

ಬೆಂಗಳೂರು: ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಕುರಿತು ನ್ಯಾಯಾಂಗ ತನಿಖೆ ಆಗಬೇಕು. ಅದಕ್ಕೂ ಮೊದಲು ಪ್ರಿಯಾಂಕ್ ಖರ್ಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ N Ravikumar ಆಗ್ರಹಿಸಿದ್ದಾರೆ.
ಬಿಜೆಪಿ ರಾಜ್ಯ ಕಚೇರಿಯಲ್ಲಿ ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಣ್ಮಕ್ಕಳ ದುರ್ಬಳಕೆಯ ಸಂಚು ಸೇರಿದಂತೆ ಅನೇಕ ವಿಷಯಗಳು ಸಚಿನ್ ಡೆತ್ ನೋಟಿನಲ್ಲಿವೆ. ತನಿಖೆ ನಡೆಯಲೆಂದು ಮುಂಚಿತವಾಗಿ ತಿಳಿಸಿದರೆ ಬಚಾವ್ ಆಗಬಹುದೆಂದು ಪ್ರಿಯಾಂಕ್ ಖರ್ಗೆ ಈ ಕುರಿತು ಹೇಳಿಕೆ ನೀಡಿದ್ದಾರೆ ಎಂದು ಛೇಡಿಸಿದರು.
ಈಶ್ವರಪ್ಪನವರ ರಾಜೀನಾಮೆ ಪಡೆದ ದಾರಿಯಲ್ಲೇ ರಾಜೀನಾಮೆ ಕೊಡಬೇಕು; ನಿಮ್ಮ ಪಾತ್ರ ಏನೂ ಇಲ್ಲ ಎಂದು ಗೊತ್ತಾದರೆ ನೀವು ಮುಖ್ಯಮಂತ್ರಿಯಾದರೂ ನಮ್ಮ ಅಭ್ಯಂತರವಿಲ್ಲ. ನಾವು ಸುಲಭವಾಗಿ ಬಿಡುವುದಿಲ್ಲ; ಹೋರಾಟವನ್ನು ಮುಂದುವರೆಸುತ್ತೇವೆ ಎಂದು ಎನ್.ರವಿಕುಮಾರ್ ಗುಡುಗಿದರು.
ವಿಪಕ್ಷ ನಾಯಕರು, ನಮ್ಮ ಕಾರ್ಯಕರ್ತರ ಮೇಲೆ ಸುಲಭವಾಗಿ ಎಫ್‍ಐಆರ್ ಆಗುತ್ತಿದೆ. ಆದರೆ, ವಿಪಕ್ಷದವರು ಆಡಳಿತ ಪಕ್ಷದವರ ಮೇಲೆ ದೂರು ನೀಡಿದರೆ, ಎಫ್‍ಐಆರ್ ಆಗುತ್ತಿಲ್ಲ. ಸಿ.ಟಿ.ರವಿಯವರು ಕೊಟ್ಟ ದೂರಿನ ಎಫ್‍ಐಆರ್ ಮಾಡಿಲ್ಲ; ಎಫ್‍ಐಆರ್ ಮಾಡದೆ ಅವರನ್ನು ರಾತ್ರಿಯೆಲ್ಲ ಸುತ್ತಾಡಿಸಿದ್ದಾರೆ. ಕಲಬುರಗಿಯಲ್ಲಿ ಕೂಡ ಎಫ್‍ಐಆರ್ ಮಾಡಿಲ್ಲ; ಕೋರ್ಟ್ ನಿರ್ದೇಶನ ನೀಡಬೇಕಾಯಿತು ಎಂದು ಗಮನ ಸೆಳೆದರು.
