

ಬೆಂಗಳೂರು: ಆರ್‌ಸಿಬಿ ತಂಡದ ವಿಜಯೋತ್ಸವದ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಸಂಭವಿಸಿದ ಕಾಲ್ತುಳಿತ, 11 ಜನರ ಸಾವಿನ ದುರ್ಘಟನೆಯನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿ ಆದೇಶಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದರು.
ಪಕ್ಷದ ನಾಯಕರೊಂದಿಗೆ ಬೌರಿಂಗ್, ವೈದೇಹಿ ಆಸ್ಪತ್ರೆಗಳಿಗೆ ಬುಧವಾರ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೂರ್ವ ತಯಾರಿ ಮಾಡಿಕೊಳ್ಳದೆ ಆತುರಾತುರವಾಗಿ ಈ ಕಾರ್ಯಕ್ರಮ ಆಯೋಜಿಸಿದ ಸರ್ಕಾರವೇ ದುರಂತಕ್ಕೆ ಜವಾಬ್ದಾರಿಯಾಗಿದೆ ಎಂದರು.
ವಿಜಯೋತ್ಸವದ ಸಂಭ್ರಮ ಆಚರಿಸುವ ಸಂದರ್ಭದಲ್ಲಿ ಸರ್ಕಾರ ಸ್ವಲ್ಪ ವಿವೇಚನೆಯಿಂದ ನಡೆದುಕೊಳ್ಳಬೇಕಾಗಿತ್ತು. ದೇಶಾದ್ಯಂತ ಗೆಲುವಿನ ಹರ್ಷೋಲ್ಲಾಸ ಬೆಂಗಳೂರು ಸೂತಕದ ಮನೆಯಾಗಿದೆ. ಬ್ಯಾರಿಕೇಡ್ ಬಳಿ ಹೆಣ್ಮಕ್ಕಳು ಪರದಾಡುತ್ತಿದ್ದರೆ, ವಿರಾಟ್ ಕೊಹ್ಲಿ ಕೂಡ ಬೇಸರದಿಂದ ಬಸ್ ಹತ್ತಿ ಹೊರಟರು ಎಂದು ಬಿ.ವೈ.ವಿಜಯೇಂದ್ರ ನೋವು ವ್ಯಕ್ತಪಡಿಸಿದರು.
ವಿಧಾನಸೌಧ ಮಹಾದ್ವಾರದ ಮೆಟ್ಟಿಲು ಮೇಲೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಿಎಂ, ರಾಜಕಾರಣಿ, ಅಧಿಕಾರಿಗಳ ಮಕ್ಕಳು ಆಟೋಗ್ರ್ಾ ಪಡೆಯಲು ಹೋಗಿದ್ದರು. ವೇದಿಕೆ ಮೇಲೂ ನೂಕುನುಗ್ಗಲು ಉಂಟಾಗಿದ್ದರತ್ತ ಗಮನಸೆಳೆದರು.
ವಿಧಾನಸೌಧ ಮುಂದೆ ಜನಸಂದಣಿ ನಿಯಂತ್ರಣ ಅಸಾಧ್ಯವೆಂದು ಪೊಲೀಸರು ಅನುಮತಿ ಕೂಡ ಕೊಟ್ಟಿದ್ದಿಲ್ಲ. ಪೊಲೀಸ್ ಹಿರಿಯ ಅಧಿಕಾರಿಗಳು ಹೇಳಿದರೂ ಕಾರ್ಯಕ್ರಮ ಆಗಲೇಬೇಕು ಎಂದು ಸಿಎಂ ಒತ್ತಡ ಹೇರಿದ್ದಾರೆ ಎಂದು ಆರೋಪಿಸಿದರು.
ಸರ್ಕಾರದ ಬೇಜವಾಬ್ದಾರಿತನ, ಪ್ರಚಾರದ ಹುಚ್ಚಿನ ಪರಿಣಾಮವಾಗಿ ಇದೆಲ್ಲ ನಡೆದಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿಯೂ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿರಲಿಲ್ಲ. ಇಷ್ಟೆಲ್ಲ ಅನಾಹುತ, ಸಾವುಗಳಿಗೆ ಹೊಣೆ ಯಾರೆಂದು ಸಿಎಂ ಸಿದ್ದರಾಮಯ್ಯ ನಿರ್ಧರಿಸಲಿ ಎಂದು ಬಿ.ವೈ.ವಿಜಯೇಂದ್ರ ಒತ್ತಾಯಿಸಿದರು.