ್ನಲಾಗಿದೆ. ಶನಿವಾರ, ಭಾನುವಾರ ಊಟಿ, ಪಶ್ಚಿಮ ಘಟ್ಟಗಳಲ್ಲಿ ಸೈಕ್ಲಿಂಗ್ ಮಾಡುವ ಹವ್ಯಾಸ ಮೈಗೂಡಿಸಿಕೊಂಡಿದ್ದಾರೆ. ಬೆಂಗಳೂರು ಸಹ ಸೈಕ್ಲಿಂಗ್​ಗೆ ಉತ್ತಮ ವಾತಾವರಣ ಹೊಂದಿದೆ. ನಗರದ ಒಳಗೆ ಬೈಸಿಕಲ್ ಪ್ರತ್ಯೇಕ ಪಥ ಇಲ್ಲ. ಪರಿಣಾಮ ಸವಾರರಿಗೆ ಅಭದ್ರತೆ ಮತ್ತು ತೊಡಕು ಕಾಡುತ್ತಿದೆ. ಈ ಹಿಂದೆ ಸ್ಮಾರ್ಟ್​ಸಿಟಿ ಯೋಜನೆ ಅಡಿಯಲ್ಲಿ ನಗರ ಭೂಸಾರಿಗೆ ನಿರ್ದೇಶನಾಲಯ ಬೆಂಗಳೂರು, ಬೆಳಗಾವಿ, ತುಮಕೂರು, ಶಿವಮೊಗ್ಗ, ಹುಬ್ಬಳ್ಳಿ-ಧಾರವಾಡ, ದಾವಣಗೆರೆ, ಮಂಗಳೂರು, ಮೈಸೂರು ಮತ್ತು ಕಲಬುರಗಿಯಲ್ಲಿ ಸೈಕಲ್ ಸಾರಿಗೆ ವ್ಯವಸ್ಥೆ ಜಾರಿಗೆ ಇಚ್ಛಿಸಿತ್ತು.

ಏನೆಲ್ಲ ಉಪಯೋಗ?

  1. ಸೈಕ್ಲಿಂಗ್ ನಿಯಮಿತವಾಗಿ ಮಾಡುವುದರಿಂದ ಉಸಿರಾಟವು ಸುಧಾರಿಸುತ್ತದೆ. ಹೃದಯ ಮತ್ತು ಉಸಿರಾಟದ ತೊಂದರೆ ದೂರ.

2. ಸೈಕ್ಲಿಂಗ್ ವೇಗವಾಗಿ ಕೊಬ್ಬನ್ನು ಕರಗಿಸುತ್ತದೆ ಮತ್ತು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.

3. ದಿನಕ್ಕೆ ಕನಿಷ್ಠ 30 ನಿಮಿಷ ಸೈಕ್ಲಿಂಗ್ ಮಾಡುವುದರಿಂದ ಹೃದ್ರೋಗದ ಅಪಾಯ ಶೇಕಡ 50ರಷ್ಟು ಕಡಿಮೆ.

4. ಸೈಕ್ಲಿಂಗ್​ನಿಂದಾಗಿ ದೇಹದ ಬಹುತೇಕ ಎಲ್ಲ ಸ್ನಾಯುಗಳನ್ನು ಕೆಲಸ ಮಾಡುತ್ತವೆ.

5. ದೈಹಿಕ ಮತ್ತು ಮಾನಸಿಕ ಸದೃಢತೆ ಸಾಧ್ಯ.

6. ಸೈಕ್ಲಿಸ್ಟ್​ಗಳಲ್ಲಿ ಚಯಾಪಚಯವು ಸುಧಾರಿಸುತ್ತದೆ. ದಿನವಿಡೀ ಕ್ರಿಯಾಶೀಲರಾಗಿರಲು ಸಾಧ್ಯ.

7. ಸೈಕ್ಲಿಂಗ್​ನಿಂದಾಗಿ ಕೀಲುಗಳು, ಮೊಣಕಾಲುಗಳು ಮತ್ತು ಮೂಳೆಗಳು ಗಟ್ಟಿಯಾಗುತ್ತವೆ.