ರಿಪಬ್ಲಿಕ್ ಆಫ್ ಕಲಬುರಗಿಯಲ್ಲಿ ಪ್ರಿಯಾಂಕ್ ಖರ್ಗೆ ಹೇಳದೆ ಒಂದು ಹುಲ್ಲು ಕಡ್ಡಿಯು ಅಲುಗಾಡುವುದಿಲ್ಲ. ಪ್ರಿಯಾಂಕ್ ಅವರನ್ನು ಸಚಿನ್ ಭೇಟಿಯಾಗಿದ್ದಾರೆ. ಟೆಂಡರ್, ಗುತ್ತಿಗೆ ವಿಚಾರ ಬೇರೆ ಇನ್ನೇನಿರಲು ಸಾಧ್ಯವೆಂದು ಕೇಳಿದರು.
ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿಯು ಭಾನುವಾರ ಭಾಲ್ಕಿ ತಾಲೂಕಿನ ತೂಗಾಂವ್ ಕಟ್ಟೆಗೆ ಭೇಟಿ ಕೊಡಲಿದೆ. ನೊಂದ ಕುಟುಂಬದವರಿಗೆ ಸಾಂತ್ವನ ಹೇಳಿ ವಸ್ತುಸ್ಥಿತಿ ವಿವರ ಪಡೆಯಲಿದೆ. ನಂತರ ಹೋರಾಟದ ಬಗ್ಗೆ ತೀರ್ಮಾನಸಲಿದ್ದೇವೆ ಎಂದು ತಿಳಿಸಿದರು.
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ನಾನು (ರವಿಕುಮಾರ್), ಶಾಸಕರಾದ ಬಸವರಾಜ ಮತ್ತಿಮೂಡ, ಶೈಲೇಂದ್ರ ಬೆಲ್ದಾಳೆ, ಶರಣು ಸಲಗಾರ್, ಸಿದ್ದು ಪಾಟೀಲ್, ಬೀದರ್ ಜಿಲ್ಲಾ ಅಧ್ಯಕ್ಷ ಸೋಮನಾಥ ಪಾಟೀಲ್, ಗುಲ್ಬರ್ಗ ಜಿಲ್ಲಾ ಅಧ್ಯಕ್ಷರಾದ ಚಂದು ಪಾಟೀಲ್, ಶಿವರಾಜ್ ಪಾಟೀಲ್ ಅವರು ಈ ಸಮಿತಿಯಲ್ಲಿದ್ದಾರೆ.
ರಾಜ್ಯದಲ್ಲಿ ಸರ್ವಾಧಿಕಾರ ತಾಂಡವವಾಡುತ್ತಿದೆ. ಸಿಎಂ ಸಿದ್ದರಾಮಯ್ಯನವರು ಪ್ರಜಾಪ್ರಭುತ್ವವಾದಿ, ಸಮಾಜವಾದಿ ಎಂದು ಹೇಳುತ್ತಿದ್ದು, ಅದೆಲ್ಲ ಬೋಗಸ್, ಬೂಸಾ ಎಂದು ಟೀಕಿಸಿದರು.
ಸಚಿನ್ ಬರೆದ ಏಳು ಪುಟಗಳ ಡೆತ್ ನೋಟ್ ಇಂಚಿಂಚೂ ಮಾಹಿತಿ ಜನರ ಮುಂದಿಡುತ್ತೇವೆ. ಅಧಿಕಾರಿಗಳು, ಗುತ್ತಿಗೆದಾರರು ಆತ್ಮಹತ್ಯೆಗೆ ಶರಣಾದರು. ಬಾಣಂತಿಯರು ಸಾಯುತ್ತಿದ್ದಾರೆ. ಅಭಿವೃದ್ಧಿ ನಿಂತ ನೀರಾಗಿ ಕಮಿಷನ್ ದಂಧೆ ಜೋರಾಗಿದೆ. ಈ ಸರ್ಕಾರಕ್ಕೆ ಕಿಂಚಿತ್ ಕಾಳಜಿ, ಮಾನ ಮರ್ಯಾದೆ ಇದೆಯೆ ? ಎಂದು ಎನ್.ರವಿಕುಮಾರ್ ಏರಿದ ಧ್ವನಿಯಲ್ಲಿ ಕೇಳಿದರು.