ಏಜೆಂಟ್ ರವಿನಂದನ್‌ಗೆ ನ್ಯಾಯಾಂಗ ಬಂಧನ : ಅ.23 ವರೆಗೆ ಕೋರ್ಟ್ ಕಸ್ಟಡಿಗೆ ಆರೋಪಿ

Crime Logo
Published on

ಬೆಂಗಳೂರು: ಭ್ರಷ್ಟಾಚಾರ ಆರೋಪದಲ್ಲಿ ಲೋಕಾಯುಕ್ತದಿಂದ ಬಂಧನಕ್ಕೊಳಗಾಗಿದ್ದ ಯಶವಂತಪುರ ಪ್ರಾದೇಶಿಕ ಸಾರಿಗೆ ಕಚೇರಿ ಏಜೆಂಟ್ ರವಿನಂದನ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಬಂಧಿತ ಏಜೆಂಟ್ ರವಿನಂದನ್‌ನನ್ನು ಗುರುವಾರ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಆರೋಪಿಯ ವಿಚಾರಣೆ ನಡೆಸಿದ ಕೋರ್ಟ್ ಅ.23 ವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.


ಯಶವಂತಪುರ ಆರ್‌ಟಿಒದ ಐವರು ಅಧಿಕಾರಿ, ಸಿಬ್ಬಂದಿಯನ್ನು ಆರೋಪಿಗಳಾಗಿ ಸೇರಿಸಲು ಅರ್ಜಿ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಬ್ಬ ಎಆರ್‌ಟಿಒ, ಇಬ್ಬರು ಸೂಪರಿಂಟೆಂಡೆಂಟ್ ಮತ್ತು ಇಬ್ಬರು ಕೇಸ್ ವರ್ಕರ್‌ಗಳು ಸೇರಿ ಒಟ್ಟು ಐವರನ್ನು ಆರೋಪಿಗಳನ್ನಾಗಿ ಮಾಡಲು ಲೋಕಾಯುಕ್ತ ನ್ಯಾಯಮೂರ್ತಿಗಳ ಅನುಮತಿ ಕೇಳಲಾಗಿದೆ. ಲೋಕಾಯುಕ್ತ ಡಿವೈಎಸ್‌ಪಿ ಬಸವರಾಜು ಮಗದುಮ್ ನೇತೃತ್ವದಲ್ಲಿ ತನಿಖೆ ಚುರುಕುಗೊಂಡಿದೆ. ಆರೋಪಿಗಳಿಂದ ಹಲವು ದಾಖಲಾತಿಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಐವರು ಆರೋಪಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಜತೆಗೆ ಈ ಐವರನ್ನು ಪ್ರಕರಣದಲ್ಲಿ ಆರೋಪಿಗಳನ್ನಾಗಿ ಸೇರಿಸಲು ಲೋಕಾಯುಕ್ತರಿಗೆ ಅನುಮತಿ ಕೇಳಲಾಗಿದೆ.


ಬಂಧಿತ ರವಿನಂದನ್ ನಾನ್ ಟ್ರಾನ್ಸ್‌ಪೋರ್ಟ್ ವಿಭಾಗದಲ್ಲಿ ವಾಹನಗಳ ನೋಂದಣಿ ಮಾಡಿಸುತ್ತಿದ್ದ. ಸಬ್ ಏಜೆಂಟ್‌ಗಳಿಗೆ ಈತನೇ ಮುಖ್ಯಸ್ಥ. ಪ್ರತಿನಿತ್ಯ ೧೦೦ ರಿಂದ ೧೫೦ ಹೊಸ ವಾಹನಗಳನ್ನು ನೋಂದಣಿ ಮಾಡಿಸುತ್ತಿದ್ದ. ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಈತನನ್ನು ಬಂಧಿಸಿ ವಿಚಾರಣೆ ನಡೆಸಿದ ವೇಳೆ ಎಆರ್‌ಟಿಒ, ಕೆಲ ಕೇಸ್ ವರ್ಕರ್‌ಗಳು ಹಾಗೂ ಸೂಪರಿಂಟೆಂಡೆಂಟ್‌ಗಳಿಗೆ ಕಮೀಷನ್ ಕೊಡುತ್ತಿದ್ದಾಗಿ ಅವರ ಹೆಸರನ್ನು ಆರೋಪಿ ರವಿನಂದನ್ ಹೇಳಿದ್ದ. ಹೀಗಾಗಿ ಅವರನ್ನು ವಿಚಾರಣೆ ನಡೆಸಿ ಅವರ ಹೇಳಿಕೆಗಳನ್ನು ದಾಖಲಿಸಿಕೊಂಡು ಪ್ರಕರಣದ ತನಿಖೆ ಮುಂದುವರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net