8. ಸೈಕ್ಲಿಂಗ್ ಒತ್ತಡ ಮತ್ತು ಆತಂಕ ಕಡಿಮೆ ಮಾಡುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಮಧುಮೇಹವನ್ನು ನಿಯಂತ್ರಿಸುತ್ತದೆ.

ಬೈಕ್​ಗಳಿಗೂ ಸಡ್ಡು

ದುಬಾರಿ ಬೈಕ್​ಗಳಿಗೂ ಸವಾಲು ಒಡ್ಡುವಷ್ಟು ತನ್ನ ಬೆಲೆ ಯನ್ನು ಹೆಚ್ಚಿಸಿಕೊಳ್ಳುತ್ತಿವೆ. ಮೂರ್ನಾಲ್ಕು ಸಾವಿರದಿಂದ 6 ಲಕ್ಷ ರೂ. ವರೆಗೂ ಸೈಕಲ್​ಗಳು ಮಾರುಕಟ್ಟೆಯಲ್ಲಿ ಸಿಗುತ್ತಿವೆ. ಇತ್ತೀಚೆಗೆ ವಿದ್ಯುತ್ ಚಾಲಿತ ಸೈಕಲ್​ಗಳು ಹೆಚ್ಚು ಆಕರ್ಷಣೆಗೆ ಒಳಗಾಗುತ್ತಿವೆ. ದ್ವಿಚಕ್ರ ವಾಹನ ಬದಲಿಗೆ ಬ್ಯಾಟರಿ ಆಧಾರಿತ ಸೈಕಲ್ ಬಳಕೆಯಿಂದ ಪೆಟ್ರೋಲ್ ವೆಚ್ಚ ಕಡಿತ, ಟ್ರಾಫಿಕ್ ಜಾಮ್ಂದ ದೂರ ಉಳಿಯಬಹುದು. ಉತ್ತಮ ಆರೋಗ್ಯಕ್ಕೆ ಅನುಕೂಲ ವಾಗುವ ಕಾರಣ ಸವಾರರು ಒಲವು ತೋರುತ್ತಿದ್ದಾರೆ.

ಎರಡು ಶತಮಾನದ ಇತಿಹಾಸ

ಎರಡು ಚಕ್ರದಿಂದ ಶುರುವಾದ ಬೈಸಿಕಲ್ ಇಂದು ವಿಶ್ವ ಸೈಕಲ್ ದಿನ ಆಚರಿಸಿಕೊಳ್ಳುವ ಮಟ್ಟಕ್ಕೆ ಬೆಳೆದು ನಿಂತಿದೆ. ದಿನೇದಿನೆ ತನ್ನ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿದೆ. ಸೈಕಲ್​ಗೆ ಎರಡು ಶತಮಾನದ ಇತಿಹಾಸ ಇದೆ. ಇದನ್ನೇ ಮನಗಂಡ ಅಮೆರಿಕದ ಸಮಾಜಶಾಸ್ತ್ರದ ಪ್ರೊಫೆಸರ್ ಲೆಸ್​ಜೆಕ್ ಸಿಬಿಲ್​ಸ್ಕೈ ಎಂಬುವವರು ‘ಸೈಕಲ್ ಎಲ್ಲರಿಗೂ ಸುಸ್ಥಿರ ಸಾರಿಗೆ’ ಎಂಬ ಧ್ಯೇಯವಾಕ್ಯದೊಂದಿಗೆ ಅಭಿಯಾನ ಶುರು ಮಾಡಿದರು. 2015ರಲ್ಲಿ ವಿಶ್ವಸಂಸ್ಥೆಗೆ ಪತ್ರ ಬರೆದು ‘ವಿಶ್ವ ಸೈಕಲ್ ದಿನಾಚರಣೆ’ಗೆ ಒತ್ತಾಯಿಸಿದರು. 2018ರ ಏಪ್ರಿಲ್ 12ರಂದು ವಿಶ್ವಸಂಸ್ಥೆ ಜೂನ್ 3ರಂದು ‘ವಿಶ್ವ ಸೈಕಲ್ ದಿನ’ ಎಂದು ಘೋಷಣೆ ಮಾಡಿತು. ಇದಕ್ಕೆ 193 ರಾಷ್ಟ್ರಗಳು ಸಹಮತ ನೀಡಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net